ಉತ್ತರ ಕನ್ನಡ: ವಾವ್! ಎಲ್ಲಿ ನೋಡಿದ್ರು ಮಣ್ಣಿನ ಪರಿಕರಗಳದ್ದೇ ಸಾಲು. ಅಲಂಕಾರಕ್ಕೆ ಇರ್ಲಿ, ಗೃಹ ಬಳಕೆಗೆ ಇರ್ಲಿ. ಹೀಗೆ ಏನೇ ಇದ್ರೂ ಅದೆಲ್ಲವೂ ಮಣ್ಣಿನಿಂದಲೇ ತಯಾರಿಸಲಾಗಿದೆ. ಅಷ್ಟೇ ಅಲ್ಲ, ಈ ಮನೆಯ ಒಳಗೆ ಹೊರಗೆ ಎಲ್ಲೇ ಹುಡುಕಾಡಿದ್ರು ಕುಂಬಾರಿಕೆಯ (Pot Making) ಉತ್ಪನ್ನಗಳೇ ಕಣ್ಣಿಗೆ ಕಾಣುವುದು. ಅಂದಹಾಗೆ ಇದು ಕುಂಬಾರಿಕೆ ವೃತ್ತಿಯ ʼಕುಂಭ ಕುಟೀರʼದ (Kumbha Kuteera) ಅಂದ ಚೆಂದದ ದೃಶ್ಯ.
"ಮಣ್ಣಿಂದ ಕಾಯ, ಮಣ್ಣಿಂದ ಸಕಲ ವಸ್ತುಗಳೆಲ್ಲಾ, ಮಣ್ಣಿಂದ ಸಕಲ ದೇಶಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಅಣ್ಣಗಳಿರೆಲ್ಲ ಕೇಳಿರಯ್ಯ" ಅನ್ನೋ ಪುರಂದರದಾಸರ ನುಡಿಯಂತೆ ಮಣ್ಣಿಗೂ, ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ. ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಮಣ್ಣಿನ ಗುಡಿ ಕೈಗಾರಿಕೆ ಇಂದಿಗೂ ಉಳಿದಿದೆ. ಕೆಲವೊಂದಿಷ್ಟು ಕುಂಬಾರರು ಇಂದಿಗೂ ಮಣ್ಣಿನ ಮಡಿಕೆಗಳನ್ನು ಮಾರಾಟ ಮಾಡುತ್ತಲೇ ಜೀವನ ನಡೆಸುತ್ತಿದ್ದಾರೆ. ಅಂತದ್ದರಲ್ಲಿ ಉತ್ತರ ಕನ್ನಡದ ಅಂಕೋಲಾದ ಈ ಕುಂಭ ಕುಟೀರವೂ ಒಂದು.
ಹಲವು ಬಗೆಯ ಮಣ್ಣಿನ ಪರಿಕರ
ಹೌದು, ಪತ್ರಕರ್ತರೂ ಆಗಿರುವ ವಾಸುದೇವ್ ಗುನಗಾ ಅವರೇ ಈ ಕುಂಭ ಕುಟೀರದ ರೂವಾರಿಗಳು. ಇಲ್ಲಿ ನೀವು ಬಯಸಿದ ವಸ್ತುವನ್ನು ಮಣ್ಣಿನಲ್ಲಿ ಬೇಕಾದ ಹಾಗೆ ತಯಾರಿಸಿಕೊಡಲಾಗುತ್ತದೆ.
ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!
ಅಷ್ಟೇ ಅಲ್ದೇ, ನಾವು ಬಳಸುವ ಸ್ಟೀಲ್, ಪಿಂಗಾಣಿ ಮಾದರಿಯಲ್ಲೇ ಮಣ್ಣಿನ ಪರಿಕರಗಳು ಇಲ್ಲಿವೆ. ವಿಶೇಷವಾಗಿ ಬೇಸಿಗೆಗೆ ಸರಿಹೊಂದುವ ನೀರಿನ ಹೂಜಿಗಳಿಂದ ಹಿಡಿದು ವಿನೂತನ ಪ್ರಯೋಗವಾದ ಮಣ್ಣಿನ ಜೇನುಪೆಟ್ಟಿಗೆ ಸೇರಿದಂತೆ ಹಲವು ವಸ್ತುಗಳ ಭಂಡಾರವೇ ಇಲ್ಲಿದೆ.
ಅಲಂಕಾರಿಕ ವಿಗ್ರಹ
ಜೊತೆಗೆ ಅಲಂಕಾರಿಕ ಬುದ್ಧನ ವಿಗ್ರಹಗಳು, ದೊಡ್ಡ ಗಾತ್ರದ ಪಾತ್ರೆಗಳು, ಮಡಿಕೆ-ಕುಡಿಕೆ, ಹೂವಿನ ಹೂಜಿ ಸೇರಿದಂತೆ ಒಳ್ಳೇ ಕಲಾ ವಿನ್ಯಾಸವಿರುವ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟು ಮಾರಲಾಗುತ್ತಿದೆ. ಮಣ್ಣಿನ ಕುದುರೆಯಂತಹ ಆಟಿಕೆಗಳನ್ನೂ ಕೂಡ ತಯಾರಿಸಿದ್ದಾರೆ. ಅವುಗಳ ಗಾತ್ರಕ್ಕೆ ಸಂಬಂಧಪಟ್ಟಂತೆ ದರ ಇರಲಿದೆ.
ಇದನ್ನೂ ಓದಿ: Uttara Kannada Viral News: ಹಲಸಿನ ಮರದಲ್ಲಿ ಕಾಯಿ ಬಿಟ್ಟ ಗೇರು ಬೀಜ!
ಆರ್ಡರ್ ಕೊಟ್ಟರೆ ಸಾಕು!
ಇಲ್ಲಿಯ ಇನ್ನೊಂದು ವಿಶೇಷವೇನೆಂದರೆ ಇವರು ತಯಾರಿಸುವ ವಸ್ತುಗಳು, ಮಾತ್ರವಲ್ಲ ಜನರ ಬೇಡಿಕೆಗೆ ತಕ್ಕ ವಸ್ತುಗಳನ್ನು ಸ್ಥಳದಲ್ಲಿಯೇ ತಯಾರಿಸಿಕೊಡುತ್ತಾರೆ. ನೀವೂ ಈ ಮಣ್ಣಿನ ವಸ್ತುಗಳನ್ನು ತೆಗೆದುಕೊಳ್ಳಲು ಅಥವಾ ಮಣ್ಣಿನ ಪರಿಕರಗಳನ್ನು ನೋಡಲು ಕುಂಭ ಕುಟೀರಕ್ಕೆ ಭೇಟಿ ನೀಡಬಹುದಾಗಿದೆ. ಹಾಗೆ ಏನೇ ಸಂದೇಹಗಳಿದ್ರೂ ವಾಸುದೇವ್ ಗುನಗಾ ಅವರನ್ನ ಸಂಪರ್ಕಿಸಬಹುದಾಗಿದೆ. ಅವರ ಸಂಪರ್ಕ ಸಂಖ್ಯೆ +91 99020 43446 ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ