ವಿಜಯಪುರ: ಸಾಲಾಗಿ ನೆಲದಲ್ಲಿ ಕೂತಿರೋ ಜನರು, ಅವರೆಲ್ಲರಿಗೂ ಅಂಬಲಿ ಬಡಿಸುತ್ತಿರೋ ಸ್ವಯಂ ಸೇವಕರು. ಇನ್ನೊಂದೆಡೆ ತಾಯಿಯ (Chandramma Devi) ಆಶೀರ್ವಾದ ಬೇಡುತ್ತಿರೋ ಭಕ್ತರು. ಹೀಗೆ ಈ ದೇಗುಲದ ಜಾತ್ರೆಗೆ ಬಂದವರೆಲ್ಲರಿಗೂ ಮಹಾ ಪ್ರಸಾದ ಈ ಅಂಬಲಿ ನೈವೇದ್ಯ.
ಚಂದ್ರಮ್ಮ ದೇವಿ ಜಾತ್ರೆಯ ವಿಶೇಷವೇ ಇದು!
ವಿಜಯಪುರ ಜಿಲ್ಲೆಯ ಪ್ರತಿ ವರ್ಷವೂ ಹೋಳಿ ಹಬ್ಬಕ್ಕೂ ಮುನ್ನ ಅರಳದಿನ್ನಿ ಗ್ರಾಮದ ಶ್ರೀ ಚಂದ್ರಮ್ಮ ದೇವಿಯ ಜಾತ್ರಾ ಮಹೋತ್ಸವ ಜರುಗುತ್ತದೆ. ಸಕಲ ಕಷ್ಟಗಳನ್ನ ಪರಿಹರಿಸಲು ಜಗನ್ಮಾತೆಯಾಗಿ ಈ ಗ್ರಾಮದಲ್ಲಿ ನೆಲೆ ನಿಂತಿರುವ ದೇವಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ.
ಅಂಬಲಿಯೇ ನೈವೇದ್ಯ, ಅಂಬಲಿಯೇ ಪ್ರಸಾದ!
ಸಾಮಾನ್ಯವಾಗಿ ದೇವಸ್ಥಾನದ ಜಾತ್ರೆ ಅಂದ್ರೆ ಅಲ್ಲಿ ಭಕ್ತರಿಗಾಗಿ ಅನ್ನಪ್ರಸಾದ ಇದ್ದರೆ, ಇಲ್ಲಿ ಅದೇನಿದ್ದರೂ ಜೋಳ ಹಿಟ್ಟಿನ ಅಂಬಲಿಯೇ ಪ್ರಸಾದ. ಅಷ್ಟೇ ಅಲ್ದೇ, ಚಂದ್ರಮ್ಮದೇವಿಗೂ ಇಲ್ಲಿ ಜೋಳದ ಅಂಬಲಿಯೇ ನೈವೇದ್ಯ. ಮಠದಲ್ಲಿ ತಯಾರಾಗುವ ಅಂಬಲಿಯನ್ನ ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತೆ. ಹಿಟ್ಟು ಮತ್ತು ಮಜ್ಜಿಗೆಯನ್ನ ಮಿಶ್ರಣ ಮಾಡಿ ಒಲೆಯ ಮೇಲೆ ಇಟ್ಟು ಕುದಿಯುವವರೆಗೂ ಹುಟ್ಟಿನಿಂದ ತಿರುಗಿಸಿ ಚೆನ್ನಾಗಿ ಬೇಯಿಸುತ್ತಾರೆ.
ಇಲ್ಲಿ ಎಲ್ಲರೂ ಸಮಾನರು
ಅಂಬಲಿ ತಯಾರಾದ ಬಳಿಕ ಅದನ್ನೇ ದೇವರಿಗೆ ನೈವೇದ್ಯ ರೂಪದಲ್ಲಿ ಒದಗಿಸಲಾಗುತ್ತೆ. ನಂತರದಲ್ಲಿ ಮಡಿಕೆಯ ಪಾತ್ರೆಯಲ್ಲಿ ಭಕ್ತರಿಗೆ ನೀಡಲಾಗುತ್ತೆ. ಇನ್ನೊಂದು ವಿಶೇಷ ಅಂದ್ರೆ, ಇಲ್ಲಿಗೆ ಬರುವ ಭಕ್ತಗಣ ಶ್ರೀಮಂತರಿರಲಿ, ಕಡು ಬಡವರಿರಲಿ ದೇವಿಯ ಸನ್ನಿಧಿಯಲ್ಲಿ ಎಲ್ಲರೂ ಒಂದೇ. ನೆಲದ ಮೇಲೆ ಕುಳಿತುಕೊಂಡೆ ಅಂಬಲಿ ಪ್ರಸಾದವನ್ನ ಸೇವಿಸುತ್ತಾರೆ.
ಇದನ್ನೂ ಓದಿ: Vijayapura: ಒಂದೇ ಒಂದು ಮರದ ಮಂಚ, ಚೇರ್ ಸಿಗದ ಊರಲ್ಲಿ ಚಂದ್ರಮ್ಮ ದೇವಿ ಜಾತ್ರೆ ಸಂಭ್ರಮ!
ಅಪಾರ ಭಕ್ತಗಣ
ಜಾತ್ರೆಯ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬಂದು ಬೇಡಿಕೊಂಡ್ರೆ ಎಲ್ಲ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂಬುವುದು ಭಕ್ತರ ನಂಬಿಕೆಯಾಗಿದೆ.
ಇದನ್ನೂ ಓದಿ: Vijayapura: ಉತ್ತರ ಕರ್ನಾಟಕದಲ್ಲಿ ಈ ಪಾಸಿಟಿವ್ ವಿಷಯಕ್ಕೆ ವಿಜಯಪುರವೇ ಫಸ್ಟ್!
ಒಟ್ಟಿನಲ್ಲಿ ಕಾಲ ಎಷ್ಟೇ ಬದಲಾದರು ಇಲ್ಲಿ ಅನಾದಿ ಕಾಲದಿಂದಲು ಈ ವಿಶಿಷ್ಟ ಸಂಪ್ರದಾಯ, ಪದ್ದತಿಯನ್ನ ಈ ಗ್ರಾಮದ ಭಕ್ತರು ನಡೆಸಿಕೊಂಡು ಬಂದಿರುವುದು ಶ್ಲಾಘನೀಯವೇ ಸರಿ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ