ಉತ್ತರ ಕನ್ನಡ: ಯುದ್ಧಕ್ಕೆ ಸಿದ್ಧವಾದಂತಿರೋ ಮೈದಾನ. ಯುದ್ಧ ಸನ್ನದ್ಧ ಸ್ಥಿತಿಯಲ್ಲಿರುವಂತ ಫಿರಂಗಿಗಳು, ಅಪರೂಪದಲ್ಲೇ ಅಪರೂಪವಾದ ದೇವರ ಮೂರ್ತಿಗಳು, ವಿಶಾಲವಾದ ದಿಬ್ಬ ಇದುವೇ (Sode Kings) ಸೋದೆ ಅರಸರ ಕೋಟೆಯ (Sirsi Sonda Fort) ಚಿತ್ರಣ.
ಯೆಸ್, ಇದು ಉತ್ತರ ಕನ್ನಡದ ಸೋದೆಯ ಅರಸರ ಕಾಲದ ಕೋಟೆಯ ಸೊಬಗು. ವಿಜಯನಗರದ ಆಳರಸರಾಗಿದ್ದ ಇವರು ಯಾವ ಚಕ್ರವರ್ತಿಗಳಿಗೂ ಕಮ್ಮಿ ಇಲ್ಲದಂತೆ ರಾಜ್ಯಭಾರ ನಡೆಸಿದವರು. ಅದರಲ್ಲೂ ಸೋದೆ ಸದಾಶಿವರಾಯರಂತೂ ನಾಲ್ಕು ದಿಕ್ಕಿನಿಂದ ಪರಕೀಯರನ್ನು ಹೊಡೆದೋಡಿಸಿದವರು. ಸುಂಕೇರಿಯಿಂದ ಕಾರವಾರದ ಮುತ್ತಿಗೆಗೆ ಬಂದ ಬ್ರಿಟಿಷರನ್ನು ಸೋಲಿಸಿದ ಮಹಾನ್ ಪರಾಕ್ರಮಿ!
ಫಿರಂಗಿಗಳ ಸಾಲು!
ಈ ಕೋಟೆಯಲ್ಲಿ ಎಂಟು ಫಿರಂಗಿಗಳಿವೆ, ಆರು ಪಿರಂಗಿಗಳನ್ನು ಸಾಲಾಗಿ ಜೋಡಿಸಿ ಇಡಲಾಗಿದೆ. ದಿಬ್ಬದ ಮೇಲೊಂದು ದೊಡ್ಡ ಪಿರಂಗಿ ಇದೆ. ಹಾಗೆಯೇ ದಿಬ್ಬದ ಮೇಲೊಂದು ಕಲ್ಲಿನ ಮಂಚವಿದೆ. ಅದೊಂದು ಎಷ್ಟು ಉದ್ದವಾಗಿದೆ ಎಂದರೆ ಅದರ ಮೇಲೆ ಆನೆಯನ್ನೇ ಮಲಗಿಸಬಹುದು! ಜೊತೆಗೊಂದು ಏಕಶಿಲೆಯಿಂದ ತಯಾರಾದ ಕಲ್ಲಿನ ಮಂಚ. ಅದರ ನಾಲ್ಕೂ ಕಂಬಗಳಿಗೂ ಕೃಷ್ಣ ಲೀಲೆಯ ಚಿತ್ರವನ್ನು ಕೆತ್ತಲಾಗಿದ್ದು, ನಡುಗಂಬಕ್ಕೆ ಮಾತ್ರ ನಂದಿ ಶಿವನನ್ನು ಪೂಜಿಸುತ್ತಿರುವ ಉಬ್ಬು ಶಿಲ್ಪವಿದೆ.
ಇದನ್ನೂ ಓದಿ: Sirsi News: ಬತ್ತಿ ಹೋಗಿದ್ದ ದೇವರ ಕಲ್ಯಾಣಿಗೆ ಮರುಜೀವ ನೀಡಿದ ಯುವ ಪಡೆ!
ದೇವರ ಸಾನಿಧ್ಯ
ಇಲ್ಲಿ ಅಪರೂಪವಾದ ಕುದುರೆ-ಕುಕ್ಕುಟದ ಮೂರ್ತಿ ಹಾಗೆಯೇ ಶರಭ ಮತ್ತು ನವಗುಂಜರದ ಕೆತ್ತನೆಯೂ ಕೂಡ ಅಡಕವಾಗಿದೆ. ಇಲ್ಲಿರುವ ಯುದ್ಧ ಸಾಮಗ್ರಿ ಹಾಗೂ ಶಿಲ್ಪಗಳಿಗೆ ಒಂದು ತೂಕವಾದರೆ ಅದಕ್ಕಿಂತ ಎಷ್ಟೋ ಮಹತ್ತಾದದ್ದು ಇಲ್ಲಿನ ದೇವರ ಮೂರ್ತಿಗಳು.
ವಿಶೇಷ ಪೂಜೆ ಪುನಸ್ಕಾರ
ಕೋಟೆಯ ಎದುರೇ ಕ್ಷೇತ್ರಪಾಲನಾಗಿ ಮಲೆನಾಡಿನ ಪ್ರಮುಖ ದೈವ ಹುಲಿದೇವರ ಮೂರ್ತಿಯಿದೆ. ಪ್ರತೀ ಅಮವಾಸ್ಯೆಗೆ ಇಲ್ಲಿ ದೇವರ ಸೇವೆ ನಡೆದರೆ, ಪ್ರತೀ ಶನಿವಾರ ದೇವರಿಗೆ ವಿಶೇಷ ಪೂಜೆ ಸೇವೆಯಿರುತ್ತದೆ. ಇನ್ನು ಯೋಧನ ರೂಪದಲ್ಲಿರುವ ವೀರ ಹನುಮ ಇಲ್ಲಿ ಬಾಲರೂಪದಲ್ಲಿದ್ದು ವ್ಯಾಸರಾಯರಿಗಿಂತ ಹಿಂದಿನ ಕಾಲದಲ್ಲಿಯೇ ಪ್ರತಿಷ್ಠಾಪನೆಗೊಂಡ ಜಾಗೃತ ಮೂರ್ತಿಯಾಗಿದೆ.
ಇದನ್ನೂ ಓದಿ: Yakshagana In America: ಅಮೆರಿಕಾ ನೆಲದಲ್ಲಿ ಯಕ್ಷ ಕಲೆ ಉಣಬಡಿಸಿದ ಶಿರಸಿ ಮಹಿಳೆ!
ಎಲ್ಲಿದೆ ಈ ಕೋಟೆ?
ಶಿರಸಿಯಿಂದ ಸ್ವರ್ಣವಲ್ಲಿಗೆ ಸೋಂದಾ ಬಸ್ಸು ಹತ್ತಿ ಸ್ವರ್ಣವಲ್ಲಿಯ ಕ್ರಾಸ್ ಬಳಿ ಯಾತ್ರಿ ನಿವಾಸ ಸಿಗುತ್ತದೆ. ಅಲ್ಲಿ ಇಳಿದುಕೊಂಡು ನಂತರ ಹೊಳೆಗೆ ಹೋಗುವ ದಾರಿಯಲ್ಲಿ ಸಾಗಿ ಹೊಳೆಯನ್ನು ದಾಟಿಕೊಂಡು ನಂತರದಲ್ಲಿ ಎಡಕ್ಕೆ ಕಾಲುದಾರಿಯಲ್ಲಿ ಅರ್ಧ ಕಿಲೋಮೀಟರ್ ದಿಬ್ಬ ಏರಬೇಕು. ಆಗ ಈ ಕೋಟೆಯ ದರ್ಶನವಾಗುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ