ವಿಜಯಪುರ: ಕೋಲಾಟ ಆಡ್ತಾ ಕುಣಿಯುತ್ತಿರೋ ಪುರುಷರು, ಹಾಡು ಹಾಡ್ತಾ ಹೆಜ್ಜೆ ಹಾಕ್ತಿರೋ ಹೆಂಗಸರು. ಮುದ್ದು ಮುದ್ದಾದ ಮಕ್ಕಳಿಗಿದು (Naming Ceremony) ಹೆಸರಿಡೋ ಸಮ್ಮಿಲನ. ಹೆಸರೇ ಇಲ್ದೇ (Name) ವರ್ಷವಿಡೀ ಕಾದ ಕೂಸುಗಳಿಗೀಗ (Childrens Naming Ceremony) ನಾಮಕರಣದ ಸಂಭ್ರಮ!
ಯೆಸ್, ಮಕ್ಕಳು ಹುಟ್ಟಿದ್ರೆ 13 ದಿನಗಳಲ್ಲಿ ಹೆಸ್ರು ಇಡೋದು ವಾಡಿಕೆ. ಆದ್ರೆ ವಿಜಯಪುರ ಜಿಲ್ಲೆಯ ತಾಂಡಾಗಳಲ್ಲಿ ಜನಿಸುವ ಗಂಡು ಮಕ್ಕಳಿಗೆ ಬಣ್ಣದ ಹಬ್ಬಕ್ಕೆ ಮಾತ್ರ ಹೆಸ್ರು ಇಡುತ್ತಾರೆ. ಬಣ್ಣದ ಹಬ್ಬ ಮುಗಿದ ಮರುದಿನ ಹುಟ್ಟಿದ್ರೂ ಮಕ್ಕಳು ವರ್ಷ ಪೂರ್ತಿ ಹೆಸರಿಲ್ಲದೆ ಬೆಳೆಯುತ್ತವೆ. ಅರೆ! ಇದೆಂತಹ ವಿಚಿತ್ರ ಅನ್ಸುತ್ತೆ ಅಲ್ವಾ? ಹೌದು, ಹೋಳಿ ಹಬ್ಬದ ಮರುದಿನದ ಹುಟ್ಟಿದ ಮಗುವಿಗೂ ಇಲ್ಲಿ ನಾಮಕರಣ ನಡೆಯಲ್ಲ. ಮಕ್ಕಳಿಗೆ ಹೆಸರಿಡೋಕೆ ಮುಂದಿನ ಬಣ್ಣದ ಹಬ್ಬದವರೆಗೆ ಕಾಯಲೇಬೇಕು!
ಸಂಪ್ರದಾಯ ಮೀರದ ಲಂಬಾಣಿಗರು
ಹೀಗೆ ಒಂದು ವರ್ಷದಿಂದ ಹೆಸರಿಲ್ಲದೇ ಬೆಳೆಯುವ ಮಕ್ಕಳಿಗೆ ಕೊನೆಗೂ ಹೋಳಿ ಹಬ್ಬದ ಶುಭ ಸಂದರ್ಭದಲ್ಲಿ ತಾಂಡಾ ನಿವಾಸಿಗಳು ಹೆಸರಿಟ್ಟು ಹಬ್ಬವನ್ನ ಆಚರಿಸ್ತಾರೆ. ಇಂತಹದ್ದೊಂದು ಸಂಪ್ರದಾಯ ಕಳೆದ ನೂರಾರು ವರ್ಷಗಳ ಹಿಂದಿನಿಂದಲೂ ಲಂಬಾಣಿ ಸಮುದಾಯದವರು ನಡೆಸಿಕೊಂಡು ಬಂದಿದ್ದಾರೆ.
ನಾಮಕರಣ ಸಂಭ್ರಮ
ಗಂಡು ಮಗುವಿಗೆ ನಾಮಕರಣ ಮಾಡುವ ಮುಂಚೆ ಮಗುವಿನ ತಲೆಗೆ ಕೆಂಪು ಬಟ್ಟೆ ಕಟ್ಟಿ ತಾಂಡಾದ ಹಿರಿಯರ ಸಮಕ್ಷಮದಲ್ಲಿ ಹೆಸರಿಡಲಾಗುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ಹೆಸರಿಡುವ ಕಾರ್ಯ ತುಂಬಾನೇ ವಿಶೇಷವಾಗಿ ನಡೆಯುತ್ತೆ. ಒಂದೆಡೆ ಸೇರುವ ತಾಂಡಾದ ಪುರುಷರೆಲ್ಲ ಕುಣಿಯುತ್ತಾ, ನಾಮಕರಣ ಶಾಸ್ತ್ರವನ್ನು ಮಾಡ್ತಾರೆ. ಈ ವೇಳೆ ತಾಂಡಾದ ಮಹಿಳೆಯರು ವಿಶೇಷ ಹಾಡುಗಳನ್ನ ಹೇಳುವ ಮೂಲಕ ಮಗುವಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸೋದು ವಿಶೇಷ.
ಕೋಲಾಟ ಮೆರುಗು
ಇನ್ನು ಬಂಧು ಬಾಂಧವರ ಸಮಕ್ಷಮದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಜಡೆ ತೆಗೆದ ನಂತರ ಮಗುವನ್ನು ಕೆಳಗೆ ಕೂರಿಸಿ ಮೇಲಿಂದ ಕೋಲಾಟದ ರೀತಿಯಲ್ಲಿ ಪರಸ್ಪರ ಕೋಲುಗಳನ್ನು ಬಡಿಯಲಾಗುತ್ತದೆ. ಬಳಿಕ ತಾಂಡಾ ಪುರುಷರು ವೃತ್ತಾಕಾರದಲ್ಲಿ ಜಮಾಯಿಸಿ ನೃತ್ಯ ಮಾಡುತ್ತಾರೆ. ಮಹಿಳೆಯರು ನಾವೇನು ಕಮ್ಮಿ ಎಂಬಂತೆ ಸಾಂಪ್ರದಾಯಿಕ ನೃತ್ಯ ಮಾಡುತ್ತಾರೆ. ಇದೇ ವೇಳೆ ಹೆಸರಿಡುವ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ತಯಾರಿಸಲಾದ ಸಿಹಿ ಪೂರಿಯನ್ನು ಹಂಚುತ್ತಾರೆ.
ಇದನ್ನೂ ಓದಿ: Bagalkote: ಬರಡು ಭೂಮಿ ಈಗ ಹಚ್ಚ ಹಸಿರಿನ ಕಾಡು! ಈ ಜಾದೂ ಹಿಂದಿನ ಮಾಂತ್ರಿಕ ಇವರೇ!
ಎಲ್ಲೇ ಇದ್ದರೂ ಆಗಮಿಸ್ತಾರೆ!
ತಾಂಡಾದಲ್ಲಿ ವರ್ಷ ಪೂರ್ತಿ ಹೆಸರಿಡದ ಮಕ್ಕಳಿಗೆ ನಾಮಕರಣ ಕಾರ್ಯ ಮುಗಿದ ಬಳಿಕ ಹಬ್ಬ ಆಚರಣೆ ಮಾಡಲಾಗುತ್ತದೆ. ಹಬ್ಬದ ನಂತರ ಜನಿಸಿದ ಮಕ್ಕಳ ಹೆಸರಿಡೋದು ಮುಂದಿನ ವರ್ಷದ ಬಣ್ಣದ ಹಬ್ಬದ ದಿನವೇ. ಬಂಜಾರಾ ಸಮುದಾಯದ ಕುಟುಂಬಗಳು ದೇಶದ ಯಾವುದೆ ಮೂಲೆಯಲ್ಲಿದ್ದರೂ, ಮಕ್ಕಳಿಗೆ ನಾಮಕರಣ ಆಗಿರದಿದ್ದರೆ ತಮ್ಮ ತಮ್ಮ ತಾಂಡಾಗಳಿಗೆ ಬಂದು ನಾಮಕರಣ ಮಾಡಿಸಿಕೊಂಡು ಹೋಗಲೇಬೇಕು.
ಇದನ್ನೂ ಓದಿ: Vijayapura: ಇಡೀ ದೇಶದಲ್ಲೇ ಹಬ್ಬವಾದ್ರೂ ಈ ಊರಲ್ಲಿ ಸ್ಮಶಾನ ಮೌನ!
ಹೀಗೆ ಶಾಸ್ತ್ರೋಕ್ತವಾಗಿ, ಸಾಂಪ್ರದಾಯಿಕವಾಗಿ ಬಂಜಾರ ಸಮುದಾಯದ ಜನರು ತಮ್ಮ ಮಕ್ಕಳಿಗೆ ನಾಮಕರಣ ಹಬ್ಬ ನಡೆಸುತ್ತಿರೋದು ವಿಶೇಷವೇ ಸರಿ.
ವರದಿ: ಗುರು, ನ್ಯೂಸ್ 18 ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ