Uttara Kannada: ಶಾರದಜ್ಜಿಯ ಹಾಡು ಕೇಳಿ! ಇವರು ಹೊನ್ನಾವರದ ಜಾನಪದ ಗಾನಶಾರದೆ

ಶಾಲೆ ಕಲಿಯದಿದ್ದರೂ ಜಾನಪದ ಹಾಡುಗಳು ಇವರ ಬಾಯಲ್ಲಿ ಸುಲಲಿತವಾಗಿ ಹರಿದಾಡುತ್ತವೆ.

ಶಾರದಾ ಮೊಗೆರ್

"ಶಾರದಾ ಮೊಗೆರ್"

 • Share this:
  ಉತ್ತರ ಕನ್ನಡ: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯು (Karnataka Janapada Academy Award) ಈ ಬಾರಿ ತೆರೆಮೆರೆಕಾಯಿಯನ್ನು ಅರಸಿ ಬಂದಿದೆ. ಕುಗ್ರಾಮದ ಗಾನಕುಸುಮ ಇದೀಗ ನಾಡಿಗೆ ಪರಿಚಯವಾಗುವಂತೆ ಆಗಿದೆ. ಜಾನಪದ ಸಾಲುಗಳು ಎಷ್ಟೇ ಉದ್ದವಿದರೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ (Honnavara) ಈ ಮಹಾತಾಯಿ ಅದನ್ನ ಸರಾಗವಾಗಿ ಹಾಡಬಲ್ಲಳು. ಅವರು ಹಾಡೋ ಶೈಲಿಗೆ ತಲೆದೂಗ್ಲೇಬೇಕು. ಇನ್ನೊಂದು ಅಚ್ಚರಿ ಅಂದ್ರೆ, ಇವರ್ಯಾವತ್ತೂ ಶಾಲೆ ಮೆಟ್ಟಿಲು ಹತ್ತಿದ್ದೇ ಇಲ್ಲ. ಅಂತಹ ಗಾನ ಶಾರದೆಗೆ ಈ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸಂದಿದೆ. ಹಾಗಾದರೆ ಅವರು ಯಾರು? ಅವರ ಹಾಡೇನು? ಪಾಡೇನು? ಎಲ್ಲ ಇಲ್ಲಿದೆ. 

  ಶಾರದಾ ಎಂಬ ಗಾನ ಶಾರದೆ!
  ಹೌದು, ಈ ಗಾನ ಶಾರದೆಯ ಹೆಸರು ಕೂಡಾ ಶಾರದಾ ಮಹಾದೇವ್ ಮೊಗೇರ್. ಶಾಲೆ ಕಲಿಯದಿದ್ದರೂ ಜಾನಪದ ಹಾಡುಗಳು ಇವರ ಬಾಯಲ್ಲಿ ಸುಲಲಿತವಾಗಿ ಹರಿದಾಡುತ್ತವೆ. ಮೂಲತಃ ಕೃಷಿ ಕುಟುಂಬದ ಜನರಾದ ಇವರು ಸಮುದ್ರದ ಅಲೆಗಳು ಸೃಷ್ಟಿಸಿದ ನೆರೆ ಸಮಸ್ಯೆಯಿಂದ ಬಹು ಹಿಂದೆಯೇ ಬೆದ್ರೆಕೇರಿಗೆ ಬಂದು ನೆಲೆಸಿದವರು.

  ಇವರು ತಮ್ಮ ಆರನೇ ವಯಸ್ಸಿನಲ್ಲೇ ನಾಟಿ ಮಾಡುವ ಹೆಂಗಸರ ಹಾಡುಗಳನ್ನು ಕೇಳಿ ಹಾಡುಗಾರಿಕೆಯನ್ನು ಕರಗತ ಮಾಡಿಕೊಂಡರು. ಹೀಗೆ ತನ್ನ ಇಳಿವಯಸ್ಸಿನಲ್ಲೂ ಬಿಡದ ಗಾನಸುಧೆಯ ಮೋಹ ಇಂದು ಅವರನ್ನ ಅರ್ಹವಾಗಿಯೇ ಪ್ರಶಸ್ತಿ ಅರಸಿ ಬರುವಂತೆ ಮಾಡಿದೆ.

  ಕುಗ್ರಾಮದ ಗಾನ‌ ಕುಸುಮ
  ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಬೆದ್ರಕೇರಿ ಇಂದಿಗೂ ಕುಗ್ರಾಮವಾಗಿಯೇ ಉಳಿದಿದೆ. ಇನ್ನೂ ಇವರ ಊರಿಗೆ ಯಾವುದೇ ಬಸ್ಸಿನ ಸೌಕರ್ಯವಿಲ್ಲ, ಮಕ್ಕಳೆಲ್ಲ ಎರಡು ಕಿ.ಮೀ ನಡೆದು ಶಾಲೆಗೆ ಹೋಗಬೇಕು. ಇಂತಹ ಕುಗ್ರಾಮದ ಮಡಿಲಲ್ಲಿ ಅರಳಿದ ಕಲಾ ಕುಸುಮದ ಪರಿಮಳ ಇಂದು ಸಾಧಿಸುವವರಿಗೆ ಯಾವುದೇ ಸರ್ಟಿಫಿಕೇಟ್ ಬೇಡ ಅನ್ನೊದನ್ನ ಸಾಬೀತುಪಡಿಸಿದೆ. ಜೊತೆಗೆ, ತೆರೆಮರೆಯಲ್ಲಿದ್ದ ಜಾನಪದ ಸಾಧಕಿಯನ್ನ ಸರ್ಕಾರವು ನಾಡಿಗೆ ಪರಿಚಯಿಸಿದಂತಾಗಿದೆ.

  ಇದನ್ನೂ ಓದಿ: Ghatiana Dwivarna: ಬಿಳಿ ಮೈ, ಕಾಲು ಚಾಕ್ಲೇಟ್ ಬಣ್ಣ! ಅಪರೂಪದ ಘಾಟಿಯಾನ ದ್ವಿವರ್ಣ ಏಡಿಯ ವಿಡಿಯೋ ನೋಡಿ

  ಶಾರದಾ ಹಳ್ಳೀಲಿ ಸಂಭ್ರಮ
  ಊರಿನ ನಾಗರಿಕರೆಲ್ಲ ಇವರಿಗೆ ಪ್ರಶಸ್ತಿ ದೊರಕಿರುವುದಕ್ಕೆ ತುಂಬಾ ಹರ್ಷಚಿತ್ತರಾಗಿದ್ದಾರೆ,ಇದರಲ್ಲಿ ನನ್ನದೇನು ಇಲ್ಲ ಎಲ್ಲಾ ದೇವರದ್ದು ಎನ್ನುವ ಶಾರದಜ್ಜಿ ಬಾಯ್ತುಂಬಾ ಮುಂದಿನ ಪೀಳಿಗೆಗೆ ಒಳ್ಳೆಯದಾಗಲಿ ಎಂದು ಹಾಡಿನಷ್ಟೇ ಮಧುರವಾಗಿ ಹರಸುತ್ತಾರೆ.

  ಇದನ್ನೂ ಓದಿ: White Python: ಬಿಳಿ ಹೆಬ್ಬಾವು ಪತ್ತೆ! ಹಾವಿಗೆ ಬಿಳಿ ಬಣ್ಣ ಬರೋದೇಕೆ? ಫೋಟೋಸ್ ನೋಡಿ

  ಏನೇ ಇರಲಿ, ನಾಡು ಗುರುತಿಸಿ ಗೌರವಿಸಿದ ಹಿರಿಜೀವ ಇನ್ನೂ ಹಿರಿದಾಗಿ ಸಾಧನೆ ಮಾಡುತ್ತಾ ಮತ್ತಷ್ಟು ಹಿಗ್ಗಿ ಬದುಕಲಿ, ಅವರ ಪಾಲಿಗೆ ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲಿ ಎನ್ನುವುದೇ ನಮ್ಮ ಆಶಯ.
  Published by:guruganesh bhat
  First published: