ವಿಜಯಪುರ: ಅಂದಚೆಂದದ ಅಲಂಕಾರ, ಕಣ್ಮನ ಸೆಳೆಯುವ ವಿದ್ಯುತ್ ದೀಪಗಳ ವೈಯ್ಯಾರ. ಒಳ ಹೊಕ್ಕರೆ ಮೈದಾನವಿಡೀ ಝಗಮಗಿಸೋ ಕಲರ್ಫುಲ್ ಚಿತ್ತಾರ. ಅಷ್ಟಕ್ಕೂ ಇದೇನು ಅದ್ದೂರಿ ಮದುವೆ ಸಂಭ್ರಮನಾ? ಊರ ಜಾತ್ರೆನಾ? ಅಲ್ವೇ ಅಲ್ಲ. ಹಾಗಿದ್ರೆ ಈ ಉತ್ಸವ (Cultural Event) ಯಾವುದು ? ಯಾಕಾಗಿ ಅಂತೀರ ಹೇಳ್ತೀವಿ ನೋಡಿ.
ಸಂಭ್ರಮವೋ ಸಂಭ್ರಮ
ಯೆಸ್, ಬಿರಿಯಾನಿ, ದೋಸೆ, ಜಾಮೂನ್, ಐಸ್ ಕ್ರೀಂ, ರೋಟಿ ತಿನ್ನುತ್ತಾ ಖುಷಿಪಡ್ತಿರೋ ಆಹಾರ ಪ್ರಿಯರು. ಇನ್ನೊಂದೆಡೆ ವೇದಿಕೆ ಮೇಲೆ ಮಕ್ಕಳನ್ ಕುಣಿಸುತ್ತಾ ಸಂಭ್ರಮಿಸುತ್ತಿರೋ ಜೋಕರು, ಮತ್ತೊಂದೆಡೆ ಮಕ್ಕಳನ್ನ ಆಟವಾಡಿಸುತ್ತಾ ಖುಷಿಪಡುತ್ತಿರೋ ಪೋಷಕರು. ಅಂದಹಾಗೆ ಈ ಎಲ್ಲ ದೃಶ್ಯ ಕಂಡುಬಂದಿದ್ದು ವಿಜಯಪುರ ಜಿಲ್ಲೆಯ ಕೂಡಗಿ ವಿದ್ಯುತ್ ಶಾಖೋತ್ಪನ್ನ ಘಟಕದ ಟೌನ್ ಶಿಪ್ ನಲ್ಲಿರುವ ನೇತಾಜಿ ಸುಭಾಶ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ.
ʼಆನಂದ ಮೇಳʼದ ಆನಂದ
ಮಿತಾಲಿ ಮಹಿಳಾ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಆಯೋಜಿಸಲಾದ ಎರಡು ದಿನಗಳ ಕಾಲ ʼಆನಂದ ಮೇಳʼ ಹಮ್ಮಿಕೊಳ್ಳಲಾಗಿದ್ದು, ಕತ್ತಲಾಗುತ್ತಲೇ ಜನ ಮೈದಾನಕ್ಕೆ ಬಂದು ಸಂಭ್ರಮಿಸಿದರು. ಆನಂದ ಮೇಳದಲ್ಲಿ ಏನುಂಟು ಏನಿಲ್ಲ ಅನ್ನೋ ಮಟ್ಟಿಗೆ ಅದ್ಧೂರಿಯಾಗಿ ಆಯೋಜಿಸಲಾಗಿದೆ.
ಮೇಳದ ವಿಶೇಷತೆ ಹೀಗೆಲ್ಲ ಇತ್ತು!
ಈ ಮೇಳದಲ್ಲಿ ಪ್ರಾದೇಶಿಕ ಕೈಮಗ್ಗ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳು, ಉತ್ತರ ಕರ್ನಾಟಕದ ಬಗೆ ಬಗೆಯ ತಿಂಡಿ ತಿನಿಸುಗಳು, ಖಾದಿ ಬಟ್ಟೆಯ ಉಡುಪುಗಳು, ರೇಷ್ಮೆ ಸೀರೆ, ಇಲೆಕ್ಟ್ರಾನಿಕ್ ವಸ್ತುಗಳು, ಬ್ಯಾಂಕ್, ವಿಮೆ, ಹಣಕಾಸು ಸಂಸ್ಥೆಗಳು ಹೀಗೆ ನಾನಾ ವಿಧಧ ಸೇವೆ, ಮನೋರಂಜನೆ ಜೊತೆಗೆ ಶಾಪಿಂಗ್ಗೆ ಹೇಳಿಟ್ಟಂತಿದೆ.
ವಿವಿಧ ಬಗೆಯ ತಿಂಡಿ ತಿನಿಸು
ಇಲ್ಲಿರೋ ವಿದ್ಯುತ್ ಶಾಖೋತ್ಪನ್ನ ಘಟಕದಲ್ಲಿ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಬಿಹಾರ, ಆಂಧ್ರಪ್ರದೇಶ ಹೀಗೆ ಬೇರೆ ಬೇರೆ ರಾಜ್ಯದ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ಅವರೆಲ್ಲರಿಗೂ ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳನ್ನ ಪರಿಚಯಿಸುವ ನಿಟ್ಟಿನಲ್ಲಿ ಈ ಮೇಳವನ್ನ ಆಯೋಜಿಸಲಾಗಿತ್ತು. ವಿವಿಧ ಹಣ್ಣುಗಳಿಂದ ತಯಾರಿಸಿದ ಐಸ್ ಕ್ರೀಮ್, ದೋಸೆ, ವಡೆ, ಚಪಾತಿ, ಪರೋಟಾ, ಎಗ್ ಬಿರಿಯಾನಿ, ಚಿಕನ್ ಬಿರಿಯಾನಿ, ಶಾವಿಗೆ ಉಪ್ಪಿಟ್ಟು, ಬಿಳಿ ಜೋಳದ ರೊಟ್ಟಿ, ಸೇರಿದಂತೆ ಹಲವಾರು ಭಗೆಯ ಭಕ್ಷ್ಯ ಭೋಜನವನ್ನ ಬಾಯಿ ಚಪ್ಪರಿಸಿಕೊಂಡು ಸವಿದರು.
ಇದನ್ನೂ ಓದಿ: Vijayapura: 30 ವರ್ಷಗಳ ಹಿಂದೆ ಮೂವರಿಂದ ಆರಂಭವಾದ ಯಾತ್ರೆಗೆ ಈಗ ಸಾವಿರಾರು ಪಾದಗಳು!
ಮೈದಾನವಿಡೀ ಕಲರ್ಫುಲ್
ಅದಕ್ಕೆ ತಕ್ಕಂತೆ ಮೈದಾನಕ್ಕೆ ಅಳವಡಿಸಲಾಗಿದ್ದ ದೀಪಾಲಂಕಾರ, ವಿವಿಧ ಬಗೆಯ ಚಿತ್ತಾರ ʼಆನಂದ ಮೇಳʼಕ್ಕೆ ಮೆರುಗು ನೀಡಿತ್ತು. ಇನ್ನು ವಿದ್ಯುತ್ ದೀಪದಲ್ಲಿ ಅಲಂಕೃತಗೊಂಡ ಚಿಟ್ಟೆ ಮತ್ತು ಹಂಪೆಯ ಕಲ್ಲಿನ ರಥಗಳ ಮುಂದೆ ನಿಂತು ಜನರು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಟ್ಟರೆ, ಚಿಕ್ಕ ಚಿಕ್ಕ ಮಕ್ಕಳು ಮಿನಿ ರೈಲು ಹತ್ತಿ ಸುತ್ತಾಡಿದರು. ಇನ್ನೂ ಕೆಲವರು ಜಾರು ಬಂಡಿ, ಕಾರ್ ರೇಸ್ ಸೇರಿದಂತೆ ವಿವಿಧ ಸ್ಪರ್ಧೆಯಲ್ಲಿ ಭಾಗಿಯಾಗಿ ಮಜಾ ಅನುಭವಿಸಿದರು.
ಇದನ್ನೂ ಓದಿ: Vijayapura Grapes: ಕಂಡು ಕೇಳರಿಯದ ಹಲವು ಬಗೆಯ ದ್ರಾಕ್ಷಿ, ಇಷ್ಟು ಕಡಿಮೆ ಬೆಲೆಗೆ ಸಿಕ್ಕಿತು ನೋಡಿ!
ಒಟ್ಟಿನಲ್ಲಿ ಆನಂದ ಮೇಳವು ಕೂಡಿಗಿಯ ಮೈದಾನದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಜನರಂತೂ ತುಂಬಾ ಉತ್ಸುಕತೆಯಿಂದ ಪಾಲ್ಗೊಂಡು ಸಂಭ್ರಮಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ