ತುಂಬಿರೋ ಕೆರೆ, ಖುಷಿಯಿಂದಿರೋ ಭಕ್ತರು, ನಾಮುಂದು ತಾಮುಂದು ಅಂತ ವೇಗವಾಗಿ ಕೆರೆಯತ್ತ ಧಾವಿಸ್ತರೋ ಗ್ರಾಮಸ್ಥರು. ಒಂದಲ್ಲ, ಎರಡಲ್ಲ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಮುಖದಲ್ಲೂ ಮನದಲ್ಲೂ ತುಂಬಿ ತುಳುಕುತ್ತಿರೋ ಮಂದಹಾಸ. ಅಷ್ಟಕ್ಕೂ ಈ ಕೆರೆ (Badami Lake) ತುಂಬಿರೋದನ್ನ ನೋಡೋಕೆ ಜನ ಯಾಕೆ ಹೀಗೆ ಹಿಂಡು ಹಿಂಡಾಗಿ ಬರ್ತಿದ್ದಾರೆ ಅನ್ನೋದ್ರ ಹಿಂದಿದೆ ಭಾರೀ ಕುತೂಹಲ! ಹೌದು, ಇದು ಅಂತಿಂತ ಕೆರೆಯಲ್ಲ. ದೂರದಿಂದ ನೋಡೋಕೆ ಥೇಟ್ ಕಾಶಿ ವಿಶ್ವನಾಥ (Kashi Vishwanath Temple) ದೇಗುಲದ ಆವರಣದಲ್ಲಿ ಹರಿಯುವ ಗಂಗೆಯೇ. ಬಾಗಲಕೋಟೆಯ ಬಾದಾಮಿ ಬನಶಂಕರಿ ದೇವಸ್ಥಾನದ ಮುಂಭಾಗದಲ್ಲಿರುವ ಈ ಕೆರೆಯನ್ನ ಹರಿದ್ರಾ ತೀರ್ಥ (Haridra Thirtha) ಎಂದೇ ಕರೆಯುತ್ತಾರೆ.
ಕಳೆದ ಹತ್ತು ವರ್ಷಗಳಿಂದ ಈ ಹರಿದ್ರಾ ತೀರ್ಥ ಸಂಪೂರ್ಣವಾಗಿ ಬತ್ತಿಹೋಗಿತ್ತು. ಆದ್ರೆ ಇತ್ತೀಚೆಗೆ ಸುರಿದ ಮಳೆಯಿಂದ ಹರಿದ್ರಾ ತೀರ್ಥ ತುಂಬಿದೆ. ಮಲಪ್ರಭಾ ನೀರೂ ತೀರ್ಥಕ್ಕೆ ಸೇರಿದೆ. ಎಲ್ಲೆಲ್ಲೂ ಮತ್ತೆ ಜೀವಕಳೆ ಚಿಗುರಿದ್ದು ಭಕ್ತರಲ್ಲಿ ಸಂತಸ ಮೂಡಿಸಿದೆ.
ಬಾದಾಮಿ ಚಾಲುಕ್ಯರು ನಿರ್ಮಿಸಿದ್ದಂತೆ
ಇಲ್ಲಿರುವ ಜಗನ್ಮಾತೆ ಬನಶಂಕರಿ ದೇವಸ್ಥಾನಕ್ಕೆ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದ ಭಕ್ತರು ಭೇಟಿ ನೀಡುತ್ತಾರೆ. ಮೂಲ ದೇವಾಲಯವನ್ನು 7 ನೇ ಶತಮಾನದ ಬಾದಾಮಿ ಚಾಲುಕ್ಯ ರಾಜರು ನಿರ್ಮಿಸಿದ್ದರಂತೆ. ಇಲ್ಲಿಗೆ ಆಗಮಿಸೋ ಭಕ್ತರು ಈ ಹರಿದ್ರಾ ತೀರ್ಥದಲ್ಲಿ ಇಳಿದು ಸ್ನಾನ ಮಾಡ್ತಾರೆ. ಇನ್ನೂ ಕೆಲವರು ಕೈಕಾಲು ಮುಖ ತೊಳೆದುಕೊಂಡು ಹೋಗುತ್ತಾರೆ.
ಮಕ್ಕಳಾಗದ ಮಹಿಳೆಯರಿಂದ ವಿಶೇಷ ಹರಕೆ
ಇನ್ನೊಂದು ವಿಶೇಷವೆಂದರೆ ಮಕ್ಕಳಾಗದ ಮಹಿಳೆಯರು ಈ ಪುಣ್ಯ ಸ್ಥಳಕ್ಕೆ ಬಂದು ದೇವಿಯ ಬಳಿ ಹರಕೆ ಕಟ್ಟಿಕೊಳ್ತಾರೆ. ಹರಕೆ ಈಡೇರಿದ ಬಳಿಕೆ ಮತ್ತೆ ಕುಟುಂಬಸ್ಥರೊಡನೆ ಬಂದು ಈ ತೀರ್ಥದಲ್ಲಿ ತೊಟ್ಟಿಲು ಸೇವೆ ಮಾಡ್ತಾರೆ. ಮಂಗಳವಾರ ಅಥವಾ ಶುಕ್ರವಾರವಂತೂ ಅಸಂಖ್ಯಾತ ಭಕ್ತರು ಇಲ್ಲಿಗೆ ಆಗಮಿಸ್ತಾರೆ.
ಯಾವಾಗ ಬಂದ್ರೆ ಒಳ್ಳೇದು?
ಬಾದಾಮಿಯ ಈ ಪವಿತ್ರ ಕೆರೆಗೆ ನೀವು ವರ್ಷದ ಯಾವುದೇ ಸಮಯದಲ್ಲಾದರೂ ಭೇಟಿ ನೀಡಬಹುದು. ಬರುವ ಜನವರಿ ತಿಂಗಳ ಹುಣ್ಣಿಮೆಯ ದಿನದಂದು ಈ ದೇವಿಯ ಜಾತ್ರೆ ನಡೆಯುತ್ತೆ. ಈ ಜಾತ್ರೆಯ ಸಮಯದಲ್ಲಿ ಭೇಟಿ ನೀಡಿದರೆ ನೀವು ಜಾತ್ರೆಯ ವೈಭವವನ್ನೂ ಕಣ್ತುಂಬಿಸಿಕೊಳ್ಳಬಹುದು. ಜೊತೆಗೆ ಹರಕೆಯನ್ನ ಕಟ್ಟಿಕೊಳ್ಳಬಹುದು.
ಈ ದೇವಾಲಯಕ್ಕೆ ಬರೋದು ಹೇಗೆ?
ಈ ದೇವಾಲಯವು ಚಾಲುಕ್ಯರ ನಾಡು ಬಾದಾಮಿ ಪಟ್ಟಣದಿಂದ 5 ಕಿಲೋ ಮೀಟರ್ ದೂರದಲ್ಲಿದೆ. ಬಾದಾಮಿಯಿಂದ ಬನಶಂಕರಿ ದೇವಸ್ಥಾನವನ್ನು ತಲುಪಲು ಬಸ್, ಆಟೋರಿಕ್ಷಾ ಸೌಲಭ್ಯವು ಇದೆ. ಬೆಂಗಳೂರು ಅಥವಾ ಹುಬ್ಬಳ್ಳಿಯಂತಹ ಪ್ರಮುಖ ನಗರಗಳಿಂದ ಬರುವವರು ಇಲ್ಲಿಗೆ ರೈಲ್ವೆ ಮೂಲಕವು ಬರಬಹುದಾಗಿದೆ. ಒಟ್ಟಿನಲ್ಲಿ ಹರಿದ್ರಾ ತೀರ್ಥವು ಒಂದು ವಿಶಿಷ್ಟ ಅನುಭವ ನೀಡುವ ಕ್ಷೇತ್ರ ಅನ್ನೋದರಲ್ಲಿ ತಪ್ಪಿಲ್ಲ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ