ಉತ್ತರ ಕನ್ನಡ: ಮರದ ಟೇಬಲ್ ಮೇಲೆ ಕೋಲು ಬಡಿಯುತ್ತಾ ಈ ಮಹಿಳೆಯರೆಲ್ಲ ಕಲಿಯುತ್ತಿರೋದು ಚಂಡೆ ವಾದ್ಯವನ್ನ. ನಿಜ, ಯಕ್ಷಗಾನದಲ್ಲಿ ಚಂಡೆ ಅದೆಷ್ಟು ಪ್ರಧಾನ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರವೇ ಸರಿ. ಅಂತಹ ಚಂಡೆ ವಾದ್ಯದಲ್ಲಿ ತಾವೂ ಸೈ ಎನಿಸಿಕೊಳ್ಳಬೇಕೆನ್ನುವುದೇ ಈ ಮಹಿಳೆಯರ ಅಂಬೋಣ.
ಯಕ್ಷಗಾನ ಅಂದ್ರೇನೆ ಗಂಡು ಕಲೆ ಅಂತಲೇ ಪ್ರಸಿದ್ಧಿ. ಅಂತಹ ಗಂಡುಕಲೆಯಲ್ಲಿ ಇತ್ತೀಚೆಗೆ ಹೆಣ್ಮಕ್ಕಳು ಕೂಡಾ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಾ ಬಂದಿದ್ದಾರೆ. ಪಾತ್ರಧಾರಿಗಳಾಗಿ, ಭಾಗವತಿಕೆ ಹೀಗೆ ಹಲವು ವಿಧದಲ್ಲಿ ಹೆಣ್ಮಕ್ಕಳು ಕಾಣಿಸಿಕೊಂಡಿದ್ದಾರೆ. ಆದರೆ ಹಿಮ್ಮೇಳದ ಚಂಡೆ ವಾದ್ಯಕ್ಕೆ ಮಹಿಳೆಯರ ಕೈ ತಾಕಿದ್ದು ತೀರಾ ಕಡಿಮೆ.
ಸವಾಲನ್ನು ಮೆಟ್ಟಿ ನಿಂತ ಮಹಿಳೆಯರು!
ಚಂಡೆ ವಾದ್ಯವೂ ಅಷ್ಟೇ ಸುಲಭವಾಗಿ ಬಾರಿಸುವಂತದ್ದಲ್ಲ. ಯಕ್ಷಗಾನದ ರಂಗದಲ್ಲಿ ಪಾತ್ರಧಾರಿಯ ಕುಣಿತಕ್ಕೆ ತಕ್ಕಂತೆ ಚಂಡೆ ವಾದ್ಯಗಾರನ ಕೈ ಕುಣಿಯಬೇಕು. ಹೀಗಾಗಿ ಇದೊಂಥರಾ ಸವಾಲಿನ ಸಂಗತಿಯೇ ಸರಿ. ಆದ್ರೆ ಅಂತಹ ಸವಾಲನ್ನು ಮೆಟ್ಟಿ ಇದೀಗ ಉತ್ತರ ಕನ್ನಡದ ಶಿರಸಿಯ ವನಿತಾ ಸಮಾಜ ಮಹಿಳೆಯರಿಗೆ ಚಂಡೆ ವಾದ್ಯದ ತರಬೇತಿ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುತ್ತಿದೆ.
ಇದನ್ನೂ ಓದಿ: Gokarna: ಗೋಕರ್ಣದಲ್ಲಿ ಸಮರ್ಥ ರಾಮದಾಸರ ಪಾದುಕೆ, ಇವುಗಳ ಮಹತ್ವ ತಿಳಿದುಕೊಳ್ಳಿ
ಮೇಜಿನ ಮೂಲಕ ಕಲಿಕೆ!
ಯಕ್ಷ ಕಲಾಸಂಗಮ ತಂಡದಿಂದ ಅದರ ಅಧ್ಯಕ್ಷರೂ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದೆಯಾದ ಸುಮಾ ಗಡಿಗೆಹೊಳೆಯವರ ನೇತೃತ್ವದಲ್ಲಿ ಪ್ರಶಾಂತ್ ಕೈಗಡಿಯವರು 16 ಮಹಿಳೆಯರಿಗೆ ಪ್ರಸ್ತುತ ಚಂಡೆ ವಾದನದ ತರಬೇತಿ ನೀಡುತ್ತಿದ್ದಾರೆ. ಪ್ರತಿ ಭಾನುವಾರ 3 ಗಂಟೆಗಳ ಕಾಲ ತರಬೇತಿ ನೀಡುತ್ತಿದೆ. ಆರಂಭದಲ್ಲಿ ಚಂಡೆಯಂತೆ ಮರದ ಮೇಜುಗಳಲ್ಲಿ ತಾಳ ಕಲಿಕೆಯನ್ನು ಮಾಡಿಸುತ್ತಿದ್ದಾರೆ. ನಂತರ ಒಂದು ತಾಳದಲ್ಲಿ ಪಕ್ಕಾ ಆದರೆ ಅವರಿಗೆ ಚಂಡೆ ಮೂಲಕ ವಾದನ ಶೈಲಿ ಕಲಿಸಲಾಗುತ್ತೆ.
ಮಹಿಳೆಯರ ಉತ್ಸಾಹ
ಸದ್ಯ ಇಲ್ಲಿ ಕಾಲೇಜಿಗೆ ಹೋಗುವ ಹುಡುಗಿಯರಿಂದ ಹಿಡಿದು ನಲವತ್ತೈದು ವರ್ಷದವರೆಗಿನ ಮಹಿಳೆಯರು ಈ ಚಂಡೆ ವಾದನವನ್ನು ಭಾರೀ ಆಸಕ್ತಿಯಿಂದ ಕಲಿಯುತ್ತಿದ್ದಾರೆ.
ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!
ಜೊತೆಗೆ ದಿನೇ ದಿನೇ ಶಿಬಿರಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಟ್ಟಿನಲ್ಲಿ ಗಂಡುಕಲೆ ಎನಿಸಿಕೊಂಡ ಯಕ್ಷಗಾನದಲ್ಲೂ ಮಹಿಳೆಯರು ತಮ್ಮ ಚಾತುರ್ಯವನ್ನು ತೋರುತ್ತಿರುವುದು ಹೆಮ್ಮೆಯ ವಿಚಾರವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ