ಉತ್ತರ ಕನ್ನಡ: ನೌಕಾದಳದ ಸೆಲ್ಯೂಟ್, ಪೊಲೀಸ್ ಇಲಾಖೆಯ ಕುಶಾಲತೋಪು ಗೌರವ.. ಊರಿಡೀ ನೀರವ ಮೌನದ ನಡುವೆ ಪಂಚಭೂತಗಳಲ್ಲಿ ಲೀನರಾದರು ಆ ಅಧಿಕಾರಿ. ಹೌದು, ದೇಶ ಸೇವೆ ಮಾಡುತ್ತಾ ಅಕಾಲಿಕವಾಗಿ ಅಗಲಿದ ಅಂಕೋಲಾದ ಯೋಧನಿಗೆ ಇಡೀ ಊರೇ ಮುಂದೆ ನಿಂತು ಗೌರವ ಸೂಚಿಸಿತು. ನಿಜ, ಉತ್ತರ ಕನ್ನಡದ ಅಂಕೋಲಾದ ಬೀದಿ ಬೀದಿಗಳಲ್ಲಿ ನೀರವ ಮೌನ ಮೈದುಂಬಿತ್ತು. ಊರಿನ ಯೋಧನೊಬ್ಬನ ಸಾವು ನಗರದ ಹಾದಿಗಳನ್ನು ಸ್ತಂಭೀಭೂತಗೊಳಿಸಿತ್ತು.
ನೌಕಾದಳ, ಪೊಲೀಸ್ ಇಲಾಖೆಯ ಗೌರವ ಸೂಚಕವಾಗಿ ಕುಶಾಲ ತೋಪಿನ ಸದ್ದು ಮೊಳಗಿತು. ಈ ಮೂಲಕ ಅಂಕೋಲಾದ ಲಕ್ಷ್ಮೇಶ್ವರ ನಿವಾಸಿ, ನೌಕಾದಳದ ಯೋಧ ನಾಗರಾಜ್ ಮುಕುಂದ ಕಳಸ ಅವರಿಗೆ ಅಂತಿಮ ವಿದಾಯ ಹೇಳಲಾಯಿತು. ನೆರೆದಿದ್ದವರೆಲ್ಲರ ಭಾವಪೂರ್ಣ ನಮನಗಳೊಂದಿಗೆ ನಾಡಿನ ಹೆಮ್ಮೆಯ ಯೋಧನನ್ನು ಎಂದೂ ತಿರುಗಿ ಬಾರದ ಲೋಕಕ್ಕೆ ಬೀಳ್ಕೊಡಲಾಯಿತು. ಕುಟುಂಬಿಕರು, ಸ್ನೇಹಿತರ ಕಣ್ಣಾಲಿಗಳು ಒದ್ದೆಯಾದವು.
ಅಪಘಾತಕ್ಕೆ ಬಲಿಯಾದ ಯೋಧ
ನಾಗರಾಜ್ ಮುಕುಂದ ಅವರು ಕೇವಲ 33 ವರ್ಷದ ಯುವಕ. ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಕೆಲಸ ಮಾಡುತ್ತಿದ್ದ ಅವರು, ನಾಲ್ಕು ದಿನದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇನ್ನೇನು ಎರಡು ವರ್ಷದಲ್ಲಿ ಅವರು ತಮ್ಮ ನಿವೃತ್ತಿ ಜೀವನ ಆರಂಭಿಸಲಿದ್ದರು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು.
ಅಂಡಮಾನ್ ನಲ್ಲಿದ್ದ ನಾಗರಾಜ್
2010ರಲ್ಲಿ ಕಾರವಾರದ ಐಎನ್ ಎಸ್ ನಲ್ಲಿ ಸೇವೆ ಸಲ್ಲಿಸಿ ನಂತರ ನಾಗರಾಜ್ ಅವರು, ಮುಂಬೈ ಹಾಗೂ ಅಂಡಮಾನ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಡೀ ಊರು ಅವರ ದೇಶಸೇವೆಗೆ ಹೆಮ್ಮೆ ಪಡುವಂತಹ ಯೋಧನಾಗಿದ್ದರು ನಾಗರಾಜ್. ಆದರೆ, ಅವರ ಅಕಾಲಿಕ ಮರಣ ಗ್ರಾಮಸ್ಥರಲ್ಲೂ ದುಃಖ ತರಿಸಿತ್ತು. ವ್ಯಾನ್ ಮೂಲಕ ಆಗಮಿಸಿದ ಪಾರ್ಥೀವ ಶರೀರ ಜೊತೆಗೆ ಆಗಮಿಸಿದ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸಾಗುತ್ತಾ ಕಂಬನಿ ಮಿಡಿದರು.
ಸಕಲ ಸರಕಾರಿ ಗೌರವ
ಕರ್ನಾಟಕ ಪೋಲಿಸ್ ಹಾಗೂ ನೌಕಾದಳದ ಸೈನಿಕರು ಸಕಲ ಸರ್ಕಾರಿ ಗೌರವದೊಂದಿಗೆ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. 21 ಸಲ ಕುಶಾಲತೋಪನ್ನು ಹಾರಿಸಿ ಮೃತರ ಆತ್ಮಕ್ಕೆ ಗೌರವ ಸಲ್ಲಿಸಿದರು. ಹೀಗೆ ವೀರ ಯೋಧನನ್ನು ಇಡೀ ಅಂಕೋಲಾವೇ ತೀರಾ ನೋವಿನಿಂದ ಬೀಳ್ಕೊಟ್ಟಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ