ಬಾಗಲಕೋಟೆ: ಬಸವಣ್ಣ, ಚೆನ್ನಬಸವಣ್ಣ, ಹಡಪದ ಅಪ್ಪಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಹೀಗೆ ಸಾಲು ಸಾಲು ಸಂತ ಶರಣರ ನೆನಪು. ಅನುಭವ ಮಂಟಪವನ್ನ ವಿವರಿಸೋ ಕೆತ್ತನೆಗಳು. ಎಲ್ಲವೂ ಕಣ್ಣಿಗೆ ಕಟ್ಟುವಂತೆ ಕಲರ್ ಫುಲ್ ಆಗಿ ಕಂಡು ಬರುತ್ತಿರೋದು ಬೇರೆಲ್ಲೂ ಅಲ್ಲ, ಅದುವೇ ಬಸವೇಶ್ವರನ (Basaveshwara) ನಾಡಾದ ಕೂಡಲ ಸಂಗಮದಲ್ಲಿ (Kudala Sangama).
ಹೌದು, ಬಾಗಲಕೋಟೆ ನಗರದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಕೂಡಲ ಸಂಗಮ ಇಂದಿಗೂ ಆಧ್ಯಾತ್ಮದ ಜೊತೆಗೆ ವೈಚಾರಿಕತೆಯ ಸೆಳೆತವನ್ನ ಹೊಂದಿದೆ. ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ಆಗಮಿಸಿ ಜಗಜ್ಯೋತಿ ಬಸವೇಶ್ವರ ಐಕ್ಯಸ್ಥಳವನ್ನ ಸಂದರ್ಶಿಸುತ್ತಾರೆ.
ಸಾಮಾಜಿಕ-ಧಾರ್ಮಿಕ ಸಂಸತ್ತು ನೋಡೋ ಖುಷಿನೇ ಬೇರೆ!
ಅಷ್ಟೇ ಅಲ್ಲ, ಇಲ್ಲಿರೋ ಐತಿಹಾಸಿಕ ಕ್ಷಣಗಳ ನಿರೂಪಣೆ ನೋಡಿ ಭಕ್ತರು ತೃಪ್ತರಾಗ್ತಾರೆ. ಅದರಲ್ಲೂ, ಅನುಭವ ಮಂಟಪದ ರಚನೆ ಇಂದಿಗೂ ತನ್ನತ್ತ ಜನರನ್ನ ಕೈ ಬೀಸಿ ಕರೆಯುತ್ತೆ. 12ನೇ ಶತಮಾನದಲ್ಲಿ ಎಲ್ಲಾ ಧರ್ಮದ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಸೇರುತ್ತಿದ್ದ ಅಂದಿನ ಸಾಮಾಜಿಕ-ಧಾರ್ಮಿಕ ಸಂಸತ್ತು ಇಂದಿಗೂ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿವೆ. ಇಂತಹ ಸಂಸತ್ತನ್ನ ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯದ್ದಲ್ಲ.
ಕಣ್ಣಿಗೆ ಕಟ್ಟುವಷ್ಟು ಸುಂದರ ಇಲ್ಲಿರೋ ಮೂರ್ತಿಗಳು!
ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಕಾರ್ಯ ಚಟುವಟಿಕೆಗಳ ಬಗ್ಗೆ ಇಂದಿಗೂ ಅದನ್ನ ಕೆತ್ತನೆ ಮೂಲಕ ತಿಳಿಸಿಕೊಡುವ ಪ್ರಯತ್ನ ನಡೆದಿದೆ. ಮಂಟಪದ ಪ್ರಥಮ ಅಧ್ಯಕ್ಷರಾಗಿದ್ದವರು ಅಲ್ಲಮ ಪ್ರಭುಗಳು. ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ ಅಲ್ಲಮ ಪ್ರಭು ಅವರ ಜೊತೆ ನಡೆಸಿದ್ದ ಸಂವಾದ ಸೇರಿದಂತೆ ಹಲವು ವಿಷಯಗಳನ್ನು ಕಣ್ಣಿಗೆ ಕಟ್ಟುವ ಹಾಗೆ ಕಲಾವಿದರು ಮೂರ್ತಿಗಳಿಗೆ ಬಣ್ಣ ಹಚ್ಚಿ ಸುಂದರಗೊಳಿಸಿದ್ದಾರೆ. ಇತಿಹಾಸಕ್ತರು ಇಲ್ಲಿಗೆ ಆಗಮಿಸಿ ಅಧ್ಯಯನ ನಿರತರಾದರೆ, ವಿದ್ಯಾರ್ಥಿಗಳು ಪಾಠದಲ್ಲಿ ಕಾಣುವ ಸಂತ ಶರಣರ, ವಚನಕಾರರನ್ನು ಕಂಡು ನೆನಪನ್ನ ಮೆಲುಕು ಹಾಕುವರು.
ಇದನ್ನೂ ಓದಿ: Vijayapura: ಪದವೀಧರ ಯುವಕನ ಹಾವು ಪ್ರೇಮ! ಇವ್ರು ವಿಷ ಸರ್ಪಗಳನ್ನೂ ಪಳಗಿಸುವ ನಿಪುಣ
ಗ್ರಂಥ ಭಂಡಾರವೂ ಇಲ್ಲಿದೆ
ಈ ಅನುಭವ ಮಂಟಪವು ಶರಣರ ಮಂಟಪ, ಲಿಂಗದೇವ ಮಂಟಪ, ಬಸವಧ್ಯಾನ ಮಂಟಪ, ಲಿಂಗದೀಕ್ಷಾ ಮಂಟಪ, ಶರಣರ ದರ್ಶನ ಭಾವಚಿತ್ರಗಳು, ಮಹಾಮನೆ ಮಹಾಮಂಟಪ, ಶ್ರೀ ಚನ್ನಬಸವೇಶ್ವರರ ಗ್ರಂಥ ಭಂಡಾರವನ್ನ ಒಳಗೊಂಡಿದೆ.
ಇದನ್ನೂ ಓದಿ: Vijayapura Viral Video: ಬೇವಿನ ಮರದಲ್ಲಿ ಜಿನುಗುತ್ತಿದೆ ಹಾಲಿನಂತಹ ನೊರೆ!
ಅನುಭವ ಮಂಟಪಕ್ಕೆ ಹೀಗೆ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಅಷ್ಟೇ ಅಲ್ಲದೇ, 12ನೇ ಶತಮಾನದಲ್ಲಿದ್ದ ತಮ್ಮ ಕಾಯಕದಲ್ಲಿ ತೊಡಕೊಂಡಿದ್ದ ಎಲ್ಲಾ ಜಾತಿಯ ಸಮಕಾಲಿನ ಶರಣರ ಮೂರ್ತಿಗಳು ಇಲ್ಲಿವೆ. ಇವುಗಳನ್ನ ನೋಡುತ್ತಿದ್ದಂತೆ ನೀವು 12 ಶತಮಾದಲ್ಲಿದ್ದೇವೆನೋ ಎಂಬಂತೆ ಭಾಸವಾಗುತ್ತದೆ. ಒಟ್ಟಿನಲ್ಲಿ ಜಗತ್ತಿನ ಮೊದಲ ಸಂಸತ್ತು ಇದೀಗ ಜನರ ಆಕರ್ಷಣೆಯ ಕೇಂದ್ರವಾಗಿ ಕೂಡಲ ಸಂಗಮದಲ್ಲಿ ಕೈಬೀಸಿ ಕರೆಯುತ್ತಿರೋದು ಸುಳ್ಳಲ್ಲ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ