ವಿಜಯಪುರ: ತಾನು ಬಿದ್ದು ಹೋಗುವ ಮರ, ನನ್ನ ಮೊಮ್ಮಗ ಇನ್ನೂ ಬಾಳಿ ಬದುಕಬೇಕು ಎಂದು 73 ವರ್ಷದ ಅಜ್ಜಿಯೊಬ್ಬಳು ತನ್ನ 21 ವರ್ಷದ ಮೊಮ್ಮಗನಿಗೆ ಕಿಡ್ನಿ ದಾನ (Kidney Donate) ಮಾಡಿದ ಅಪರೂಪದ ಘಟನೆಯೊಂದು ನಡೆದಿದೆ. ವಿಜಯಪುರ ಜಿಲ್ಲೆಯಲ್ಲೇ (Vijayapura News) ಇದೇ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಚಿಕಿತ್ಸೆ ಯಶಸ್ವಿಯಾಗಿದೆ.
ಬೆಳಗಾವಿ ಜಿಲ್ಲೆಯ ಹಾರೋಗರಿ ಗ್ರಾಮದ ಯುವಕ ಸಚಿನ್ ಕಳೆದ 18 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಜೊತೆಗೆ ಇತ್ತೀಚಿಗೆ ಕೆಲ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಗಿತ್ತು. ಹೀಗಾಗಿ ಸಚಿನ್ಗೆ ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಡಯಾಲಿಸಿಸ್ ಮಾಡಬೇಕಿತ್ತು. ಈತನ ತಂದೆ ತಾಯಿ ಅನಾರೋಗ್ಯ ಪೀಡಿತವಾದ ಕಾರಣ ಅವರ ಒಂದು ಕಿಡ್ನಿ ಪಡೆದು ಯುವಕನಿಗೆ ವರ್ಗಾಯಿಸಲು ಆಗುತ್ತಿರಲಿಲ್ಲ. ಯುವಕ ಸಚಿನ್ ಅವರ ದಯನೀಯ ಸ್ಥಿತಿ ಕಂಡ ಅವರ ಮನೆಯ ಹಿರಿಯ ಜೀವಿ ಅವರ ಅಜ್ಜಿ ಉದ್ದವ್ವ ಸ್ವಇಚ್ಚೆಯಿಂದ ಕಿಡ್ನಿ ನೀಡಲು ಮುಂದಾಗಿದ್ದಾರೆ.
ಅಜ್ಜಿ-ಮೊಮ್ಮಗನ ಮೂತ್ರಪಿಂಡ ಹೊಂದಾಣಿಕೆ
ಇತ್ತೀಚಿಗಷ್ಟೇ ವಿಜಯಪುರದ ಯಶೋಧಾ ಎನ್ನುವ ಖಾಸಗಿ ಆಸ್ಪತ್ರೆ ಕಿಡ್ನಿ ಕಸಿಗೆ ಮಾನ್ಯತೆ ಪಡೆದುಕೊಂಡಿತ್ತು. ಯುವಕ ಸಚಿನ್ ಹಾಗೂ ಆತನ ಅಜ್ಜಿ ಉದ್ದವ್ವ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರದ್ದು ಹೊಂದಾಣಿಕೆಯಾಗುತ್ತಿತ್ತು. ಹೀಗಾಗಿ ಆಸ್ಪತ್ರೆಯ ಮುಖ್ಯಸ್ಥ ಡಾ.ರವೀಂದ್ರ ಮದ್ರಕಿ ನೇತ್ವತೃದ ತಂಡ ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ಮಾಡಿದೆ.
ವಿಜಯಪುರದಲ್ಲೇ ಮೊದಲ ಕಿಡ್ನಿ ಕಸಿ ಯಶಸ್ವಿ ಚಿಕಿತ್ಸೆ
ಸದ್ಯ ಕಿಡ್ನಿ ಪಡೆದ ಸಚಿನ್ ಹಾಗೂ ಕಿಡ್ನಿ ದಾನ ಮಾಡಿದ ಅಜ್ಜಿ ಉದ್ದವ್ವ ಆರೋಗ್ಯವಾಗಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ನಡೆದ ಮೊದಲು ಕಿಡ್ನಿ ಕಸಿ ಯಶಸ್ವಿಯಾಗಿ ಯಶೋಧಾ ಆಸ್ಪತ್ರೆ ಪಾತ್ರವಾಗಿದೆ.
ಇದನ್ನೂ ಓದಿ: Vijayapura: ದೇವರ ಸನ್ನಿಧಿಯಲ್ಲಿ ಚಪ್ಪಲಿ ಸೇವೆ! ಒಂದು ಪೈಸೆಯನ್ನೂ ಪಡೆಯದ ಗೆಳೆಯರ ಬಳಗ
ಕಿಡ್ನಿ ಕಸಿ ಮಾಡಿಸಿಕೊಂಡ ಯುವಕ ಸಚಿನ್ ತನ್ನ ಅಜ್ಜಿ ತನಗೆ ಪುನರ್ಜನ್ಮ ನೀಡಿದ್ದಾರೆ. ಇಂದು ಅಜ್ಜಿ ನೀಡಿದ ಕಿಡ್ನಿ ದಾನದಿಂದ ಬದುಕುವ ಹುಮ್ಮಸ್ಸು ಹೆಚ್ಚಾಗಿದೆ ಎಂದು ಅಜ್ಜಿಯ ತ್ಯಾಗವನ್ನು ಹೊಗಳಿದ್ದಾರೆ.
ಇದನ್ನೂ ಓದಿ: Vijayapura Voters List: ಮತದಾರರೇ ಗಮನಿಸಿ, ವೋಟರ್ಸ್ ಲಿಸ್ಟ್ನಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಹೀಗೆ ಮಾಡಿ
ಅಂಗಾಂಗ ದಾನ ಸಿಗದೇ ರಾಜ್ಯದಲ್ಲಿ ನಿತ್ಯ ಸಾವಿರಾರು ಜನ ಸಾಯುತ್ತಿದ್ದಾರೆ. ಸರ್ಕಾರಗಳು ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದಾಗ ಅಂಗಾಂಗ ವೈಫಲ್ಯ ದಿಂದ ಸಾಯುವವರ ಸಂಖ್ಯೆ ಕಡಿಮೆಯಾಗಬಹುದು. ಇದಕ್ಕೆ 73 ವರ್ಷದ ಅಜ್ಜಿ ಉದ್ದವ್ವ ಉತ್ತಮ ಉದಾಹರಣೆಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ