ವಿಜಯಪುರ: ದಿನವಿಡೀ ಸಂಭ್ರಮ, ಸಡಗರಕ್ಕೆ ಸಾಕ್ಷಿಯಾಯಿತು ಗುಮ್ಮಟ ನಗರಿ. ಭಕ್ತರ ಭಕ್ತಿ ಪರಾಕಾಷ್ಠೆ, ಪಲ್ಲಕ್ಕಿ ಉತ್ಸವ, ರಥೋತ್ಸವದ (Ratotsav) ಜೊತೆಗೆ ದೇವರ ವಿಶೇಷ ಪೂಜೆ ಪುನಸ್ಕಾರ. ಹೀಗೆ ವಿಶೇಷ ನಂಬಿಕೆ, ಆಚರಣೆಗಳೊಂದಿಗೆ ಶ್ರೀರಾಮಾವಧೂತ ಮುತ್ಯಾನ ಜಾತ್ರೆ (Mutyana Jatre) ಭಾರೀ ಅದ್ದೂರಿಯಾಗಿ ನಡೆಯಿತು.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಪ್ರಸಿದ್ಧ ದೇಗುಲ ತಡಲಗಿ ಗ್ರಾಮದ ಶ್ರೀ ರಾಮಾವಧೂತ ಮುತ್ಯಾನ ಜಾತ್ರೆಯು ಸಾವಿರಾರು ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಮುತ್ಯಾನ ಕೃರ್ತೃ ಗದ್ದುಗೆಗೆ ಹೂಮಾಲೆ ಹಾಕಿ ತೆಂಗಿನ ಕಾಯಿ ಒಡೆದು ವಿಶೇಷ ಪೂಜೆಯನ್ನ ನೆರವೇರಿಸಲಾಯಿತು.
ನಾನಾ ಕೈಂಕರ್ಯಗಳ ಸೇವೆ
ತಡಲಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರು ಪಲ್ಲಕ್ಕಿ ಹೊತ್ತು ಸಾಗಿದರೆ, ಮಹಿಳೆಯರು ಪೂರ್ಣ ಕುಂಭ ಮತ್ತು ಕಳಸಾರತಿ ಹಿಡಿದು ದಾರಿ ಉದ್ದಕ್ಕೂ ಸಾಗಿದರು. ಅಲ್ಲದೇ ದೇವರ ಮೂರ್ತಿಗೆ ಮಹಾ ಮಂಗಳಾರತಿ, ಕಾಕಡಾರತಿ ಸೇರಿದಂತೆ ನಾನಾ ಕೈಂಕರ್ಯಗಳು ಜರುಗಿದವು.
ಫೋಟೋ ಇರಿಸುವಂತಿಲ್ಲ!
ಇನ್ನು ಗ್ರಾಮದ ಸುತ್ತಮುತ್ತಲಿನ ಭಕ್ತರು ದೇವಸ್ಥಾನದ ಗೋಪುರಕ್ಕೆ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನ ಮಾಡಿಸಿದ್ದು ಎಲ್ಲರ ಗಮನ ಸೆಳೆಯಿತು. ಅಚ್ಚರಿ ಅಂದ್ರೆ, ಈ ಗ್ರಾಮದ ಭಕ್ತರ ಮನೆ ಮನೆಗಳಲ್ಲಿ ಯಾರೂ ದೇವರ ಪೋಟೋಗಳನ್ನ ಇರಿಸುವಂತಿಲ್ಲ. ಅಷ್ಟೇ ಅಲ್ದೇ, ದೇವಸ್ಥಾನದಲ್ಲಿರುವ ಗರ್ಭಗುಡಿ ಹಾಗೂ ಗದ್ದುಗೆ ಫೋಟೋಗಳನ್ನು ಕೂಡಾ ಯಾರೂ ತೆಗೆಯುವಂತಿಲ್ಲ. ಈ ಆದೇಶವನ್ನ ಮೀರಿ ಯಾರಾದರೂ ಭಕ್ತರು ಚಿತ್ರೀಕರಣ ನಡೆಸಿದರೆ ಅಂತಹವರಿಗೆ ಕೆಡಕಾಗುತ್ತವೆ ಎಂಬುವುದು ಇಲ್ಲಿನ ಭಕ್ತರ ನಂಬಿಕೆ.
ಇದನ್ನೂ ಓದಿ: Uttara Karnataka Rain Alert: ಗಮನಿಸಿ, ಈ ಜಿಲ್ಲೆಗಳಲ್ಲಿ ಇಂದೇ ಆಲಿಕಲ್ಲು ಮಳೆ ಸಾಧ್ಯತೆ
ಅದ್ಧೂರಿ ರಥೋತ್ಸವ
ಇನ್ನು ಜಾತ್ರೋತ್ಸವ ನಿಮಿತ್ತ ಸಂಜೆಯಾಗುತ್ತಿದ್ದಂತೆ ಕೊಲ್ಹಾರ, ಬಸವನಬಾಗೇವಾಡಿ, ನಿಡಗುಂದಿ, ತೆಲಗಿ, ಬಾಗಾನಗರ, ಸಿದ್ದನಾಥ, ಗಣಿ, ಚಿಮ್ಮಲಗಿ ಸೇರಿದಂತೆ ನಾನಾ ಭಾಗದ ಭಕ್ತರು ಇಲ್ಲಿ ನೆರದಿದ್ದರು. ಇಲ್ಲಿನ ಭಕ್ತರಾದ ಪ್ರಕಾಶ ಇಕ್ಕಡಿ ಅವರು ರಥೋತ್ಸವಕ್ಕೆ ಹೂವಿನ ಅಲಂಕಾರ ಮಾಡಿಸಿದ್ದು ಜನಮನ ಸೆಳೆಯಿತು. ರಥೋತ್ಸವಕ್ಕೆ ಸಾಧು ಸಂತರು ನಾನಾ ರಾಜ್ಯದಿಂದ ಆಗಮಿಸಿ ಭಕ್ತಿಭಾವ ಮೆರೆದರು.
ಇದನ್ನೂ ಓದಿ: Success Story: ಶಾವಿಗೆ ಬ್ಯುಸಿನೆಸ್ ಮಾಡಿ ದಿನಕ್ಕೆ 6 ಸಾವಿರ ಆದಾಯ, ಕೆಲಸ ಸಿಗ್ತಿಲ್ಲ ಅನ್ನೋರಿಗೆ ಇವ್ರೇ ರೋಲ್ ಮಾಡೆಲ್
ಬಳಿಕ ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರ ನಡುವೆ ಅದ್ಧೂರಿ ರಥೋತ್ಸವ ಜರುಗಿತು. ಮಿಠಾಯಿ ಅಂಗಡಿಗಳಿಂದ ಭಕ್ತರು ಪಂಚ ಫಲಹಾರ, ಬೆಂಡು ಬತ್ತಾಸು, ಬಾಳೆ ಹಣ್ಣು, ಉತ್ತತ್ತಿ ಖರೀದಿಸಿ ಎಸೆದು ಭಕ್ತಿಯನ್ನ ಸಮರ್ಪಿಸಿದರು. ಒಟ್ಟಿನಲ್ಲಿ ಶ್ರೀ ರಾಮಾವಧೂತ ಮುತ್ಯಾನ ಜಾತ್ರೆಯು ಭಾರೀ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ