ಉತ್ತರ ಕನ್ನಡ: ಭರದಿಂದ ಕೆಲಸದಲ್ಲಿ ನಿರತರಾಗಿರೋ ಯುವಕ, ಯುವತಿಯರು. ಇನ್ನೇನು ನೀರಿಲ್ಲದೇ ಬತ್ತಿ ಹೋಗಿದ್ದ ಬಾವಿಯಲ್ಲಿ ಮೂಡಿ ಬಂತು ಜೀವಜಲ. ಅತ್ತ ದೇವರ ಕೆಲಸವೂ ಸಲೀಸು, ಇತ್ತ ಯುವಕರ ಶ್ರಮವೂ ಸಾರ್ಥಕ. ಹೀಗೆ ಉತ್ತರ ಕನ್ನಡದ (Uttara Kannada News) ಶಿರಸಿಯ ಕಲಗಾರ ಒಡ್ಡುವಿನ ಕಲ್ಯಾಣಿಯು (Old Lake) ಇದೀಗ ತನ್ನ ಹಳೆ ವೈಭವಕ್ಕೆ ಮರಳಿದೆ.
ಹೂಳು ತುಂಬಿದ್ದ ಕಲ್ಯಾಣಿ
ಯೆಸ್, ಕಲಗಾರ ಒಡ್ಡುವಿನ ಖೇತ್ರಿ ದೈವವೆಂದರೆ ಭಕ್ತರಲ್ಲಿ ಭಯ ಮಿಶ್ರಿತ ಭಕ್ತಿ. ಹೀಗಾಗಿ ದೈವದ ಕಾಡಿಗೆ ಜನ ಹೋಗುವುದು ವಿರಳ, ಇಲ್ಲಿ ಅರ್ಚಕರು ಮಾತ್ರ ಹೋಗಿ ನೀರು ತಂದು ದೈವಕ್ಕೆ ಅಭಿಷೇಕ ಮಾಡುತ್ತಿದ್ದರು. ಕಳೆದ ಐದಾರು ವರ್ಷದಿಂದ ಕಲ್ಯಾಣಿಯಲ್ಲಿ 10 ಅಡಿಯಷ್ಟು ಹೂಳು ತುಂಬಿ ನೀರು ಬತ್ತಿ ಹೋಗಿತ್ತು. ಅಲ್ಪ ಸ್ವಲ್ಪ ನೀರಿನಲ್ಲೇ ಅರ್ಚಕರು ತಮ್ಮ ಕಾರ್ಯ ನಿರ್ವಹಿಸುತ್ತಿದ್ದರು.
ಹೂಳು ತೆಗೆಯಲು ಮುಂದಾದ ಯುವಪಡೆ
ಅದೇನು ಭಯವೋ ನಂಬಿಕೆಯೋ ಕಲ್ಯಾಣಿಯ ಜೀರ್ಣೋದ್ಧಾರಕ್ಕೆ ಯಾರೊಬ್ಬರೂ ಮುಂದಾಗಿರಲಿಲ್ಲ. ಈ ಕಲ್ಯಾಣಿ ಸೋದೆ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಒಂದು ಮಾಹಿತಿಯ ಪ್ರಕಾರ ಈ ಕೆರೆಯನ್ನ ಜೀರ್ಣೋದ್ಧಾರಗೊಳಿಸಿ ಶತಮಾನವೇ ಆಗಿತ್ತಂತೆ. ಖೇತ್ರಿ ದೇವರ ಕಲ್ಯಾಣಿ ಬತ್ತಿ ಹೋಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಯೂತ್ ಫಾರ್ ಪರಿವರ್ತನ್ ಹಾಗೂ ಆರ್ ಎಸ್ ಎಸ್ ನ ಪರ್ಯಾವರಣ ವಿಭಾಗ ಹೂಳೆತ್ತಲು ಮುಂದಾಯಿತು.
ಇದನ್ನೂ ಓದಿ: Yakshagana In America: ಅಮೆರಿಕಾ ನೆಲದಲ್ಲಿ ಯಕ್ಷ ಕಲೆ ಉಣಬಡಿಸಿದ ಶಿರಸಿ ಮಹಿಳೆ!
ಶ್ರಮದಾನ ಸಾರ್ಥಕ
ಸುಮಾರು 12 ಅಡಿ ಹೂಳೆತ್ತಿ ಎರಡು ಅಡಿಯಷ್ಟು ಜೀವಜಲವನ್ನು ಯುವಕರು ತರಿಸಿದ್ದಾರೆ. 10 ಜನರ ತಂಡ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1.30ರ ತನಕ ಶ್ರಮದಾನ ಮಾಡಿದ ಮೇಲೆ ನೀರು ಕಾಣಿಸಿಕೊಂಡಿದೆ. ಅಲ್ಲಿಗೆ ಖೇತ್ರಿ ದೇವರಿಗೆ ನೀರೂ ಆಯಿತು, ಗ್ರಾಮಸ್ಥರ ಭಯದ ಪರದೆಯೂ ಸರಿಯಿತು.
ಇದನ್ನೂ ಓದಿ: PM Modi Voting: ಅರೇ! ಪ್ರಧಾನಿ ಮೋದಿ ವೋಟ್ ಹಾಕಿದ್ರಾ? ಮತಗಟ್ಟೆಯಲ್ಲಿ ಶಾಕ್ ಆದ ಜನ!
ದೇವರ ಕಾಡಿನ ಯೋಜನೆ
ಇದರ ಜೊತೆಗೆ ಮುಂದೆ ಇಲ್ಲಿ ಸೋದೆ ಅರಸರ ಕಾಲದಲ್ಲಿ ಆದಂತಹ ರಚನೆಯಲ್ಲೇ ಕಲ್ಯಾಣಿಯನ್ನು ಪುನಃ ನವೀಕರಣಗೊಳಿಸುವುದು ಹಾಗೂ ದೈವದ ಕಾಡನ್ನು ರೂಪಿಸುವ ಯೋಜನೆಯನ್ನ ಈ ತಂಡ ಹೊಂದಿದೆ. ಒಟ್ಟಿನಲ್ಲಿ ಖೇತ್ರಿ ದೇವರ ಕಲ್ಯಾಣಿ ಪುನರುಜ್ಜೀವನಗೊಂಡಿದ್ದು, ಜೊತೆಗೆ ಪರಿಸರವೂ ಸ್ವಚ್ಛಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ