ಉತ್ತರ ಕನ್ನಡ: ಅವೆರಡು ಜಂಟಿಯಾಗಿದ್ದ ಒಂಟೆಗಳು (Camels) ಮರುಭೂಮಿಯಲ್ಲಿ ಅದ್ಯಾವುದೋ ಸೋಂಕಿಗೆ (Virus) ತುತ್ತಾಗಿದ್ದವು. ಇನ್ನೇನಪ್ಪ ಮಾಡೋದು ಅಂದ್ಕೊಂಡ ಮಾಲೀಕನಿಗೆ ದಾರಿ ತೋರಿದ್ದು ಕರುನಾಡಿನ (Karnataka) ಈ ಪ್ರಾಣಿಗಳ ಅನಾಥಾಲಯ. ಹೀಗೆ ಮರುಭೂಮಿಯ ಹಡಗು ಮಲೆನಾಡಿಗೆ ಬಂದ ಇಂಟೆರೆಸ್ಟಿಂಗ್ ಕಥೆ ಇದು.
ರಾಜಸ್ಥಾನ ಟು ಶಿರಸಿ
ಯೆಸ್, ರಾಜಸ್ಥಾನದಲ್ಲಿ ಒಂಟೆ ಸಾಕೋದು ಮಾಮೂಲು. ಅಂತೆಯೇ ಇಲ್ಲಿ ಕಾಣೋ ಈ ಸಣಕಲು ದೇಹದ ಜೋಡಿ ಒಂಟೆಗಳು ಕೂಡಾ ರಾಜಸ್ಥಾನದ್ದೇ ಆಗಿವೆ. ಒಂದು ಹೆಣ್ಣು ಹಾಗೂ ಇನ್ನೊಂದು ಗಂಡು ಒಂಟೆಯಾಗಿರುವ ಇವು, ಬಣ್ಣದಲ್ಲೂ ವಿಭಿನ್ನತೆ ಹೊಂದಿದೆ. ಅಂದಹಾಗೆ ಈ ಒಂಟೆಗಳು ಈಗ ಉತ್ತರ ಕನ್ನಡದ ಶಿರಸಿಯ ರಾಜೇಂದ್ರ ಸಿರ್ಸೀಕರ್ ನಡೆಸುತ್ತಿರುವ ಪ್ರಾಣಿಗಳ ಅನಾಥಾಲಯವಾದ ʼಪೆಟ್ ಪ್ಲಾನೆಟ್ʼ ನಲ್ಲಿ ಚೇತರಿಸಿಕೊಳ್ಳುತ್ತಿವೆ.
ಸಾವಿರಾರು ಕಿ.ಮೀ ಪಯಣ
ವಿಚಿತ್ರ ಅಂದ್ರೆ, ಈ ಪ್ರಾಣಿ ಸಾಕಾಣಿಕೆ ಸಂಸ್ಥೆಯ ಬಗ್ಗೆ ವಿಷಯ ತಿಳಿದವರೇ ಈ ಒಂಟೆಗಳ ಮಾಲೀಕ ಅಲ್ಲಿಂದ ಇಲ್ಲಿ ತನಕ 1719 ಕಿಲೋ ಮೀಟರ್ ಕ್ರಮಿಸಿ ಈ ಸೋಂಕು ಬಾಧಿತ ಒಂಟೆಗಳನ್ನು ಕರೆ ತಂದಿದ್ದಾನೆ. ಒಂದಕ್ಕೆ ವಿಟಮಿನ್ ಕೊರತೆ ಹಾಗೂ ಇನ್ನೊಂದಕ್ಕೆ ಚರ್ಮವ್ಯಾಧಿ ಆಗಿದೆ. ಈ ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದ ಒಂಟೆಗಳನ್ನು ಸಾಕೋದೆ ಅದರ ಮಾಲೀಕನಿಗೆ ಸವಾಲಿನ ವಿಷಯವಾಗಿತ್ತು. ಹಾಗಾಗಿ ರಾಜಸ್ಥಾನದಿಂದ ಶಿರಸಿಯ ಪೆಟ್ ಪ್ಲಾನೆಟ್ ಗೆ ಕರೆತಂದಿದ್ದಾರೆ.
ಪೆಟ್ ಪ್ಲಾನೆಟ್‌ನಲ್ಲಿ ಆಶ್ರಯ
1 ವರ್ಷದ ಸಾಖಿ ಹಾಗೂ 6 ತಿಂಗಳ ಕ್ಲಾರಾ ರಾಜಸ್ಥಾನದ ಖಾರೈ ಜಾತಿಗೆ ಸೇರಿದ ಒಂಟೆಗಳಾಗಿದ್ದು, ಶಿರಸಿಯಲ್ಲಿ ಚೇತರಿಸಿಕೊಳ್ಳುತ್ತಿವೆ. ಅದಕ್ಕಾಗಿಯೇ ಅದರ ಮಾಲೀಕ ಸುಮಾರು 60,000 ರೂಪಾಯಿ ಖರ್ಚು ಮಾಡಿಕೊಂಡು ಬಂದು ಪೆಟ್ ಪ್ಲಾನೆಟ್ ಗೆ ಒಂಟೆಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಕಷ್ಟ ಅರಿತ ಸಂಸ್ಥೆ ತಕ್ಷಣ ಟ್ರಸ್ಟ್ ಗೆ ಬಂದಿದ್ದ ದೇಣಿಗೆಯನ್ನು ಅದರ ಮಾಲೀಕನಿಗೆ ಕೊಟ್ಟು ಬೀಳ್ಕೊಟ್ಟಿದೆ. ಹೀಗೆ ಎರಡು ಒಂಟೆಗಾಗಿ ಮರುಭೂಮಿ-ಮಲೆನಾಡು ಒಂದಾಯಿತು ಅನ್ನೋದು ವಿಶೇಷ.
ಚೇತರಿಸಿಕೊಂಡ ಜೋಡಿ ಒಂಟೆ
ಸದ್ಯ ಸಾಖಿ ಮತ್ತು ಕ್ಲಾರಾ ಎರಡೂ ಇಲ್ಲಿನ ಬೇಸಿಗೆ ವಾತಾವರಣಕ್ಕೆ ಹೊಂದಿಕೊಂಡಿವೆ. ಇವುಗಳಿಗೆ ಎಲೆ, ಕ್ಯಾಬೇಜ್ ಇತ್ಯಾದಿಗಳನ್ನು ಆಹಾರವಾಗಿ ನೀಡಲಾಗುತ್ತಿದೆ. ಜೊತೆಗೆ ಕ್ಲಾರಾಳಿಗೆ ಚಿಕಿತ್ಸೆಯೂ ನಡೆಯುತ್ತಿದೆ. ಒಟ್ಟಿನಲ್ಲಿ ಜೋಡಿ ಒಂಟೆಗಳ ಉಳಿಸಲು ಅದರ ಬಡ ಮಾಲೀಕ ತನ್ನ ಕೈಯಿಂದ ಸಾಧ್ಯವಾಗದೇ ಹೋದ್ರೂ, ಪ್ರಾಣಿ ಸಂರಕ್ಷಣೆಗೆ ಕೇಂದ್ರಗಳಿಗೆ ನೀಡಿ ಮಾದರಿಯಾಗಿದ್ದಾನೆ.
ವರದಿ: ಎ.ಬಿ. ನಿಖಿಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ