ವಿಶಾಲವಾದ ನೀಲಿ ಸಮುದ್ರ, ಕಣ್ಣು ಹಾಯಿಸಿದಷ್ಟೂ ದೂರ ಮುಗಿಯದ ನೀರು, ಕಪ್ಪು ಮರಳು! ಅರೇ! ಇದೇನ್ ಹೇಳ್ತಿದ್ದಾರಿವರು! ಈ ಬೀಚ್ನಲ್ಲಿ ಬಿಳಿ ಮರಳ ಬದಲು ಕಪ್ಪು ಮರಳು ನಳನಳಿಸ್ತಿದೆಯಲ್ಲ! ಹೀಗೊಂದು ಬಿಳಿ ಮರಳ ಬದಲು ಕಪ್ಪು ಮರಳಿನ ಬೀಚ್ (Tilmatti Beach) ನಮ್ಮ ಕರ್ನಾಟಕದಲ್ಲೇ(Best Beachs In Karnataka) ಇದೆ ಅಂದ್ರೆ ನೀವು ನಂಬ್ಲೇಬೇಕು! ಈ ಕಪ್ಪು ಸುಂದರಿ ಮತ್ಯಾರೂ ಅಲ್ಲ, ನಮ್ ಉತ್ತರ ಕನ್ನಡ ಜಿಲ್ಲೆಯ ಕಾರವಾರದ (Beachs In Karwar) ಗೋವಾ ಗಡಿಗ್ರಾಮ ಮಾಜಾಳಿಯ ತೀಳ್ ಮಾತಿ ಬೀಚ್!
ಅಷ್ಟಕ್ಕೂ ತೀಳ್ಮಾತಿ ಅನ್ನೋ ಹೆಸರಿನ ಹಿಂದೆ ಹೋದ್ರೆ, ಕೊಂಕಣಿ ಭಾಷೆಯಲ್ಲಿ ತೀಳ್ ಎಂದ್ರೆ ಎಳ್ಳು. ಮಾತಿ ಎಂದರೆ ಮಣ್ಣು. ಈ ಬೀಚ್ನ ಮರಳು ನೋಡಲು ಥೇಟ್ ಕರಿಎಳ್ಳಿನಂತೇ ಕಾಣುತ್ತೆ. ಹೀಗಾಗಿ ತೀಳ್ ಮಾತಿ ಬೀಚ್ ಎಂದೇ ಈ ತೀರಕ್ಕೆ ಹೆಸರು ಬಂದಿದೆ. ಸುಮಾರು 200 ಮೀಟರ್ವರೆಗೆ ವ್ಯಾಪಿಸಿರುವ ಈ ಕಪ್ಪು ಕಡಲತೀರವನ್ನು ನೋಡೋದೇ ಒಂದು ಕುತೂಹಲ.
ಅಕ್ಕಪಕ್ಕದಲ್ಲೇ ಇರೋ ಬೀಚ್ ಮರಳು ಬಿಳಿ
ಎರಡು ಗುಡ್ಡಗಳ ಮಧ್ಯೆ ಈ ಕಡಲತೀರವಿದ್ದು, ಬೀಚ್ನ ಎಡಬಲಕ್ಕೆ ಮಾಜಾಳಿ ಕಡಲತೀರ ಮತ್ತು ಗೋವಾದ ಪೋಳೆಂ ಬೀಚ್ಇದೆ. ಆಶ್ಚರ್ಯದ ಸಂಗತಿ ಎಂದರೆ, ಈ ಎರಡೂ ಕಡಲತೀರದ ಮರಳು ಬಿಳಿ ಬಣ್ಣದಲ್ಲಿದೆ. ಮಧ್ಯ ಇರುವ ತೀಳ್ ಮಾತಿಯಲ್ಲಿ ಮಾತ್ರ ಮರಳು ಕಪ್ಪು ಬಣ್ಣದಲ್ಲಿದ್ದು ಅಚ್ಚರಿ ಮೂಡಿಸ್ತಿದೆ.
ಇದನ್ನೂ ಓದಿ: Manjguni Temple: ಅಕ್ಷರಶಃ ವೈಕುಂಠವಾದ ಕರ್ನಾಟಕದ ತಿರುಪತಿ, 708 ವರ್ಷಗಳ ನಂತರ ಮತ್ತೆ ಭೂದಾನ
ಸೂಪರ್ ಆಗಿರುತ್ತೆ ಸೂರ್ಯಾಸ್ತ!
ಈ ತೀಳ್ ಮಾತಿ ಬೀಚ್ನ ಸೂರ್ಯಾಸ್ತ ಭಾರೀ ಮನಮೋಹಕ. ಕಪ್ಪು ಮರಳಿನಲ್ಲಿ ಮೂಡುವ ಸೂರ್ಯನ ಕಿರಣಗಳ ಚಿತ್ತಾರ ವಿಶಿಷ್ಟ ಅನುಭವ ನೀಡುತ್ತೆ. ಕಡಲ ತೀರದ ಅಕ್ಕ ಪಕ್ಕದಲ್ಲಿ ಕಡುಗಪ್ಪು ಬಣ್ಣದ ಬಂಡೆಗಲ್ಲುಗಳ ರಾಶಿಯೇ ಚಾಚಿಕೊಂಡಿವೆ. ಈ ಕಲ್ಲುಗಳೇ ಅಲೆಗಳ ರಭಸಕ್ಕೆ ಸಿಕ್ಕಿ ಮರಳಾಗುತ್ತವೆ. ಅದು ನೀರಿನ ಸುಳಿಗೆ ಸಿಲುಕಿ ಹೊರಹೋಗದೇ ಇರೋದ್ರಿಂದ ಕಪ್ಪು ಮರಳಿನ ಕಡಲತೀರ ನಿರ್ಮಾಣವಾಗಿದೆ.
ಇದನ್ನೂ ಓದಿ: Success Story: ಕಿರಾಣಿ ಅಂಗಡಿ ಮಾಲೀಕ ವೇಟ್ ಲಿಫ್ಟಿಂಗ್ನಲ್ಲಿ ಬಂಗಾರಕ್ಕೆ ಮುತ್ತಿಟ್ರು!
ಇಲ್ಲಿಗೆ ಬರಲು ದಾರಿ ಇದು
ತೀಳ್ ಮಾತಿ ಬೀಚ್ಗೆ ಹೋಗಬೇಕೆಂದರೆ, ಕಾರವಾರ ನಗರದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಮಾಜಾಳಿ ಗ್ರಾಮ ತಲುಪಬೇಕು. ಅಲ್ಲಿಂದ ಎಡಕ್ಕೆ ತಿರುಗಿ ಕಿರಿದಾದ ಡಾಂಬರು ರಸ್ತೆಯಲ್ಲಿ ಸುಮಾರು ಎರಡು ಕಿಲೋಮೀಟರ್ ಕ್ರಮಿಸಿದರೆ ಮಾಜಾಳಿ ಕಡಲತೀರ ಎದುರುಗೊಳ್ಳುತ್ತೆ. ಅಲ್ಲಿಂದ ಗುಡ್ಡದ ಕಿರಿದಾದ ದಾರಿಯಲ್ಲಿ ಒಂದು ಕಿಲೋ ಮೀಟರ್ ಚಾರಣ ಮಾಡದ್ರೆ ತೀಳ್ ಮಾತಿ ಬೀಚ್ ಸಿಗುತ್ತೆ ನೋಡಿ. ನೀವೂ ಕಾರವಾರಕ್ಕೆ ಬಂದ್ರೆ ಒಮ್ಮೆ ತೀಳ್ ಮಾತಿ ಬೀಚ್ಗೆ ವಿಸಿಟ್ ಹಾಕೋದನ್ ಮರೆಯಬೇಡಿ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ