Farmers Protest: ಫೆ.6ರಂದು ದೇಶಾದ್ಯಂತ ಚಕ್ಕಾ ಜಾಮ್; ದಟ್ಟಣೆಯಲ್ಲಿ ಸಿಲುಕುವ ನಾಗರಿಕರಿಗೆ ನೀರು, ಆಹಾರ ಒದಗಿಸಲು ಮುಂದಾದ ರೈತರು

ಭಾರೀ ಜನರಿರುವ ಕಡೆ ದೊಡ್ಡ ಮಟ್ಟದ ಅಪಾಯ ತಂದೊಡ್ಡಬಹುದು ಎಂಬ ಪರಿವೆಯೇ ಇಲ್ಲದೆ ರಸ್ತೆಗಳಲ್ಲಿ ಮೊಳೆಗಳನ್ನು ನೆಡಲಾಗಿದೆ. ಜೊತೆಗೆ ತಾತ್ಕಾಲಿಕವಾಗಿ ಇಂಟರ್ನೆಟ್, ಕರೆಂಟ್ ಮತ್ತು ನೀರನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗೆ ತೊಂದರೆ ಕೊಡುತ್ತಿರುವ ಹಿನ್ನೆಲೆಯಲ್ಲಿ 'ಮಾತುಕತೆ ವಿರೋಧಿಸಿ' ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿಕೆ ಬಿಡುಗಡೆ ಮಾಡಿದೆ.

ದೆಹಲಿ ರೈತರ ಪ್ರತಿಭಟನೆ.

ದೆಹಲಿ ರೈತರ ಪ್ರತಿಭಟನೆ.

  • Share this:
ನವದೆಹಲಿ (ಫೆ. 2): ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರು 'ಕೇಂದ್ರ ಸರ್ಕಾರ ಮತ್ತು ಪೊಲೀಸರು ತಮಗೆ ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸುವವರೆಗೆ ಸರ್ಕಾರದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಾಧ್ಯವಿಲ್ಲ' ಎಂದು ಹೇಳಿದ್ದರು.‌ ಇದೀಗ ಫೆಬ್ರವರಿ 6ರಂದು 'ಚಕ್ಕಾ ಜಾಮ್' ನಡೆಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ಚಕ್ಕಾ ಜಾಮ್ ವೇಳೆ ಸಿಲುಕುವ ನಾಗರಿಕರಿಗೆ ಈ ಸಮಸ್ಯೆ ಉಂಟಾಗಲು ಕೇಂದ್ರ ಸರ್ಕಾರ ಯಾವ ರೀತಿ ಕಾರಣ ಎಂಬುದನ್ನು ತಿಳಿಸಿಕೊಡಲು ಮುಂದಾಗಿದ್ದಾರೆ.

ಈ ಬಗ್ಗೆ ಗಾಜಿಯಾಬಾದ್ ಗಡಿಯ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್, ಫೆಬ್ರವರಿ 6ರಂದು ದೇಶಾದ್ಯಂತ 'ಚಕ್ಕಾ ಜಾಮ್' ನಡೆಯಲಿದೆ. ಆದರೆ ದೆಹಲಿಯಲ್ಲಿ ಮಾಡುವುದಿಲ್ಲ. ಚಕ್ಕಾ ಜಾಮ್ ವೇಳೆ ಸಿಲುಕುವ ನಾಗರಿಕರಿಗೆ ಅಲ್ಲಿಯೇ ನೀರು ಮತ್ತು ಆಹಾರ ಪೂರೈಸಲಾಗುವುದು. ಜೊತೆಗೆ ಇಂಥ ಸಮಸ್ಯೆ ಸೃಷ್ಟಿಯಾಗಲು ಕೇಂದ್ರ ಸರ್ಕಾರ ಕಾರಣ ಎಂಬುದನ್ನು ಮನವರಿಕೆ ಮಾಡಲಾಗುವುದು ಎಂದಿದ್ದಾರೆ.

ಇದನ್ನು ಓದಿ: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಸೂಪರ್​ಸ್ಟಾರ್ ರಿಹಾನ್ನಾ ಹಿನ್ನೆಲೆ ಏನು ಗೊತ್ತಾ..?

ಈಗಾಗಲೇ ಕೇಂದ್ರ ಸರ್ಕಾರ ಮತ್ತು ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳ ಪದಾಧಿಕಾರಿಗಳ ಜೊತೆ 11 ಸುತ್ತು ಮಾತುಕತೆ ಆಗಿ ಅಷ್ಟೂ ಸುತ್ತಿನ ಮಾತುಕತೆಗಳು ವಿಫಲವಾಗಿವೆ. ರೈತರು ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ತಾವು ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ರೈತರ ಹೋರಾಟ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ಈಗ ರೈತರ  ಜೊತೆ ಔಪಚಾರಿಕ ಚರ್ಚೆ ನಡೆಸುವ ಪ್ರಯತ್ನ ಮಾಡುತ್ತಿದೆ. ಆದರೆ ರೈತ ಸಂಘಟನೆಗಳನ್ನು ಮುನ್ನಡೆಸುತ್ತಿರುವ ಸಂಯುಕ್ತ್ ಕಿಸಾನ್ ಮೋರ್ಚಾ ಕೇಂದ್ರ ಸರ್ಕಾರ ಮತ್ತು ಪೊಲೀಸರು ತಮಗೆ ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸುವವರೆಗೆ ಕೇಂದ್ರ ಸರ್ಕಾರದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ರೈತರು ದೆಹಲಿ ಪ್ರವೇಶ ಮಾಡುತ್ತಾರೆ ಎನ್ನುವ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿರುವ ರಸ್ತೆಗಳಲ್ಲಿ ಹಲವು ಸುತ್ತಿನ ಬ್ಯಾರಿಕೇಡ್‌ ಹಾಕಲಾಗಿದೆ. ಅದರ ಮೇಲೆ ಮುಳ್ಳು ತಂತಿ ಬೇಲಿಗಳನ್ನು ಹಾಕಲಾಗಿದೆ. ರಸ್ತೆಗಳಲ್ಲಿ ಕಂದಕ ಸೃಷ್ಟಿಸಲಾಗಿದೆ.  ಭಾರೀ ಜನರಿರುವ ಕಡೆ ದೊಡ್ಡ ಮಟ್ಟದ ಅಪಾಯ ತಂದೊಡ್ಡಬಹುದು ಎಂಬ ಪರಿವೆಯೇ ಇಲ್ಲದೆ ರಸ್ತೆಗಳಲ್ಲಿ ಮೊಳೆಗಳನ್ನು ನೆಡಲಾಗಿದೆ. ಜೊತೆಗೆ ತಾತ್ಕಾಲಿಕವಾಗಿ ಇಂಟರ್ನೆಟ್, ಕರೆಂಟ್ ಮತ್ತು ನೀರನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗೆ ತೊಂದರೆ ಕೊಡುತ್ತಿರುವ ಹಿನ್ನೆಲೆಯಲ್ಲಿ 'ಮಾತುಕತೆ ವಿರೋಧಿಸಿ' ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿಕೆ ಬಿಡುಗಡೆ ಮಾಡಿದೆ.
ಇದಲ್ಲದೆ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬುದನ್ನು ಬಿಟ್ಡು ರೈತರು ಕೇಂದ್ರ ಸರ್ಕಾರದಿಂದ ಮತ್ತೇ ಇನ್ನೇನನ್ನೂ ನಿರೀಕ್ಷೆ ಮಾಡುವುದಿಲ್ಲ ಎಂಬುದಾಗಿಯೂ ಸಂಯುಕ್ತ್ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.
Published by:HR Ramesh
First published: