ಬಾಗಲಕೋಟೆ: ರಸ್ತೆ ಮೇಲೆ ಉರುಳು ಸೇವೆ ಮಾಡುತ್ತಾ ಸಾಗುತ್ತಿರುವ ವ್ಯಕ್ತಿ. ಕೈ ಮುಗಿಯುತ್ತಾ ಭಕ್ತಿಯಿಂದ ದೇವರೆಡೆ (God) ತೆರಳುತ್ತಿರುವ ಭಕ್ತ. ವಾಹನಗಳು ಓಡಾಡೋ ರಸ್ತೆಯಲ್ಲಿ ಹೀಗೆ ಉರುಳು ಸೇವೆಯಾದ್ರೂ (Urulu Seva) ಯಾಕೆ? ಇವ್ರ ಈ ಉರುಳು ಸೇವೆಯ ಗುರಿ ಇರೋದಾದ್ರೂ ಎಲ್ಲಿ ಅಂತೀರಾ? ಕೇಳಿದ್ರೆ ಒಂದು ಕ್ಷಣಕ್ಕೆ ನೀವೇ ಶಾಕ್ ಆಗ್ತೀರ.
ಹೌದು, ಹೀಗೆ ಗೋಣಿಚೀಲ ಸುತ್ತಿಕೊಂಡು ಉರುಳು ಸೇವೆ ಮಾಡುತ್ತಾ ಸಾಗುತ್ತಿರುವ ಇವರು ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ 50ರ ಹರೆಯದ ಈಶ್ವರ ಯಲ್ಲಪ್ಪ ಅಂಬಣ್ಣವರ. ಅಂದಹಾಗೆ ಇವರು ಹೊರಟಿರುವುದು ತಮ್ಮ ಸ್ವಗ್ರಾಮದಿಂದ ಮಹಾರಾಷ್ಟ್ರದ ಫಂಡರಾಪುರ ವಿಠ್ಠಲನ ಸಾನಿಧ್ಯಕ್ಕೆ. ಅದೂ ಕೂಡಾ ಹೆದ್ದಾರಿಯಲ್ಲಿ ಉರುಳು ಸೇವೆ ಮಾಡಿ. ಸದ್ಯ ಅವರು ಉರುಳುತ್ತಾ ಉರುಳುತ್ತಾ ಬಾಗಲಕೋಟೆ ಜಿಲ್ಲೆ ತಲುಪಿದ್ದಾರೆ. ಒಟ್ಟು 380 ಕಿಲೋ ಮೀಟರ್ ಉರುಳು ಸೇವೆಯನ್ನ ಈ ಈಶ್ವರ ಯಲ್ಲಪ್ಪ ಕೈಗೊಳ್ಳಲಿದ್ದಾರೆ.
ಎರಡು ವರ್ಷಗಳಿಂದ ಉರುಳುಸೇವೆ
ಹಲವಾರು ಭಕ್ತರು ಪಾದಯಾತ್ರೆ ಮತ್ತು ಸೈಕಲ್ ಮೂಲಕ ತೆರಳಿ ಹರಕೆ ತೀರಿಸುವುದನ್ನ ನೋಡಿದ್ದೇವೆ. ಆದರೆ ಈಶ್ವರ ಯಲ್ಲಪ್ಪ ಅಂಬಣ್ಣವರ ಉರುಳು ಸೇವೆ ಮೂಲಕ ದೇವರ ಹರಕೆ ತೀರಿಸಲು ಮುಂದಾಗಿದ್ದಾರೆ. ಸವದತ್ತಿ, ಹುಲಕುಂದ, ಯಾದವಾಡ, ಶಿರೋಳ, ಸಿದ್ದಾಪುರ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಮೂಲಕ ಜಂಬಗಿ, ಸಾವಳಗಿ, ಜತ್ತ, ಶೇಗಾಂವ್, ಸುನಂದಾ, ಮಾಂಝರಿ, ಕರಡಿ, ಮೂಲಕ ಮಹಾರಾಷ್ಟ್ರದ ಫಂಡರಪುರ ತಲುಪಲಿದ್ದಾರೆ. ಇವರು ಕಳೆದ ಎರಡು ವರ್ಷಗಳಿಂದ ಉರುಳು ಸೇವೆಯನ್ನ ಮಾಡುತ್ತಾ ಬಂದಿದ್ದಾರೆ.
ಇದನ್ನೂ ಓದಿ: Kudala Sangama: ಕೂಡಲ ಸಂಗಮ ಕ್ಷೇತ್ರದಲ್ಲಿ ಪೂಜೆ, ದರ್ಶನ ಸಂಪೂರ್ಣ ವಿವರ ಇಲ್ಲಿದೆ
ಜನವರಿ 14ರಂದು ಆರಂಭವಾದ ಈ ಉರುಳು ಸೇವೆ ಸುಮಾರು ಒಂದು ತಿಂಗಳವರೆಗೆ ಮುಂದುವರೆಯುತ್ತದೆ. ಪ್ರತಿ ದಿನ ಇವರು 8 ರಿಂದ 10 ಕಿಲೋ ಮೀಟರ್ವರೆಗೆ ಉರುಳು ಸೇವೆ ಮಾಡುತ್ತಾರೆ. ರಸ್ತೆಯ ಪಕ್ಕದಲ್ಲಿರುವ ದೇವಸ್ಥಾನಗಳಲ್ಲಿ ರಾತ್ರಿ ಕಳೆಯುತ್ತಾರೆ. ಗ್ರಾಮಸ್ಥರು ಮತ್ತು ವಾಹನ ಸವಾರರು ನೀಡುವ ಹಣ್ಣು ಮತ್ತು ಊಟವನ್ನ ಸ್ವೀಕರಿಸಿ ಮತ್ತೆ ಮುಂದೆ ಸಾಗುತ್ತಾರೆ.
ಇದನ್ನೂ ಓದಿ: Vijayapura: ಶಾಲೆ ಅಭಿವೃದ್ಧಿಗೆ 50 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿದ ಗ್ರಾಮಸ್ಥರು!
ಇನ್ನು ಅವರ ಕುಟುಂಬಸ್ಥರು ಹಿಂದೆ ಸೈಕಲ್ ನಲ್ಲಿ ಬಟ್ಟೆ, ನೀರು, ಊಟ, ಇತರೆ ವಸ್ತುಗಳನ್ನು ತೆಗೆದುಕೊಂಡು ಈಶ್ವರ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇಂತಹ ಆಧುನಿಕ ಭರಾಟೆಯಲ್ಲಿಯೂ ಸಾಂಪ್ರದಾಯಿಕ ಪದ್ದತಿ, ದೈವಿಕ ನಂಬಿಕೆಯಲ್ಲಿ ಉರುಳು ಸೇವೆ ಮಾಡುತ್ತಾ ಹರಕೆ ತೀರಿಸುತ್ತಿರುವುದು ನಿಜಕ್ಕೂ ವಿಶೇಷವೇ ಸರಿ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ