ಕಾರವಾರ: ಅದೇನೋ ಗೆದ್ದು ಬಿಟ್ಟೆವು ಅನ್ನೋ ಖುಷಿ. ಹಿರಿಯರನ್ನ ಕೂರಿಸಿ ನಡೆಯುತ್ತಿರೋ (Pad Puja) ಪಾದಪೂಜೆ. ಕಣ್ಣಂಚಲ್ಲಿ ಜಿನುಗುತ್ತಿರೋ ಕಣ್ಣೀರು. ಅಷ್ಟಕ್ಕೂ ಹೀಗೆ ಕೂತಿರೋ ಈ ಹಿರಿಯರು ಯಾರು? ಇವರನ್ನ ಸನ್ಮಾನಿಸಿ ಆದರದಿಂದ ಪಾದಪೂಜೆ ಮಾಡ್ತಿರೋ ಈ ಮಹಿಳೆಯರು, ಪುರುಷರು ಯಾರು? ಇದೆಲ್ಲವನ್ನೂ ಹೇಳ್ತೀವಿ ನೋಡಿ.
ಯೆಸ್, ಗುರು ಶಿಷ್ಯರ ಸಂಬಂಧ ಅದು ಎಂದೆಂದಿಗೂ ಅಳಿಸಲಾಗದ ಸುಮಧುರ ಅನುಬಂಧ ಅನ್ನೋ ಹಾಗೆ ಉತ್ತರ ಕನ್ನಡದ ಕಾರವಾರದಲ್ಲೊಂದು ಘಟನೆ ಸಾಕ್ಷಿಯಾಯಿತು. ತಮಗೆ ವಿದ್ಯೆ ಕಲಿಸಿದ ಉಪನ್ಯಾಸಕರನ್ನು ಹುಡುಕಿಕೊಂಡು ಬಂದು ಅವರನ್ನ ಗೌರವಿಸಿ, ಪಾದಪೂಜೆ ಮಾಡುವ ಮೂಲಕ ಅವರ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.
30 ವರ್ಷಗಳ ಹಿಂದಿನ ಸಂಬಂಧ!
ಈ ವಿದ್ಯಾರ್ಥಿಗಳೆಲ್ಲ ಶಿವಮೊಗ್ಗ ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ 30 ವರ್ಷಗಳ ಹಿಂದೆ ಕಲಿತು ಇದೀಗ ಉನ್ನತ ಉದ್ಯೋಗದಲ್ಲಿರುವವರು. ಆ ಸಮಯದಲ್ಲಿ ತಮಗೆ ಪಾಠ ಮಾಡಿದ ಊಪನ್ಯಾಸಕರನ್ನ ಸನ್ಮಾನಿಸಲು ವಿಜ್ಙಾನ ವಿಭಾಗದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ನಿರ್ಧರಿಸಿ ಶಿವಮೊಗ್ಗದಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಆ ಕಾರ್ಯಕ್ರಮಕ್ಕೆ ಕಾಲೇಜಿನಲ್ಲಿ ಪಾಠ ಮಾಡಿದ್ದ ನಿವೃತ್ತ ಉಪನ್ಯಾಸಕರಾದ ಕಾರವಾರ ತಾಲೂಕಿನ ಸದಾಶಿವಗಡ ಮೂಲದ ಪುಷ್ಪ ಸುಖಟನಕರ್ ಹಾಗೂ ಅವರ ಪತಿ ರಮೇಶ್ ಸುಖಟನಕರ್ ಅವರಿಗೆ ಭಾಗವಹಿಸಲು ಸಾಧ್ಯವಾಗಲಿಲ್ಲ.
ಅಷ್ಟಕ್ಕೇ ಸುಮ್ಮನಾಗಿಲ್ಲ!
ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿಗಳು ಒಂದು ದಿನ ನಿಗದಿಪಡಿಸಿ ನೇರವಾಗಿ ಶಿವಮೊಗ್ಗದಿಂದ ಕಾರವಾರಕ್ಕೆ ಬಂದು ರಮೇಶ್ ಹಾಗೂ ಪುಷ್ಪ ಉಪನ್ಯಾಸಕ ದಂಪತಿಯ ಪಾದಪೂಜೆ ಮಾಡಿ ಸನ್ಮಾನಿಸಿದರು. ಒಂದಿಷ್ಟು ಹೊತ್ತು ಉಪನ್ಯಾಸಕರ ಮುಂದೆ ಮನರಂಜಿಸಿ ಸಂಭ್ರಮಿಸಿದರು. ಗುರುಗಳು ಕೂಡಾ ಇವರ ಸಂಭ್ರಮಕ್ಕೆ ಖುಷಿಪಟ್ಟರು.
ಇದನ್ನೂ ಓದಿ: Uttara Kannada: ಹೂಗಳಲ್ಲಿ ಅರಳಿದ ಮಾರಿಕಾಂಬೆ! 25,000ಕ್ಕೂ ಹೆಚ್ಚು ಬಗೆಯ ಪುಷ್ಪಗಳ ಪ್ರದರ್ಶನ
ವಿದ್ಯಾರ್ಥಿಗಳೆಲ್ಲರೂ ತಮ್ಮ ಹಳೆಯ ನೆನಪುಗಳನ್ನ, ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಯಾವ ರೀತಿ ಪಾಠ ಮಾಡುತ್ತಿದ್ದರು ಎನ್ನುವ ವಿಚಾರಗಳನ್ನ ನೆನೆದರು. ಅಲ್ಲದೇ ಅನಾರೋಗ್ಯಕ್ಕೆ ಒಳಗಾಗಿದ್ದ ಉಪನ್ಯಾಸಕರನ್ನ ನೋಡಿ ಕಣ್ಣೀರಾದರು. ನಿವೃತ್ತ ಉಪನ್ಯಾಸಕರನ್ಮ ಖುಷಿಪಡಿಸಲು ಅವರ ಮುಂದೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: Karwar: ಏಳು ಗ್ರಾಮದ ದೇವರಿಗೆ ಸಮುದ್ರ ಕಿನಾರೆಯಲ್ಲಿ ಪೂಜೆ!
ಹಳೆಯ ವಿದ್ಯಾರ್ಥಿಗಳ ಪ್ರೀತಿಗೆ ವೃದ್ಧ ಉಪನ್ಯಾಸಕ ದಂಪತಿ ಭಾವುಕರಾದರು. ಒಟ್ಟಿನಲ್ಲಿ ಗುರು ಶಿಷ್ಯರ ನಡುವಿನ ಈ ಸಂಬಂಧವು ಕಣ್ಣಂಚಲ್ಲಿ ನೀರು ತರಿಸಿದ್ದು ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ