ವಿಜಯಪುರ: ಸುತ್ತಲೂ ಹಚ್ಚ ಹಸಿರ ಪೈರು. ಬೆಳೆದು ನಿಂತ ಜೋಳದ ತೆನೆಗಳನ್ನ ಬಿಡಿಸುತ್ತಿರುವ ರೈತ. ಇನ್ನೊಂದೆಡೆ ಬಾಯಿ ಚಪ್ಪರಿಸುತ್ತಿರುವ ಗ್ರಾಮಸ್ಥರು. ಈ ರೀತಿಯ ವಿಶಿಷ್ಟ ಸಂಪ್ರದಾಯ (Faremrs Festival) ಕಂಡು ಬಂತು ನೋಡಿ ಗುಮ್ಮಟ ನಗರಿಯ (Vijayapura News) ಜೋಳದ ಜಮೀನಿನಲ್ಲಿ.
ಸೀತನಿ ಸುಗ್ಗಿ ಸಂಭ್ರಮ
ಹೌದು, ಜೋಳದ ದಂಟಿನಲ್ಲಿರುವ ತೆನೆಯ ಹಸಿಕಾಳುಗಳನ್ನ ತಂದು ಸುಟ್ಟು ತಿನ್ನುವುದು ವಿಜಯಪುರದ ಜನರ ಪಾಲಿಗೆ ಒಂದು ಹಬ್ಬದ ಸಂಭ್ರಮ. ಜೋಳದ ಕಾಳುಗಳು ಒಣಗುವ ಮುನ್ನವೇ ಹಸಿ ಜೋಳದ ತೆನೆಗಳನ್ನು ಸುಟ್ಟು ತಿಂದರೆ ಮನಸ್ಸಿಗೆ ನೆಮ್ಮದಿ, ಆರೋಗ್ಯಕ್ಕೂ ಹಿತಕರ, ದೇಹಕ್ಕೂ ತಂಪು. ಇದನ್ನೇ ಸೀತನಿ ಸುಗ್ಗಿ ಸಂಭ್ರಮ ಎನ್ನುತ್ತಾರೆ.
ಇಂತಹ ಆಚರಣೆ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಪ್ರಗತಿಪರ ರೈತರಾದ ಗಿರೀಶ್ ತೋಟಗಿ ಅವರ ಜಮೀನಿನಲ್ಲಿ ಆಚರಿಸಲಾಯಿತು.
ವಿಶೇಷ ಆಚರಣೆ
ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಜೋಳ ಬಿತ್ತನೆ ಮಾಡಿದ ಜಮೀನುಗಳಲ್ಲಿ ಹಾಲು ತೆನೆಗಳದ್ದೆ ವೈಯಾರವಿರುತ್ತದೆ. ಈ ಸಮಯದಲ್ಲೇ ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಜನ ಈ ಸೀತನಿಯ ಮೊರೆ ಹೋಗ್ತಾರೆ. ಈ ಹಬ್ಬಕ್ಕೆ ಹಿಂದೆ ಪೂರ್ವಜರು ಸಿಹಿ ತೆನೆ ಎಂದು ಕರೆಯುತ್ತಿದ್ದರು. ಸದ್ಯ ಈ ಭಾಗದ ಜನರ ಬಾಯಲ್ಲಿ ಸೀತನಿ ಎಂದು ಕೇಳಿ ಬರುತ್ತಿದೆ.
ಹೀಗಿರುತ್ತೆ ಸೀತನಿ ಆಚರಣೆ
ವಿಜಯಪುರ ಜಿಲ್ಲೆಯ ಜನರು ಮಾರ್ಚ್ ತಿಂಗಳಲ್ಲಿ ಸೀತನಿಯನ್ನು ಸುಗ್ಗಿಯಾಗಿ ಆಚರಿಸುವುದು ವಾಡಿಕೆ. ಈ ಭಾಗದ ರೈತರು ಹೆಚ್ಚಾಗಿ ಬಿಳಿ ಜೋಳವನ್ನ ಬಿತ್ತನೆ ಮಾಡುತ್ತಾರೆ. ಹೀಗಾಗಿ ವಿಜಯಪುರ ಜಿಲ್ಲೆ ಬಿಳಿ ಜೋಳದ ಕಣಜವೆಂದು ಹೆಸರನ್ನು ಸಹ ಪಡೆದಿದೆ. ಫೆಬ್ರವರಿ ತಿಂಗಳಲ್ಲಿ ಜೋಳದ ಬೆಳೆ ಕೈ ಎತ್ತರಕ್ಕೆ ಬೆಳೆದು ತೆನೆ ಬಿಟ್ಟಿರುತ್ತದೆ.
ಇದನ್ನೂ ಓದಿ: Success Story: 40 ಸಾವಿರ ಖರ್ಚು, ಒಂದೂವರೆ ಲಕ್ಷ ಆದಾಯ! ಜೇಬು ತುಂಬಿಸುತ್ತಿದೆ ಈ ಬೆಳೆ
ಜೋಳದ ಕಾಳು ಒಣಗುವ ಮುನ್ನವೇ ಜಮೀನಿನಲ್ಲಿನ ಹಸಿಯಾದ ಜೋಳದ ತೆನೆಗಳನ್ನು ಕಟಾವು ಮಾಡಿಕೊಂಡು ಬರುವ ರೈತರು ಅವುಗಳನ್ನ ಹದವಾಗಿ ಸುಟ್ಟು ಕೊಡುತ್ತಾರೆ. ಇದನ್ನ ಎಲ್ಲರೂ ತಿಂದು ಸಂಭ್ರಮ ಪಡುವುದೇ ಈ ಸೀತನಿ ಹಬ್ಬ.
ಸೀತನಿ ತಿನಿಸು
ಈ ಹಬ್ಬಕ್ಕೆ ರೈತರು ತಮ್ಮ ನೆರೆ ಹೊರೆಯವರನ್ನ ಕುಟುಂಬ ಸಮೇತವಾಗಿ ಮತ್ತು ಸ್ನೇಹಿತರನ್ನ ಆಹ್ವಾನಿಸಿರುತ್ತಾರೆ. ಇದಕ್ಕೂ ಮೊದಲು ಜಮೀನಿನ ನಡುವೆ ಒಂದು ಸಣ್ಣ ತೆಗ್ಗನ್ನ ಅಗೆದು ಅದರಲ್ಲಿ ಕಟ್ಟಿಗೆ ಮತ್ತು ಕುಳ್ಳುಗಳನ್ನ ಹಾಕಿ ಬೆಂಕಿ ಹೊತ್ತಿಸುತ್ತಾರೆ. ಅದೇ ಬೆಂಕಿಯಲ್ಲಿ ಜೋಳದ ಹಸಿ ತೆನೆಗಳನ್ನ ಹಾಕಿ ಕೆಲಹೊತ್ತು ಸುಟ್ಟು ಅವುಗಳನ್ನ ಗೋಣಿ ಚೀಲದಲ್ಲಿ ಹಾಕಿ ಬಡಿಗೆಯಿಂದ ಬಡಿದು ಕಾಳುಗಳನ್ನ ಬೇರ್ಪಡಿಸುತ್ತಾರೆ. ಬಳಿಕ ಆಗಮಿಸಿದ ನೆರೆ ಹೊರೆಯವರನ್ನ ಒಂದೆಡೆ ಕೂಡಿಸಿ ಅವರಿಗೆ ಸೀತನಿ ಜೊತೆಗೆ ಉಪ್ಪಿನ ಕಾಯಿ, ಶೇಂಗಾ ಹಿಂಡಿಯನ್ನ ನೀಡಿ ಸವಿಯಲು ಕೊಡುತ್ತಾರೆ.
ಇದನ್ನೂ ಓದಿ: Vijayapura: ಇಡೀ ವರ್ಷ ಹೆಸರಿಲ್ಲದೇ ಬೆಳೆಯುವ ಮಕ್ಕಳು!
ಒಟ್ಟಿನಲ್ಲಿ ಸೀತನಿ ಹಬ್ಬ ಉತ್ತರ ಕರ್ನಾಟಕ ಜನರ ಪಾಲಿಗೆ ಸಿಹಿಯ ಜೊತೆಗೆ ಕೃಷಿಯ ಒಡನಾಟವನ್ನೂ ಪರಿಚಯಿಸುವುದು ವಿಶೇಷ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ