ವಿಜಯಪುರ: ಬಣ್ಣ ಬಣ್ಣದ ರಂಗೋಲಿ ಬಿಡಿಸುತ್ತಿರುವ ಮಹಿಳೆಯರು, ಸುತ್ತಲೂ ದೀಪ ಹಚ್ಚುತ್ತಿರುವ ಭಕ್ತರು, ದೇಗುಲವಿಡೀ ಸಂಕೀರ್ತನೆ, ಪೂಜೆ ಪುನಸ್ಕಾರಗಳ ನಿನಾದ. ಇದು ವಿಜಯಪುರದ ಚಿಮ್ಮಲಗಿಯ ಅಂಬಾ ಭವಾನಿ ದೇವಿಯ (Amba Bhavani Devi) ಕಡೇ ಕಾರ್ತಿಕೋತ್ಸವದ ಸಂಭ್ರಮ. ವಿಜಯಪುರ ಜಿಲ್ಲೆಯ (Vijayapura News) ನಿಡಗುಂದಿ ಸಮೀಪದ ಚಿಮ್ಮಲಗಿ ಅಂಬಾ ಭವಾನಿ ದೇವಸ್ಥಾನದಲ್ಲಿ ಕಡೇ ಕಾರ್ತಿಕೋತ್ಸವ ಸಂಭ್ರಮ (Karthik Utsavo) ಜೋರಾಗಿ ನಡೆಯಿತು.
ಸಂಜೆಯಾಗುತ್ತಲೇ ಬಡಾವಣೆಯ ಮಹಿಳೆಯರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿ ಬಣ್ಣ ಬಣ್ಣಗಳಿಂದ ಕೂಡಿದ ಬೃಹತ್ ರಂಗವಲ್ಲಿಯನ್ನ ಬಿಡಿಸಿದರು. ಅದರ ಸುತ್ತಲೂ ನೆರೆದಿದ್ದವರು ದೀಪ ಬೆಳಗಿಸಿ ಅದರ ಆಕರ್ಷಣೆ ಹೆಚ್ಚಿಸಿದರು. ಇನ್ನೊಂದೆಡೆ ಮಹಿಳೆಯರು, ಮಕ್ಕಳು, ಭಜನೆ ಹಾಗೂ ಸಂಕೀರ್ತನೆಗಳ ಮೂಲಕ ದೇವರ ಮೊರೆ ಹೋದರು.
ಅಂಬಾ ಭವಾನಿ ದೇವರಿಗೆ ವಿಶೇಷ ಅಲಂಕಾರ
ಕಾರ್ತಿಕೋತ್ಸವ ಹಿನ್ನೆಲೆ ಅಂಬಾ ಭವಾನಿ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬಡಾವಣೆಯ ಭಕ್ತಾದಿಗಳು ತಮ್ಮತಮ್ಮ ಮನೆಗಳಲ್ಲಿ ಮಾಡಿದ ಸಿಹಿ ಖಾದ್ಯವನ್ನ ತಂದು ದೇವಿಗೆ ಸಮರ್ಪಿಸಿದರು.
ಇದನ್ನೂ ಓದಿ: Amogha Siddeshwara Fair: ನೂರಾರು ಪಲ್ಲಕ್ಕಿಗಳ ಮುಖಾಮುಖಿ! ಇದು ಭಂಡಾರದೊಡೆಯ ಅಮೋಘ ಸಿದ್ದೇಶ್ವರ ಜಾತ್ರಾ ವೈಭವ
ಮಣ್ಣಿನ ಹಣತೆಗಳನ್ನು ಬೆಳಗಿದ ಭಕ್ತರು
ಬೆಳಗಿನಿಂದಲೇ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು. ದೇವಸ್ಥಾನ ಹಾಗೂ ಶಿಖರವನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾತ್ರಿಯಾಗುತ್ತಲೇ ದೇವಸ್ಥಾನದ ಮುಂದಿನ ಆವರಣದಲ್ಲಿ ಸಾಲಾಗಿ ಜೋಡಿಸಲಾಗಿದ್ದ ಮಣ್ಣಿನ ಹಣತೆಗಳನ್ನು ಭಕ್ತರು ಹಚ್ಚಿ ಭಕ್ತಿಭಾವ ಮೆರೆದರು.
ಇದನ್ನೂ ಓದಿ: Inspiration: ಸಾವಿರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ ವಿಜಯಪುರದ ಮಲ್ಲಮ್ಮ; ಇವರ ಜೀವನವೇ ಸ್ಪೂರ್ತಿಗೀತೆ!
ಅಂಬಾ ಭವಾನಿ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಕಾರ್ತಿಕ ಮಾಸದ ಈ ದೀಪೋತ್ಸವಕ್ಕೆ ಅಸಂಖ್ಯಾತ ಭಕ್ತಾದಿಗಳು ಸಾಕ್ಷಿಯಾದರು. ದೇವಸ್ಥಾನದ ಭಕ್ತರಿಗಾಗಿ ಅನ್ನ ಸಂತರ್ಪಣೆ ಕೂಡಾ ಜರುಗಿತು. ಒಟ್ಟಿನಲ್ಲಿ ನಿತ್ಯದ ಜಂಜಾಟದಿಂದ ದೂರವಿದ್ದು ಭಕ್ತರೆಲ್ಲರೂ, ಅಂಬಾ ಭವಾನಿ ದೇವಿಯ ಸನ್ನಿಧಿಯಲ್ಲಿ ಕುಳಿತು ದೇವರ ಸ್ಮರಣೆ ಮಾಡಿದ್ದು ವಿಶೇಷವಾಗಿತ್ತು.
ವರದಿ: ಪ್ರಶಾಂತ ಹೂಗಾರ, ನ್ಯೂಸ್18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ