ಬಾಗಲಕೋಟೆ: ಮದುವೆ ಇರ್ಲಿ, ಕೃಷಿ ಬಿತ್ತನೆ ಇರ್ಲಿ, ಅಷ್ಟೇ ಯಾಕೆ ಚುನಾವಣೆಯ ನಾಮಪತ್ರ ಸಲ್ಲಿಕೆ ಇರ್ಲಿ ಹೀಗೆ ಏನೇ ಇದ್ರೂ ಈ ದೇಗುಲದಿಂದಲೇ ಅದೆಲ್ಲಕ್ಕೂ ಶುಭ ಮುಹೂರ್ತ. ಅದೆಂತಹದ್ದೇ ಸಮಸ್ಯೆಗಳು ಇದ್ರೂ ಈ ದೇಗುಲಕ್ಕೆ ಬಂದ್ರೆ ಅದೆಲ್ಲವೂ ಮಾಯ. ತಿರುಪತಿ ತಿಮ್ಮಪ್ಪನ (Tirupati Thimmappa) ಅವತಾರ, ಜನರ ಪಾಲಿನ ಆರಾಧ್ಯ ದೇವರಾಗಿರುವ ಆಂಜನೇಯನೇ (Lord Anjaneya) ಇಲ್ಲಿಯ ಕಾರಣಿಕ ಶಕ್ತಿ. ಅಷ್ಟಕ್ಕೂ ಈ ಕ್ಷೇತ್ರ ಯಾವುದು ಅಂತೀರ? ಈ ಸ್ಟೋರಿ ನೋಡಿ.
ಯೆಸ್, ಇದು ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ಆಂಜನೇಯ ಗುಡಿ. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ತಿರುಪತಿ ತಿಮ್ಮಪ್ಪನ ಅವತಾರವೆಂದೇ ಈ ದೇವರನ್ನ ನಂಬಲಾಗಿದೆ. ಜನ ಯಾವುದೇ ಸಂಕಷ್ಟ ಬಂದರೂ ತುಳಸಿಗೇರಿಯ ಆಂಜನೇಯನ ಗುಡಿಗೆ ಬಂದು ಪ್ರಾರ್ಥಿಸೋದು ರೂಢಿ.
ತುಳಸಿ ಗಿಡಗಳೇ ಹೆಚ್ಚಿದ ಪ್ರದೇಶ
ತುಳಸಿಗೇರಿ ಬೆಟ್ಟ ಪ್ರದೇಶ, ಇಲ್ಲಿ ಮೊದಲು ತುಳಸಿ ಗಿಡಗಳು ಅಪಾರ ಪ್ರಮಾಣದಲ್ಲಿದ್ದವಂತೆ. ನೀರ ಬೂದಿಹಾಳದ ದೇಸಾಯರು ತಿರುಪತಿ ತಿಮ್ಮಪ್ಪನ ಭಕ್ತರು. ಇವರು ಪ್ರತಿ ವರ್ಷ ವಿಜಯದಶಮಿ ಸಂದರ್ಭ ತಿರುಪತಿಗೆ ಚಿನ್ನ, ಬೆಳ್ಳಿನಾಣ್ಯಗಳನ್ನು ಅಶ್ವಗಳ ಮೇಲೆ ಹೇರಿಕೊಂಡು ಅಲ್ಲಿ ನಡೆಯುವ ಬ್ರಹ್ಮೋತ್ಸವಕ್ಕೆ ಅರ್ಪಿಸುವ ಪರಂಪರೆ ಹೊಂದಿದ್ದರಂತೆ.
ಕನಸಲ್ಲಿ ದರ್ಶನ ಭಾಗ್ಯ!
ಒಮ್ಮೆ ಕನಸಿನಲ್ಲಿ ದೇಸಾಯಿ ಅವರಿಗೆ ತಿಮ್ಮಪ್ಪ ಕಾಣಿಸಿಕೊಂಡು, 'ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಇಷ್ಟು ದೂರದಿಂದ ಆಗಮಿಸುವ ನಿನಗೆ ಇನ್ನು ನಿಮ್ಮೂರಲ್ಲೇ ದರ್ಶನ ಭಾಗ್ಯ ನೀಡುತ್ತೇನೆ' ಎಂದಿದ್ದನಂತೆ.
ಹುತ್ತದ ಒಳಗೆ ಆಂಜನೇಯನ ಉದ್ಭವ ಮೂರ್ತಿ
ತಿರುಪತಿ ತಿಮ್ಮಪ್ಪನ ಆ ಕನಸು ನೆನಪಿಸಿಕೊಂಡೇ ಆ ಸ್ಥಳಕ್ಕೆ ಬಂದ ದೇಸಾಯರಿಗೆ ಅಚ್ಚರಿ ಕಾದಿತ್ತು. ಹುತ್ತದ ಒಳಗೆ ಆಂಜನೇಯನ ಉದ್ಭವ ಮೂರ್ತಿ ಗೋಚರವಾಯಿತು. ಇದು ತಿರುಪತಿ ತಿಮ್ಮಪ್ಪನ ಪ್ರತಿರೂಪ ಎಂದು ತಿಳಿದು ಕ್ರಿ.ಶ. 1102ರಲ್ಲಿ ಈ ತಾಣದಲ್ಲಿ ಹನುಮಾನ್ ಮಂದಿರ ನಿರ್ಮಿಸಿದರಂತೆ.
ಈ ರೀತಿ ತುಳಸಿಗೇರಿ ಹನುಮಪ್ಪ ಆ ಭಾಗದ ಭಕ್ತರಿಗೆಲ್ಲ ತಿರುಪತಿ ತಿಮ್ಮಪ್ಪನ ಪ್ರತಿರೂಪವೇ ಆಗಿದ್ದಾನೆ. ಇಂಥ ವೈಶಿಷ್ಟ್ಯಪೂರ್ಣ ಹಿನ್ನೆಲೆಯಿರುವ ತುಳಸಿಗೇರಿಯ ಆಂಜನೇಯ ದೇಗುಲ ಇಂದು ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಧಾರ್ಮಿಕ ಕೇಂದ್ರವಾಗಿಯೂ ಜನರನ್ನು ಆಕರ್ಷಿಸುತ್ತಿದೆ. ಯಾವಾಗಲೂ ಭಕ್ತರಿಂದ ಕೂಡಿರುತ್ತದೆ.
ಇದನ್ನೂ ಓದಿ: Success Story: ವಿಜಯಪುರದಲ್ಲಿ ರಾಜಸ್ಥಾನಿ ಮಹಿಳೆಯ ಸಕ್ಸಸ್, ಚಿಪ್ಸ್-ಹಪ್ಪಳ ಮಾರ್ಕೆಟ್ಗೆ ಇವ್ರೇ ಕ್ವೀನ್!
ರೈತರ ಬಿತ್ತನೆ ಸಮಯ, ಮಳೆಯ ಮುನ್ಸೂಚನೆ, ಬೆಳೆ ಕೊಯ್ಲು, ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡುವ ಸಮಯ, ಗಂಡನ ಮನೆಗೆ ಮಗಳನ್ನು ಕಳಿಸಲು, ಹೊಸ ಮನೆಗೆ ಪಾಯ ತೋಡಲು, ರೋಗ ರುಜಿನಗಳಿಗೆ ಹೀಗೆ ಎಲ್ಲ ಶುಭ ಮುಹೂರ್ತಗಳಿಗೂ ಹಾಗೂ ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳಿಗೆ ಭಕ್ತರು ಈ ಆಂಜನೇಯನ ಮೊರೆ ಹೋಗುತ್ತಾರೆ.
ಹೂವು ಉದುರಿಸುವ ಮೂಲಕ ಶಕುನ
ದೂರ ದೂರದಿಂದ ಇಲ್ಲಿಗೆ ಬರುವ ಭಕ್ತರು ಅರ್ಚಕರ ಮೂಲಕ ದೇವರ ಮೂರ್ತಿಗೆ ಕೌಲು ಕಟ್ಟುವುದರ ಮೂಲಕ ಬೇಡಿಕೊಳ್ಳುತ್ತಾರೆ. ಆಂಜನೇಯ ತನ್ನ ಬಲಭಾಗದಿಂದ ಹೂವು ಉದುರಿಸುವುದರ ಮೂಲಕ ಭಕ್ತರಿಗೆ ವರ ನೀಡಿದರೆ ಅದು ಶುಭಶಕುನ ಎಂದು, ಎಡಭಾಗದಿಂದ ನೀಡಿದರೆ ಅದು ಅಪಶಕುನ ಎಂದು ತಿಳಿದುಕೊಳ್ಳಲಾಗುತ್ತೆ.
ಇದನ್ನೂ ಓದಿ: Business Idea: ವೀಳ್ಯದೆಲೆ ಬೆಳೆದು ವರ್ಷಕ್ಕೆ 15 ಲಕ್ಷ ಸಂಪಾದನೆ! ವಿಜಯಪುರದ ಈ ರೈತನ ಸಕ್ಸಸ್ ಕಥೆ ಕೇಳಿ
ಒಟ್ಟಿನಲ್ಲಿ ತಿರುಪತಿ ತಿಮ್ಮಪ್ಪನ ಅವತಾರ ರೂಪ ತುಳಸಿಗೇರಿಯ ಆಂಜನೇಯನು ಭಕ್ತರ ಪಾಲಿನ ಆರಾಧ್ಯ ದೈವವಾಗಿ ಇಂದಿಗೂ ಮನೆಮಾತಾಗಿದ್ದಾನೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ