ಕಾರವಾರ: ವಿಶಾಲವಾದ ಬೀಚ್, ಮರಳಿನಲ್ಲಿ ನಡೆದಾಡ್ತಿರೋ ಆಮೆ, ಇದು ಸಾಮಾನ್ಯ ಆಮೆಯಲ್ಲ, ಸಮುದ್ರದಲ್ಲಿ ವಾಸಿಸೋ ವಿಶಿಷ್ಟ ಕಡಲಾಮೆ! ಇದೀಗ ಈ ಕಡಲಾಮೆಯೇ ಭಾರೀ ಕುತೂಹಲ ಹುಟ್ಟಿಸಿರೋ ವೈರಲ್ ವಿಷಯ! ಕಡಲಾಮೆಗಳು (Sea Turtles) ರಾತ್ರಿಯ ವೇಳೆಯಲ್ಲಿ ಕಡಲತೀರಗಳಲ್ಲಿ ಮೊಟ್ಟೆಗಳನ್ನಿಡೋದು ಕಾಮನ್. ಆದರೆ ಇತ್ತೀಚಿನ ದಿನಗಳಲ್ಲಿ ಹಗಲಿನಲ್ಲೇ ಮೊಟ್ಟೆಗಳನ್ನಿಡುತ್ತಿದ್ದು, ಇದು ಕಡಲಶಾಸ್ತ್ರಜ್ಞರಲ್ಲಿ ಕುತೂಹಲ ಮೂಡಿಸಿದೆ.
ಭಾರತದಲ್ಲಿ ಕಡಲತೀರಗಳಲ್ಲಿ ಮೊಟ್ಟೆಗಳನ್ನಿಡುವ ಏಕೈಕ ಕಡಲಾಮೆಯೆಂದರೆ ಅದು ಆಲಿವ್ ರಿಡ್ಲೆ. ಈ ಅಪರೂಪದ ಕಡಲಾಮೆಗಳು ಡಿಸೆಂಬರ್‌ನಿಂದ ಮೇ ತಿಂಗಳ ಮೊದಲ ವಾರದಲ್ಲಿ ಪಶ್ಚಿಮ ಕರಾವಳಿಯಲ್ಲಿ ರಾತ್ರಿ ಸಮಯದಲ್ಲಿ ಮೊಟ್ಟೆ ಇಟ್ಟು ತೆರಳುತ್ತಿದ್ದವು. ಆದರೆ ಇತ್ತೀಚಿಗೆ ಈ ಸಮಯದಲ್ಲಿ ಬದಲಾವಣೆ ಕಂಡುಬಂದಿದ್ದು, ಹಗಲಿನಲ್ಲೇ ಮೊಟ್ಟೆಗಳನ್ನಿಡಲು ಆಮೆಗಳು ಕಡಲ ತೀರಕ್ಕೆ ಬರಲು ಶುರುಮಾಡಿವೆ.
ಈ ಭಾಗದಲ್ಲಿ ಕಡಲಾಮೆ ಮೊಟ್ಟೆ ಇಡ್ತಿದ್ವು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕ, ಕಾರವಾರದ ಮಾಜಾಳಿ, ಮುದಗಾ, ದೇವಭಾಗ್, ಅಂಕೋಲಾದ ನದಿಭಾಗ್ ಮುಂತಾದ ಕಡಲ ತೀರದಲ್ಲಿ ಪ್ರತಿ ವರ್ಷ ಡಿಸೆಂಬರ್‌ನಿಂದ ಏಪ್ರಿಲ್ ಅವಧಿಯಲ್ಲಿ ಕಡಲಾಮೆಗಳು ರಾತ್ರಿಯ ಅವಧಿಯಲ್ಲಿ ಮೊಟ್ಟೆ ಇಡುತ್ತಿದ್ದವು. ಈ ಮೊಟ್ಟೆಗಳನ್ನು ಅರಣ್ಯ ಇಲಾಖೆ ಸಂರಕ್ಷಿಸಿ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡುತ್ತಿತ್ತು.
ತಾವು ಬಂದ ದಾರಿ ಅಳಿಸುವ ಆಮೆಗಳು
ಅದರಲ್ಲೂ ಹೆಚ್ಚಾಗಿ ಹುಣ್ಣಿಮೆ, ಮಧ್ಯರಾತ್ರಿ ಬೆಳಕಿರುವ ಸಮಯದಲ್ಲಿ ಮೊಟ್ಟೆಗಳನ್ನಿಡುವ ಈ ಆಮೆಗಳು, ಅವುಗಳ ರಕ್ಷಣೆಯ ಜವಾಬ್ದಾರಿಯನ್ನೂ ತಾವೇ ವಹಿಸಿಕೊಂಡಿರುತ್ತವೆ. ಮೊಟ್ಟೆಗಳನ್ನಿಟ್ಟು ಹೋಗುವಾಗ ಮೊಟ್ಟೆಗಳಿರುವ ಜಾಗ ಗೊತ್ತಾಗದಂತೆ ತಾನು ಬಂದ ದಾರಿಯನ್ನೂ ಅಳಿಸಿ ತೆರಳುತ್ತವೆ.
ಬೆಳಗ್ಗೆಯೇ ಮೊಟ್ಟೆಯಿಟ್ಟ ಆಮೆ!
ಆದರೆ ಈ ವರ್ಷ ಜನವರಿಯ ಮೊದಲ ವಾರದಲ್ಲಿ ಕಾಸರಕೋಡಿನ ಟೊಂಕದಲ್ಲಿ, ಇತ್ತೀಚಿಗೆ ಕಾರವಾರದ ಮುದಗಾದಲ್ಲಿ ಬೆಳಗಿನ ಸಮಯದಲ್ಲೇ ಆಮೆಗಳು ಮೊಟ್ಟೆಗಳನ್ನಿಟ್ಟು ಅಚ್ಚರಿ ಮೂಡಿಸಿವೆ.
ಆಶ್ಚರ್ಯಪಟ್ಟ ಕಡಲಜೀವ ಶಾಸ್ತ್ರಜ್ಞರು
ಇನ್ನು ಈ ಬಗ್ಗೆ ಕಡಲಜೀವ ಶಾಸ್ತ್ರಜ್ಞ ಡಾ.ಶಿವಕುಮಾರ್ ಹರಗಿಯವರನ್ನ ಕೇಳಿದ್ರೆ, ಆಲಿವ್ ರಿಡ್ಲೆ ಕಡಲಾಮೆಗಳು ಹಗಲಿನಲ್ಲಿ ತೀರಕ್ಕೆ ಬಂದು ಮೊಟ್ಟೆಗಳನ್ನಿಡುತ್ತಿರುವುದು ನಮಗೂ ಆಶ್ಚರ್ಯ ತಂದಿದೆ. ಈ ಬೆಳವಣಿಗೆ ಹೊಸ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದ್ದು, ನಾವು ಕೂಡ ಈ ಬೆಳವಣಿಗೆಯ ಹಿಂದಿನ ಕಾರಣ ತಿಳಿಯಲು ಕಾತರರಾಗಿದ್ದೇವೆ ಎನ್ನುತ್ತಾರೆ.
ಇದನ್ನೂ ಓದಿ: Uttara Kannada: ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ!
ಆಮೆ ಮೊಟ್ಟೆ ತಿನ್ನುವ ಜನಾಂಗವೂ ಇದೆ
ಆಮೆಗಳ ಜೊತೆಗೆ ಆಮೆಗಳ ಮೊಟ್ಟೆಗಳಿಗೆ, ಅದರಲ್ಲೂ ಅಪರೂಪದ ಈ ಆಲಿವ್ ರಿಡ್ಲೇಗಳಿಗೆ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಈ ಆಮೆ ಮೊಟ್ಟೆಗಳನ್ನು ತಿನ್ನುವ ಜನಾಂಗವೂ ಇದೆ. ಹೀಗಾಗಿ ಅಂಥವರಿಂದ ಈ ಆಮೆಗಳನ್ನು ಸಂರಕ್ಷಿಸುವುದಕ್ಕಾಗಿ, ಅಳಿವಿನಂಚಿನಲ್ಲಿರುವ ಈ ಪ್ರಭೇದದ ಉಳಿವಿಗಾಗಿ ಶ್ರಮಿಸಲೆಂದೇ ಅರಣ್ಯ ಇಲಾಖೆ ಕರಾವಳಿ ಮತ್ತು ಕಡಲು ಪರಿಸರ ವಿಭಾಗವನ್ನ ಸ್ಥಾಪಿಸಿದೆ.
ಇದನ್ನೂ ಓದಿ: Sirsi: ಪ್ರಾಣಿಗಳಿಗೂ ಅನಾಥಾಶ್ರಮ! ಶಿರಸಿ ದಂಪತಿಯ ವಿಶಿಷ್ಟ ಸೇವೆ
ಈ ವಿಭಾಗ ಮೀನುಗಾರರ ಸಹಕಾರದೊಂದಿಗೆ ಮೊಟ್ಟೆಗಳನ್ನು ಸಂರಕ್ಷಿಸಿ, ದಿನವಿಡೀ ಕಾಯುವ ಕಾರ್ಯನಡೆಸುತ್ತಿದೆ. ಅಳಿವಿನಂಚಿನಲ್ಲಿರುವ ಇವುಗಳ ಸಂರಕ್ಷಣೆಗೆ, ಮೊಟ್ಟೆಗಳನ್ನು ಸುರಕ್ಷಿತವಾಗಿ ಪತ್ತೆ ಮಾಡಿಕೊಡುವವರಿಗೆ ಅರಣ್ಯ ಇಲಾಖೆ ಸಾವಿರ ರೂಪಾಯಿ ನಗದು ಬಹುಮಾನ ಕೂಡ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ