ಉತ್ತರ ಕನ್ನಡ: ರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ, ಆಂಜನೇಯ, ಕೈಕೇಯಿ, ವಿಭೀಷಣ ಹೀಗೆ ಇಡೀ ರಾಮಾಯಣದ ಪ್ರತಿರೂಪವೇ ತಲೆ ಎತ್ತಿದೆ. ಹಲವು ದೇವರುಗಳ ಪಾಲಿನ ಆವಾಸ ತಾಣವೂ ಇದಾಗಿದೆ. ದಿನನಿತ್ಯವೂ ಈ ಎಲ್ಲ ದೇವರುಗಳಿಗೆ ನಡೆಯುತ್ತವೆ ಪೂಜೆ ಪುನಸ್ಕಾರ. ಹಾಗಿದ್ರೆ ಇದು ಯಾವ ದೇವಸ್ಥಾನ ಅಂತೀರ? ಇದು ಇರೋದಾದ್ರೂ ಎಲ್ಲಿ ಅಂತೀರಾ? ಹೇಳ್ತೀವಿ ನೋಡಿ.
ಹೌದು, ಇದು ಯಾವ ದೇವಸ್ಥಾನವೂ ಅಲ್ಲ. ಮಂದಿರವೂ ಅಲ್ಲ. ಬದಲಿಗೆ, ಇದು ಮನೆಯೊಂದರಲ್ಲಿರುವ ದೇವರ ಕೋಣೆ. ನಿಜ, ಉತ್ತರ ಕನ್ನಡದ ಶಿರಸಿಯಲ್ಲಿರುವ ಮೋಹನ ಆಚಾರಿ ಎಂಬವರ ಮನೆಯ ದೇವರ ಕೋಣೆಯೇ ಹೀಗೆ ಗರ್ಭಗುಡಿಯಂತೆ ಗಮನಸೆಳೆಯುತ್ತಿದೆ.
30 ವರ್ಷಗಳ ಹಿಂದೆ ರಚನೆ
ಈ ದೇವರ ಕೋಣೆಯನ್ನು 30 ವರ್ಷಗಳ ಹಿಂದೆ ರಚಿಸಲಾಗಿದ್ದು ಆಚಾರಿ ಕುಟುಂಬಕ್ಕೆ ಸಂಬಂಧಿಸಿದ ಈ ಮನೆಯಲ್ಲಿ ಈ ಮೂರ್ತಿಗಳು ತಲೆ ತಲಾಂತರದಿಂದ ಪೂಜೆಗೊಳ್ಳುತ್ತ ಬಂದಿವೆ. ಈಗ ಮೋಹನ್ ಆಚಾರಿ ಎಂಬುವವರು ಅರ್ಚಕರಾಗಿ ಪೂಜೆ ಮಾಡುತ್ತಿದ್ದಾರೆ.
ಇಡೀ ರಾಮ ಪರಿವಾರವೇ ಇಲ್ಲಿದೆ
ಇಲ್ಲಿನ ಪ್ರಮುಖ ಆಕರ್ಷಣೆ ರಾಮ ಪಂಚಾಯತನ. ಯಾಕೆಂದರೆ ಇಲ್ಲಿ ಇರುವಷ್ಟು ಪರಿಪೂರ್ಣ ಪರಿವಾರ ಸಮೇತ ರಾಮ ಕಾಣಲು ಸಿಗುತ್ತಾನೆ. ರಾಮ ಲಕ್ಷ್ಮಣ ಸೀತೆಯರಲ್ಲದೇ ಆಂಜನೇಯ, ಸುಗ್ರೀವ, ವಿಭೀಷಣ, ಕೌಸಲ್ಯಾ, ಭರತ, ಶತ್ರುಘ್ನ, ಕೈಕೇಯಿಗಳನ್ನೊಳಗೊಂಡ ಈ ವಿಗ್ರಹದ ಗುಂಪು ಪ್ರಧಾನ ದೇವರಾಗಿದೆ.
ಇದನ್ನೂ ಓದಿ: Uttara Kannada: ಆಟೋ ಸಾರಥಿಯಾಗಿ ಬದುಕು ಕಟ್ಟಿಕೊಂಡ ಮಹಿಳೆ
ಅದರ ಜೊತೆಗೆ ಗಣೇಶ, ಆಂಜನೇಯ, ಶ್ರೀದೇವಿ, ಭೂದೇವಿ ಸಹಿತ ಅನಂತ ಪದ್ಮನಾಭ ಹಾಗೂ ಶೇಷ ದೇವರು ಇಲ್ಲಿ ಸರ್ಪ ಮಂಡಲದ ಮೂಲಕ ಪೂಜಿಸಲ್ಪಡುತ್ತಾರೆ. ಸುರುಳಿಯಾಗಿ ಕೆತ್ತಿರುವ ಈ ಆಕೃತಿಯ ಬಾಲ ನಿಮಗೆ ಕಾಣಸಿಗುವುದಿಲ್ಲ. ಸುಮಾರು ಜನ ಹುಡುಕಲು ಹೋಗಿ ಸೋತಿದ್ದಾರೆ. ಅದನ್ನು ಹುಡುಕುವವರು ಸಿದ್ದಿ ಪುರುಷರು ಮಾತ್ರ ಎಂದು ಭಾವಿಸಲಾಗುತ್ತದೆ.
ಇದನ್ನೂ ಓದಿ: Jodukere Hanuman: ಜೋಡುಕೆರೆಯ ಮಾರುತಿಯ ಜೋಪಾನ ಮಾಡುತ್ತಿರುವ ತಾಯಂದಿರು!
ಒಟ್ಟಿನಲ್ಲಿ ಆಚಾರಿ ಕುಟುಂಬದ ಮನೆಯಲ್ಲಿರುವ ಈ ದೇವರ ಕೋಣೆಯು ಮಿನಿ ದೇಗುಲದಂತೆಯೇ ಇದೆ. ಸಾರ್ವಜನಿಕರು ಕೂಡಾ ಈ ಮನೆ ಮುಂದೆ ಹಾದು ಹೋಗುತ್ತಲೇ ಕೈ ಮುಗಿಯುತ್ತಾ ದೇವರಿಗೆ ನಮಸ್ಕರಿಸುತ್ತಾ ಮುಂದೆ ಸಾಗುತ್ತಾರೆ. ಹಿಂದೂ ಸಂಪ್ರದಾಯದಂತೆ ಮನೆಗೊಂದು ದೇವರ ಕೋಣೆ ಇರುವುದು ಕಾಮನ್. ಆದ್ರೆ ಮನೆಯೇ ದೇಗುಲದಂತೆ ಕಂಗೊಳಿಸುತ್ತಿರುವುದು ವಿಶೇಷವೇ ಸರಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ