ವಿಜಯಪುರ: ಸೊಂಪಾಗಿ ಬೆಳೆದ ಜೋಳದ ರಾಶಿಯನ್ನ ರಕ್ಷಿಸುವುದೇ ರೈತರ ಪಾಲಿಗೆ ಬಹುದೊಡ್ಡ ಸವಾಲು. ಫಸಲು ಬಂದ್ರೂ ಅದ್ಯಾವುದೋ ಹಕ್ಕಿಗಳಿಗೆ ಆಹಾರವಾಗೋ ಆತಂಕ. ಎಕ್ರೆಗಟ್ಟಲೆ ಜಮೀನನ್ನ ಎಷ್ಟು ಹೊತ್ತೂಂತ ಕಾಯೋದು? ಅದ್ಕೇ ನೋಡಿ ವಿಜಯಪುರದಲ್ಲಿ ಕಂಡುಕೊಂಡಿದ್ದಾರೆ ಸೂಪರ್ ಐಡಿಯಾ.
ಹಕ್ಕಿಗಳ ಕಾಟ ತಡೆಯುವುದು ಹೇಗೆ?
ಯೆಸ್, ವಿಜಯಪುರ ಜಿಲ್ಲೆಯ ಪ್ರಮುಖ ಬೆಳೆಯೇ ಜೋಳ. ಬರದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡರೂ, ಇಲ್ಲಿನ ರೈತರು ಒಣ ಬೇಸಾಯ ಪದ್ಧತಿಯಲ್ಲಿ ವರ್ಷಕ್ಕೆ ಎರಡು ಬೆಳೆಗಳನ್ನ ತಗೆಯುತ್ತಾರೆ. ಅದರಲ್ಲಿ ಪ್ರಮುಖವಾಗಿ ಕಡಲೆ ಮತ್ತು ಬಿಳಿ ಜೋಳ. ಆದರೆ ಹೀಗೆ ತೆನೆ ಬಿಟ್ಟ ಜೋಳದ ತೆನೆಗಳಿಗೆ ಸದ್ಯ ಹಕ್ಕಿಗಳ ಕಾಟ ಹೆಚ್ಚಾಗಿದೆ. ಇದನ್ನ ತಪ್ಪಿಸಲು ರೈತರು ಮನೆಯಲ್ಲಿರುವ ಹರಕು ಬಟ್ಟೆಗಳನ್ನ ತಂದು ತೆನೆಗಳಿಗೆ ಕಟ್ಟಿ ಹಕ್ಕಿಗಳಿಂದ ತೆನೆ ರಕ್ಷಿಸುತ್ತಾರೆ.
ಜೋಳದ ತೆನೆಗೆ ಕುತ್ತು!
ವಿಜಯಪುರ ನಗರದ ಹೊರಭಾಗದಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಇಲ್ಲಿನ ವಿಜ್ಞಾನಿಗಳು ತಮ್ಮ ವ್ಯಾಪ್ತಿಯಲ್ಲಿ ಹತ್ತಾರು ಎಕರೆಯಷ್ಟು ಬಿಳಿ ಜೋಳ ಬಿತ್ತನೆ ಮಾಡಿದ್ದರು. ಸದ್ಯ ಭರಪೂರ ತೆನೆ ಬಿಟ್ಟಿದ್ದು, ಬೆಳಗ್ಗೆಯಾದರೆ ಸಾಕು ವಲಸೆ ಹಕ್ಕಿಗಳ ಕಾಟ ಹೆಚ್ಚಾಗಿದೆ. ಹಕ್ಕಿಗಳು ತೆನೆ ಮೇಲೆ ಕುಳಿತು ಜೋಳದ ಕಾಳುಗಳನ್ನ ಕುಕ್ಕಿ ಕುಕ್ಕಿ ತಿನ್ನುವ ದೃಶ್ಯ ಸಾಮಾನ್ಯವಾಗಿದೆ.
ಇದನ್ನೂ ಓದಿ: Bagalkote: 24 ಗಂಟೆ ತೆರೆದೇ ಇರುತ್ತೆ ಈ ಗ್ರಾಮ ಪಂಚಾಯತ್!
ಬೆಳೆ ರಕ್ಷಣೆಗೆ ಮಾಸ್ಟರ್ ಪ್ಲ್ಯಾನ್!
ಹೇಳಿಕೇಳಿ ಇದು ಕೃಷಿ ವಿಶ್ವವಿದ್ಯಾಲಯದವರೇ ಕೃಷಿ ಮಾಡಿರೋ ಜೋಳ ಆಗಿದ್ರಿಂದ ಹಕ್ಕಿಗಳ ಕಾಟದಿಂದ ತಪ್ಪಿಸಲು ಮಾಸ್ಟರ್ ಪ್ಲ್ಯಾನ್ ರಚಿಸಿಕೊಂಡಿದ್ದಾರೆ. ಅದೆಷ್ಟು ಸಿಂಪಲ್ ಅಂದ್ರೆ, ಇದನ್ನ ಯಾವ ರೈತ ಬೇಕಿದ್ರೂ ತಮ್ಮ ಫಸಲು ರಕ್ಷಿಸಲು ಬಳಸಬಹುದಾಗಿದೆ. ಯೆಸ್, ಕೃಷಿ ವಿವಿ ಸಿಬ್ಬಂದಿಗಳು ಕಾಗದದ ಹಾಳೆಯಿಂದ ಸಣ್ಣ ಸಣ್ಣ ಪಾಕೇಟ್ಗಳನ್ನ ಸಿದ್ಧಪಡಿಸಿ ಜೋಳದ ತೆನೆಗಳಿಗೆ ಹಾಕಿ ಅವುಗಳನ್ನ ಹಕ್ಕಿಗಳಿಂದ ರಕ್ಷಿಸುತ್ತಿದ್ದಾರೆ. ಹೀಗೆ ಬರೋ ಹಕ್ಕಿಗಳು ಜೋಳದ ಗಿಡಗಳಲ್ಲಿ ತೆನೆಗಳಿಲ್ಲ ಎಂದು ವಾಪಸ್ ಆಗ್ತಿವೆ. ಅಲ್ಲಿಗೆ ಕೃಷಿ ವಿವಿ ಸಿಬ್ಬಂದಿಗಳು ಕಂಡುಕೊಂಡ ಐಡಿಯಾ ವರ್ಕೌಟ್ ಆಗಿದೆ.
ಇದನ್ನೂ ಓದಿ: Vijayapura Airport: ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆ, ಇಲ್ಲಿದೆ ಮಹತ್ವದ ಅಪ್ಡೇಟ್
ಒಟ್ಟಿನಲ್ಲಿ ಜೋಳದ ತೆನೆಗಳನ್ನ ಹಕ್ಕಿಗಳಿಂದ ರಕ್ಷಿಸಲು ಹೆಚ್ಚೇನು ಪ್ರಯಾಸಪಡುವ ಅಗತ್ಯವೇ ಇಲ್ಲ ಅನ್ನೋದನ್ನ ಕೃಷಿ ವಿವಿ ತೋರಿಸಿಕೊಟ್ಟಿದ್ದು, ಇತರೆ ರೈತರಿಗೆ ಮಾದರಿ ಎನಿಸಿದೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ