Organic Jaggery: ಬರದ ನಾಡಿನಲ್ಲಿ 18 ಬಗೆಯ ಬೆಲ್ಲ, ಇಂಥಾ ವೆರೈಟಿ ನೀವೆಲ್ಲೂ ನೋಡಿರಲ್ಲ ಬಿಡಿ!

ಬೆಲ್ಲದಲ್ಲಿ ಹತ್ತಾರು ಬಗೆ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲೊಂದು ಪುಟ್ಟ ಹಳ್ಳಿಯ ಆಲೆಮನೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 18 ವಿವಿಧ (Varieties) ಬಗೆಯ ಬೆಲ್ಲ ತಯಾರಾಗ್ತಿದೆ.

ಸಾವಯವ ಬೆಲ್ಲ ತಯಾರಿಸುತ್ತಿರುವುದು

ಸಾವಯವ ಬೆಲ್ಲ ತಯಾರಿಸುತ್ತಿರುವುದು

 • Share this:
  ನಿಮಗೆ ಬೆಲ್ಲದಲ್ಲಿ (Jaggery) ಎಷ್ಟು ಬಗೆ ಗೊತ್ತು? ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಬಳಸುವ ಉಂಡೆ ಅಥವಾ ಅಚ್ಚಿನ ಬೆಲ್ಲ ಮತ್ತು ಈ ನಡುವೆ ಆರೋಗ್ಯದ (Health) ದೃಷ್ಟಿಯಿಂದ ಹಿಂದಿನ ಕಾಲದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಕಪ್ಪು ಬೆಲ್ಲ (Black Jaggery) ಈಗೀಗ ಮತ್ತೆ ಮುನ್ನಲೆಗೆ ಬಂದಿದೆ. ಆದ್ರೆ ಆರೋಗ್ಯವಂತ ಸಿಹಿ (Sweet) ಎಂದೇ ಕರೆಸಿಕೊಳ್ಳುವ ಬೆಲ್ಲದಲ್ಲಿ ಹತ್ತಾರು ಬಗೆ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲೊಂದು ಪುಟ್ಟ ಹಳ್ಳಿಯ ಆಲೆಮನೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 18 ವಿವಿಧ (Varieties) ಬಗೆಯ ಬೆಲ್ಲ ತಯಾರಾಗ್ತಿದೆ. ಯಾವುದೇ ಹಾನಿಕಾರಕ ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ಇಷ್ಟು ವೆರೈಟಿ ಬೆಲ್ಲ ತಯಾರಿಸಬಹುದು ಅನ್ನೋ ವಿಚಾರವೇ ಅಚ್ಚರಿ.

  ಬಗೆಬಗೆಯ ಬೆಲ್ಲ, ಇಲ್ಲಿ ನೋಡಿರಲ್ಲಾ...

  ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಸಂಗಾನಟ್ಟಿ ಎನ್ನುವ ಪುಟ್ಟ ಗ್ರಾಮದಲ್ಲಿ ಮಹಲಿಂಗಪ್ಪ ಇಟ್ನಾಳ್ ಎಂಬ ಯುವ ರೈತ ಈ ವೆರೈಟಿ ಬೆಲ್ಲ ತಯಾರಿಸುತ್ತಾರೆ. ತಮ್ಮದೇ ಆದ ಒಂದೂವರೆ ಎಕರೆ ಜಮೀನಿನಲ್ಲಿ ಆಲೆಮನೆ ನಿರ್ಮಿಸಿ ವಿವಿಧ ಬಗೆಯ ಸಾವಯವ ಬೆಲ್ಲ, ಬೆಲ್ಲದ ಪುಡಿ, ಕಾಕಂಬಿ ಹೀಗೆ ಬೆಲ್ಲಕ್ಕೆ ಸಂಬಂಧಪಟ್ಟ ಹಲವು ರೀತಿಯ ರುಚಿಕರ ಬೆಲ್ಲವನ್ನು ಇಲ್ಲಿ ತಯಾರಿಸುತ್ತಾರೆ.

  ವಿವಿಧ ಮಿಶ್ರಣದಿಂದ ತಯಾರಾದ ಬೆಲ್ಲ

  ಅಷ್ಟೇ ಅಲ್ಲದೇ ಬೆಲ್ಲದಲ್ಲಿ ವಿವಿಧ ಮಿಶ್ರಣವನ್ನು ಬೆರೆಸಿ ಇಲ್ಲಿ ರುಚಿಯಾದ ಬೆಲ್ಲವನ್ನು ತಯಾರಿಸಲಾಗುತ್ತದೆ. ಅದರಲ್ಲಿ ಮಸಾಲೆ ಬೆಲ್ಲ, ಶುಂಠಿ ಬೆಲ್ಲ, ಏಲಕ್ಕಿ ಬೆಲ್ಲ, ಲವಂಗ ಬೆಲ್ಲ, ದಾಲ್ಚಿನ್ನಿ ಬೆಲ್ಲ, ಶುದ್ದ ಹಸುವಿನ ತುಪ್ಪದ ಬೆಲ್ಲ ಹೀಗೆ ಒಟ್ಟು 18 ರೀತಿಯ ವಿವಿಧ ತೆರನಾದ ಬೆಲ್ಲದ ಪೆಂಟೆಗಳನ್ನು ಈ ಆಲೆಮನೆಯಲ್ಲಿ ತಯಾರಿಸಲಾಗುತ್ತದೆ.
  ಸಣ್ಣ ಚಾಕ್ಲೇಟ್  ಸೈಜಿನಿಂದ 1 ಕೆಜಿಯವರಗೆ ವಿವಿಧ ತೂಕದ ಬೆಲ್ಲ ಇಲ್ಲಿ ಸಿಗುತ್ತದೆ.

  ಇದನ್ನೂ ಓದಿ: Palm Jaggery benefits: ಈ ಬೆಲ್ಲ ಬರೀ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು!

  ಇಲ್ಲಿ ತಯಾರಿಸುವ ಬೆಲ್ಲಕ್ಕೆ ಬಹಳ ಬೇಡಿಕೆ ಇದೆ. ವಿಶೇಷವೆಂದರೆ ಇಲ್ಲಿ ತಯಾರಿಸುವ ಬೆಲ್ಲದ ಉತ್ಪನ್ನಗಳನ್ನು ರಾಜ್ಯದ ಹಲವು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಅಷ್ಟೇ ಅಲ್ಲ ದೇಶ-ವಿದೇಶಗಳಿಗೂ ಕೂಡ ಈ ಬೆಲ್ಲದ ಉತ್ಪನ್ನಗಳನ್ನು ರಪ್ತು ಮಾಡಲಾಗುತ್ತದೆ.

  ಗಿಫ್ಟ್ ಮಾಡೋಕೂ ಸಿಗುತ್ತೆ ಸ್ಪೆಷಲ್ ಬೆಲ್ಲ

  ಇಲ್ಲಿ ಬೆಲ್ಲವನ್ನು ಬಳಸಿ ನಾನಾ ಪ್ರಯೋಗಗಳನ್ನು ಮಾಡಲಾಗ್ತಿದೆ. ಎಷ್ಟರಮಟ್ಟಿಗೆ ಎಂದರೆ ಶುಭ ಸಮಾರಂಭಗಳಿಗೆ ಉಡುಗೊರೆಯಾಗಿ ಕೊಡಲು ಬಣ್ಣಬಣ್ಣದ ಬೆಲ್ಲವೂ ದೊರೆಯುತ್ತೆದ. ನೋಡಲು ಸುಂರವಾಗಿರುವ ರಾಸಾಯನಿಕ ಮುಕ್ತ ಬೆಲ್ಲ ಈ ಆಲೆಮನೆಯಲ್ಲಿ ಲಭ್ಯವಿದೆ.

  ಈ ಆಲೆಮನೆಯಲ್ಲಿ ಒಟ್ಟು 32 ಜನ ಕೆಲಸ ನಿರ್ವಹಿಸುತ್ತಾರೆ. ಆಲೆಮನೆಯ ಒಟ್ಟು ಜವಾಬ್ದಾರಿ ಮಾಲೀಕರ ಪತ್ನಿ ಮಹಾದೇವಿ ಇಟ್ನಾಳ್ ನೋಡಿಕೊಂಡರೆ ಮಾರುಕಟ್ಟೆ ಹಾಗೂ ಇನ್ನುಳಿದ ಎಲ್ಲ ಜವಾಬ್ದಾರಿ ಮಹಲಿಂಗಪ್ಪ ಇಟ್ನಾಳ್ ಅವರದ್ದು. ಹೆಮ್ಮೆಯ ಸಂಗತಿ ಎಂದರೆ ಕೋವಿಡ್ ನಂತಹ ಸಂಕಷ್ಟ ಸಮಯದಲ್ಲೂ ಕೂಡ ಉದ್ಯೋಗ ನೀಡಿದ ಹೆಮ್ಮೆ ಇವರದ್ದು.  ರಾಸಾಯನಿಕ ಬೆಲ್ಲಕ್ಕೆ ಗುಡ್ ಬೈ ಹೇಳಿ

  ಪ್ರತಿದಿನ ನಾವು ಬಳಸುವ ವಸ್ತುಗಳಲ್ಲಿ ಬಹುತೇಕ ಹಾನಿಕಾರಕ ರಾಸಾಯನಿಕಗಳನ್ನು ಬಳಸಿದವೇ ಆಗಿರುತ್ತವೆ. ಇವುಗಳಿಂದ ನಾನಾ ಬಗೆಯ ಖಾಯಿಲೆಗಳಿಗೆ ತುತ್ತಾಗುವ ಅಪಾಯ ಇದ್ದೇ ಇರುತ್ತದೆ. ಅನೇಕ ಬಾರಿ ಇದೆಲ್ಲಾ ವಿಚಾರ ತಿಳಿದಿದ್ದರೂ ಅನಿವಾರ್ಯವಾಗಿ ಅವುಗಳನ್ನೇ ಸೇವಿಸುತ್ತೇವೆ. ಆದರೆ ಅದೇ ಬೆಲೆಗೆ ಆರೋಗ್ಯವಂತ ವಸ್ತು ಸಿಕ್ಕಾಗ ಖಂಡಿತಾ ಅವುಗಳನ್ನು ಬಲಿಸುವುದು ಒಳ್ಳೆಯದೇ.

  ಇದನ್ನೂ ಓದಿ: Organic Farming Training: 30 ದಿನಗಳಲ್ಲಿ ಸಾವಯವ ಕೃಷಿ ಕಲಿಯಿರಿ! ಇಲ್ಲಿ ಅಪ್ಲೈ ಮಾಡಿ

  ಇನ್ನು ಬೆಲ್ಲದ ಜೊತೆ ಇವರು ಬಳಸುವ ಶುಂಠಿ, ಲವಂಗ, ಏಲಕ್ಕಿ ಮುಂತಾದ ಮಸಾಲೆ ಪದಾರ್ಥಗಳು ಕೂಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾಗಿ ಸಿಹಿಯಾದ ಆರೋಗ್ಯಕ್ಕೆ ಈ ಬಗೆಬಗೆಯ ಬೆಲ್ಲ ದಾರಿ ಮಾಡಿಕೊಡುತ್ತೆ ಎಂದರೆ ತಪ್ಪಾಗೋದಿಲ್ಲ.

  (ವರದಿ: ಶಿವಾನಂದ ನೇಗಿನಾಳ)
  Published by:Suraj Risaldar
  First published: