ಸಿಂಗಾರಗೊಂಡ ಎತ್ತಿನಗಾಡಿ. ಎಲ್ಲಿಗೋ ಹೊರಟಂತಿರೋ ಪಯಣ. ಇನ್ನೇನು ಹೊಲದಲ್ಲಿ ಕುಳಿತು ಮನೆ ಮಂದಿ, ಸಂಬಂಧಿಕರೆಲ್ಲ ಊಟ ಮಾಡೋ ಸಂಭ್ರಮ. ಇದ್ನ ನೋಡ್ತಾ ಇವ್ರೇನಾದ್ರೂ ಪ್ರವಾಸಕ್ಕೆ ಹೊರಟವ್ರಾ ಅಂತಾ ನೀವೇನಾದರೂ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು. ಈ ಎಲ್ಲ ಚೆಂದದ ದೃಶ್ಯ ಕಂಡು ಬಂದಿದ್ದು ವಿಜಯಪುರದ (Vijayapura News) ಎಳ್ಳು ಅಮಾವಾಸ್ಯೆಯ ಚರಗ (Charaga Festival) ಹಬ್ಬದಲ್ಲಿ.
ಉತ್ತರ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಪುರಾತನ ಕಾಲದಿಂದಲೂ ಈ ವಿಶೇಷ ಸಂಪ್ರದಾಯವನ್ನ ರೈತರು ಉಳಿಸಿಕೊಂಡು ಬಂದಿದ್ದಾರೆ.
ಇಂತಹ ವಿಶಿಷ್ಟ ಆಚರಣೆಗೂ ಒಂದು ವಿಶೇಷತೆಯಿದೆ. ಅನ್ನ ನೀಡಿ ಸಾಕಿ ಸಲಹುವ ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸೋದೆ ಈ ಹಬ್ಬದ ಪ್ರಮುಖ ಉದ್ದೇಶ.
ಭೂತಾಯಿಗೆ ನೈವೇದ್ಯ
ಬೆಳೆ ಬೆಳೆದು ನಿಂತಿರುವ ಸಂದರ್ಭದಲ್ಲಿ ಭೂಮಿಗೆ ಪೂಜೆ ಮಾಡಿ ವಂದಿಸಲಾಗುತ್ತೆ. ಇದನ್ನೇ ಚರಗ ಹಬ್ಬ ಎಂದು ಕರೆಯಲಾಗುತ್ತೆ. ಭೂತಾಯಿಗೆ ನೈವೇದ್ಯ ಅರ್ಪಿಸಿ ಚರಗ ಹಬ್ಬ ಆಚರಿಸಲಾಗುತ್ತೆ. ಆ ದಿನ ಮನೆ ಮಂದಿ, ಕುಟುಂಬಿಕರು, ಸ್ನೇಹಿತರೆಲ್ಲ ತಮ್ಮ ಹೊಲದತ್ತ ತೆರಳುತ್ತಾರೆ. ನಳನಳಿಸುತ್ತಿರುವ ಬೆಳೆಯ ನಾಲ್ಕು ಬದಿಗಳಿಗೂ ವಿವಿಧ ಖಾದ್ಯಗಳನ್ನ ಚೆಲ್ಲಿ ಹಬ್ಬ ಮಾಡ್ತಾರೆ.
ಮಹಾಭಾರತದ ಲಿಂಕ್ ಸಹಾ ಇದೆ!
ಚರಗ ಹಬ್ಬದ ಬೆನ್ನುಬಿದ್ರೆ ಮಹಾಭಾರತದ ಲಿಂಕ್ ಸಹಾ ಸಿಗುತ್ತೆ! ಪಾಂಡವರು ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ವಿರಾಟರಾಜನು ಗೋವುಗಳನ್ನು ಗೋವರ್ಧನಗಿರಿಯಲ್ಲಿ ಕೌರವರಿಂದ ರಕ್ಷಣೆಮಾಡಿ ಒಟ್ಟಿಗೆ ಊಟ ಮಾಡಿದರೆಂಬ ಪ್ರತೀತಿ ಇದೆ. ಹಾಗಾಗಿ ಪಾಂಡವರ ದ್ಯೋತಕವಾಗಿ 5 ಕಲ್ಲುಗಳನ್ನಿರಿಸಿ ಪೂಜೆ ಸಲ್ಲಿಸಲಾಗುತ್ತೆ.
ಇದನ್ನೂ ಓದಿ: Vijayapura: ಮನೆಯ ಹಿರಿಯರಿಗೆ ಜೀವ ತರಿಸುವ ಬೆಚ್ಚಗಿನ ಕೌದಿ! ಚಳಿಗಾಲದಲ್ಲಿ ಇದು ಬಾರೀ ಬೆಸ್ಟ್
ಹೊಲದ ನಾಲ್ಕು ಸುತ್ತ ಆಹಾರ ಚೆಲ್ಲುವಾಗ ಮುಂದೆ ಒಬ್ಬರು ನೀರನ್ನು ಸಿಂಪಡಿಸಿ ಹುಲ್ಲುಲಗೋ ಎಂದರೆ, ಹಿಂದಿನಿಂದ ಇಬ್ಬರು ಸಲಾಂಭ್ರಿಗೋ ಎಂದು ಆಹಾರ ಎಸೆಯುತ್ತಾರೆ.
ಇದನ್ನೂ ಓದಿ: Positive Story: ಬ್ಯಾಡಗಿ ಮೆಣಸಿಗೆ ಬಂಗಾರದ ಬೆಲೆ; ಖಾರದಿಂದಲೂ ಸಿಕ್ತು ಸಿಹಿ!
ಹೊಲದಲ್ಲಿರುವ ಬೆಳೆಯ ಮಧ್ಯೆ ಇರುವ ಬನ್ನಿ ಮರಕ್ಕೆ ಕುಟುಂಬದ ಹಿರಿಯರು ಪೂಜೆ ಸಲ್ಲಿಸ್ತಾರೆ. ಬಳಿಕ ಮೊದಲೇ ಮನೆಯ ಹೆಂಗಸರು ಮಾಡಿ ತಂದ ರುಚಿ ರುಚಿಯಾದ ಆಹಾರವನ್ನ ಹೊಲದ ಪಕ್ಕದಲ್ಲೇ ಕೂತು ಸವಿಯುತ್ತಾರೆ. ಹೀಗೆ ನವಸಿರಿಯ ನಡುವೆ ವಿಜಯಪುರದ ರೈತರು ಒಂದಾಗಿ ಬೆರೆತು ಚರಗ ಹಬ್ಬ ಆಚರಿಸಿ ಖುಷಿಪಟ್ರು.
ವರದಿ: ಪ್ರಶಾಂತ ಹೂಗಾರ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ