Sanikatta Salt: ತಿನ್ನೋಕೆ ಉಪ್ಪೇ ಸಿಗಲ್ಲ ಜೋಕೆ! ಉಪ್ಪು ತಯಾರಾಗುವುದು ಹೇಗೆ? ಬೆಳೆಗಾರರ ಜೀವನ ಉಪ್ಪಾಗಿದ್ದೇಕೆ?

ಉಪ್ಪು ತಯಾರಾಗೋದು ಎಲ್ಲಿ? ಹೇಗೆ? ಬಹುಶಃ ಈ ಪ್ರಶ್ನೆ ಹೊಳೆದಿರುವ ಸಾಧ್ಯತೆ ತುಂಬಾ ಕಡಿಮೆ. ಅದರಲ್ಲೂ ಉಪ್ಪು ಗದ್ದೆಯಲ್ಲಿ ಬೆಳೆಯುತ್ತದೆ ಎಂದು ತಿಳಿದರಂತೂ ನಿಮಗೆ ಅಚ್ಚರಿಯಾಗಬಹುದು. ಹಾಗಾದರೆ ಉಪ್ಪು ಬೆಳೆಯುವುದು ಹೇಗೆ? ಕರ್ನಾಟಕದ ಅತಿ ದೊಡ್ಡ ಉಪ್ಪು ತಯಾರಿಕಾ ಕೇಂದ್ರ ಎಲ್ಲಿದೆ? ಅವರ ಕಷ್ಟಸುಖಗಳೇನು? ಓದಿ

ಸಾಣಿಕಟ್ಟಾ ಉಪ್ಪು ತಯಾರಿಯ ಹಂತದಲ್ಲಿ

ಸಾಣಿಕಟ್ಟಾ ಉಪ್ಪು ತಯಾರಿಯ ಹಂತದಲ್ಲಿ

  • Share this:
ಉತ್ತರ ಕನ್ನಡ: ಅಡುಗೆಯಲ್ಲಿ ಏನು ಇರದಿದ್ದರೂ ಸರಿ, ಉಪ್ಪೇ ಇರದಿದ್ದರೆ ಉಣ್ಣಲಿಕ್ಕಾಗದು, ನಾಲಿಗೆ ಕ್ಷಮಿಸದು. ಎಷ್ಟೇ ರುಚಿಯಾದರೂ ಉಪ್ಪು ಕಡಿಮೆಯೋ ಹೆಚ್ಚೋ ಆಗಿಬಿಟ್ಟರೆ ರುಚಿಯ ರಸಗ್ರಂಥಿಗಳಿಗೆ ಎಸಗಿದ ಮಹಾ ಅಪಚಾರ ಎಂದೇ ಹೇಳುತ್ತಾರೆ ಭೋಜನ ಪ್ರಿಯರು. ಇಂತಾ ರುಚಿ ರುಚಿಯಾದ ಉಪ್ಪೇ ಅಂಗಡಿಯಲ್ಲಿ ಸಿಗದಿದ್ದರೆ? ಅಯ್ಯೋ! ಅಡುಗೆ ಮಾಡುವುದೆಂತು? ಸುಮಾರು 300 ವರ್ಷಗಳಿಂದ ಉಪ್ಪಿನ ಉತ್ಪಾದನೆ ಮಾಡುತ್ತಿರುವ ಕರ್ನಾಟಕದ ಕುಮಟಾದ  (Kumta Salt) ಸಾಣಿಕಟ್ಟಾದಲ್ಲಿ ಉಪ್ಪಿನ ಕೊರತೆ (Lack Of Salt) ಉಂಟಾಗಿದೆ. ಸಾಣಿಕಟ್ಟಾ ಉಪ್ಪನ್ನೇ (Sanikatta Salt) ಬಳಸುವ ಉತ್ತರ ಕನ್ನಡ, ಶಿವಮೊಗ್ಗ, ಗೋವಾ ಮತ್ತು ರಾಜ್ಯದ ವಿವಿಧೆಡೆ ಉಪ್ಪಿನ ಕೊರತೆ ಕಾಡಲಿದೆ ಎಂಬ ಆತಂಕ ಎದುರಾಗಿದೆ.

ನೀವು ವಿಶ್ವಪ್ರಸಿದ್ಧ ಗೋಕರ್ಣಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಚಾಚಿದಷ್ಟೂ ದೂರದ ಗದ್ದೆ ಬಯಲನ್ನು ನೋಡಿರುತ್ತೀರಿ. ಈ ಗಜನಿ ಭೂಮಿಯಲ್ಲಿ ಭತ್ತವನ್ನೋ, ಗೋಧಿಯನ್ನೋ ಅಥವಾ ಇನ್ನಾವ ಬೆಳೆಯನ್ನೋ ಬೆಳೆಯುದಿಲ್ಲ. ಬದಲಿಗೆ ಉಪ್ಪು ಬೆಳೆಯುತ್ತಾರೆ! ಉಪ್ಪನ್ನೂ ಹೀಗೆ ಗದ್ದೆಯಲ್ಲಿ ಬೆಳೆಯುತ್ತಾರೆ ಎಂಬ ವಿಷಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ!

50 ಎಕರೆಯಿಂದ ಶುರುವಾದದ್ದು 450 ಎಕರೆಗೆ
ಬರೋಬ್ಬರಿ 300 ವರ್ಷಗಳಿಂದ, ಅಂದರೆ 1720ರಿಂದಲೇ ಸಾಣಿಕಟ್ಟಾದಲ್ಲಿ ಉಪ್ಪು ಉತ್ಪಾದನೆ ಮಾಡಲಾಗುತ್ತಿದೆ. 50 ಎಕರೆಯಿಂದ ಶುರುವಾದ ಉಪ್ಪು ತಯಾರಿಕೆ ಇಂದು 450 ಎಕರೆ ತಲುಪಿದೆ. 1952ರಲ್ಲಿ ಅಧಿಕೃತವಾಗಿ ನಾಗರಬೈಲ್ ಉಪ್ಪು ತಯಾರಕರ ಸಹಕಾರಿ ಸಂಘ ಆರಂಭವಾಗಿ ಸಹಕಾರಿ ಪದ್ಧತಿಗೆ ನಾಂದಿ ಹಾಡಿದೆ.

Sanikatta Salt Kumta
ಉಪ್ಪು ತಯಾರಾಗುವ ವಿಶಾಲ ಗದ್ದೆ ಬಯಲು


ಉಪ್ಪಿಗೆ ತೆರಿಗೆ ವಿಧಿಸಿದ್ದ ಟಿಪ್ಪು ಸುಲ್ತಾನ್
ಇದೀಗ ಇದೇ ಸಂಘದ ವತಿಯಿಂದ ಉತ್ತರಕನ್ನಡ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗೋವಾ ಸೇರಿದಂತೆ ವಿವಿಧ ಪ್ರದೇಶಗಳಿಗೆ ಉಪ್ಪನ್ನು ರಫ್ತು ಮಾಡಲಾಗುತ್ತದೆ. ಬೈಂದೂರು ಅರಸರ ಆಡಳಿತದಿಂದ ಹೈದರಾಲಿ ಈ ಪ್ರದೇಶವನ್ನು ವಶಪಡಿಸಿಕೊಂಡಿದ್ದ. ನಂತರ ಹೈದರಾಲಿಯ ಮಗ ಟಿಪ್ಪು ಸುಲ್ತಾನ್ ಮೊಟ್ಟ ಮೊದಲ ಬಾರಿಗೆ ಉಪ್ಪಿಗೆ ತೆರಿಗೆ ವಿಧಿಸಿದ್ದನಂತೆ!

ಉಪ್ಪು ಉತ್ಪಾದನೆ ಕುಸಿತಕ್ಕೆ ಏನು ಕಾರಣ?
ನಾವು ದಿನನಿತ್ಯದ ಅಡುಗೆಗೆ ಬಳಸುವ ಉಪ್ಪಿಗೂ ಹವಾಮಾನ ವೈಪರೀತ್ಯಕ್ಕೂ ಸಂಬಂಧ ಇದೆ ಎಂದರೆ ನೀವು ಒಂದು ಕ್ಷಣಕ್ಕೆ ನಂಬಲಾರಿರಿ. ಕಳೆದ ವರ್ಷದ ಅಬ್ಬರದ ಮಳೆಗಾಲವೇ ಬರೋಬ್ಬರಿ 3 ಸಾವಿರ ಟನ್ ಉಪ್ಪು ಉತ್ಪಾದನೆ ಕುಸಿತಕ್ಕೆ ಕಾರಣ! ಹಿಂದಿನ ವರ್ಷದ ತೌಕ್ತೆ ಚಂಡಮಾರುತ ನಿಮಗೆ ನೆನಪಿರಬಹುದು.

Sanikatta Salt Kumta
ತಯಾರಾದ ಉಪ್ಪಿನ ಪ್ಯಾಕಿಂಗ್​​ನಲ್ಲಿ ನಿರತ ಮಹಿಳೆ


ಉಪ್ಪಿನ ಸೀಸನ್ ವರ್ಷಕ್ಕೆ 100 ದಿನ ಮಾತ್ರ!
ಉಪ್ಪಿನ ಉತ್ಪಾದನೆಯ ಸೀಸನ್ ವರ್ಷಕ್ಕೆ 100 ದಿನ ಮಾತ್ರ. ಅದು ಫೆಬ್ರವರಿಯಿಂದ ಮೇ ತಿಂಗಳವರೆಗೆ. ಅದರಲ್ಲೂ. ಏಪ್ರಿಲ್ ಮತ್ತು ಮೇ ಅತಿ ಹೆಚ್ಚು ಉಪ್ಪು ಉತ್ಪಾದನೆ ಆಗುವ ತಿಂಗಳು. ತೌಕ್ತೆ ಚಂಡಮಾರುತದಬ್ಬರ ಇದೇ ತಿಂಗಳಲ್ಲಿ ಉಪ್ಪು ಉದ್ಯಮಕ್ಕೆ ಏಟು ಕೊಟ್ಟಿತು. ಮಳೆ ಮತ್ತು ಸಮುದ್ರದ ಅಲೆಗಳ ಅಬ್ಬರಕ್ಕೆ ಉಪ್ಪು ಉತ್ಪಾದಿಸಲು ಆಗಲೇ ಇಲ್ಲ.

ಕಳೆದ ವರ್ಷ ನವೆಂಬರ್ ತಿಂಗಳವರೆಗೂ ಮಳೆ ಬಂದು ಉಪ್ಪಿನ ತಯಾರಿ ಆರಂಭಿಸುವುದೇ ತಡವಾಯಿತು. ಫೆಬ್ರವರಿ ಮೊದಲ ವಾರದಲ್ಲಿ ತಯಾರಾಗುವ ಉಪ್ಪು ಮಾರ್ಚ್ 10ಕ್ಕೆ ತಯಾರಾಯ್ತು ಎನ್ನುತ್ತಾರೆ ನಾಗರಬೈಲ್ ಸೊಸೈಟಿಯ ನವೀನ್ ನಡ್ಕಣಿ.

ಕೆಲಸ ಕಳೆದುಕೊಂಡ ಕಾರ್ಮಿಕರು
ಪ್ರತಿವರ್ಷ ಅಂದಾಜು 8-10 ಸಾವಿರ ಟನ್ ಉಪ್ಪು ಉತ್ಪಾದನೆಯಾಗುತ್ತಿದ್ದ ಗಜನಿ ಭೂಮಿಯಲ್ಲಿ 6-7 ಸಾವಿರ ಟನ್ ಉಪ್ಪು ಉತ್ಪಾದನೆಗೆ ಸೀಮಿತವಾಯ್ತು. ಮಳೆಯ ಅಷ್ಟೂ ದಿನ ಉಪ್ಪು ತಯಾರಿಕೆಯ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತಾಯ್ತು.

Sanikatta Salt Kumta
ಉಪ್ಪಿನ ದಾಸ್ತಾನು


ಉಪ್ಪಿನ ಉತ್ಪಾದನೆ ಕಡಿಮೆಯಾಗಿರುವುದು ಬೆಲೆಯ ಮೇಲೂ ಪರಿಣಾಮ ಬೀರಿದೆ. ಮೊದಲು 1 ಕೆಜಿ ಉಪ್ಪಿಗೆ 7-8 ರೂ. ಇದ್ದ ಸಾಣಿಕಟ್ಟಾ ಉಪ್ಪು ಇದೀಗ 12 ರೂ.ಗೆ ತಲುಪಿದೆ.

ಉಪ್ಪು ತಯಾರಿಸಲು ಎಲ್ಲರಿಗೂ ಬರದು!
ಉಪ್ಪಿನ ಗದ್ದೆಯಿದೆ. ಸಮುದ್ರದ ನೀರಿದೆ. ನಾವೂ ಉಪ್ಪು ತಯಾರಿಸಬಹುದಲ್ಲ ಎಂದು ನೀವು ಕೇಳಬಹುದು. ಆದರೆ ಅದು ಅಷ್ಟು ಸುಲಭಕ್ಕೆ ಸಾಧ್ಯವಲ್ಲದ್ದು. ಆಯಾ ವೃತ್ತಿಗಳನ್ನು ಆಯಾಯಾ ಸಮುದಾಯಗಳೇ ನಿರ್ವಹಿಸುವ, ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ರೂಢಿಯಿದೆ. ಉಪ್ಪು ಉದ್ಯಮದಲ್ಲೂ ಅಷ್ಟೇ, ಆಗೇರ ಸಮುದಾಯ ಜನರು ಉಪ್ಪು ತಯಾರಿಕೆಯಲ್ಲಿ ನಿಷ್ಣಾತರು. ಇವರು ತಯಾರಿಸಿದ ಉಪ್ಪಿಗೆ ಬಲುರುಚಿ. ಬಹು ಹಿಂದಿನಿಂದಲೂ ಪರಂಪರಾನುಗತವಾಗಿ ಸಾಣಿಕಟ್ಟಾ ಉಪ್ಪು ತಯಾರಿಸುತ್ತಿರುವವರು ಇದೇ ಆಗೇರ ಸಮುದಾಯದ ಕುಶಲಿಗಳು.

ಆಗೇರ ಹೆಸರು ಬಂದಿದ್ದೇ ಉಪ್ಪಿನಿಂದ!
ಉಪ್ಪಿನ ಗದ್ದೆಗಳಲ್ಲಿ ಅಲ್ಲಲ್ಲಿ ಹಿಮದ ರಾಶಿಯಂತೆ ಕಾಣುವ ಉಪ್ಪಿನ ರಾಶಿ ಅಥವಾ ಉಪ್ಪಿನ ಆಗರದಿಂದ ಇವರಿಗೆ ‘ಆಗೇರ’ ಹೆಸರು ಬಂದಿದ್ದಂತೆ. ಸೀಸನಲ್ ಉದ್ಯೋಗವಾಗಿ ಉಪ್ಪು ತಯಾರಿಕೆ ನಾಗರಬೈಲ್ ಉಪ್ಪು ತಯಾರಿಕೆ ಸಹಕಾರಿ ಸಂಘವೊಂದರಲ್ಲೇ 100 ಜನರಿಗೆ ಉದ್ಯೋಗ ನೀಡಿದೆ. ಅಂದಹಾಗೆ ಗೋಕರ್ಣದ ಆಸುಪಾಸು ಖಾಸಗಿ ಉಪ್ಪು ಉತ್ಪಾದನಾ ಕೇಂದ್ರಗಳೂ ಇವೆ.

ಹೇಗೆ ಉಪ್ಪು ತಯಾರಿಸುತ್ತಾರೆ?
ಸಮುದ್ರದ ನೀರನ್ನು ಗಜನಿ ಭೂಮಿ ಅಥವಾ ಗದ್ದೆಗಳಿಗೆ ಹರಿಸಲಾಗುತ್ತದೆ. ನಿಗದಿತ ಪ್ರಮಾಣದ ಸಮುದ್ರದ ನೀರು ಗದ್ದೆಗಳಲ್ಲಿ ಬಿಸಿಲಿಗೆ ಉಪ್ಪಾಗಿ ಪರಿವರ್ತನೆಯಾಗುತ್ತದೆ. ಈ ಉಪ್ಪನ್ನು ನಂತರ 10 ದಿನಗಳವರೆಗೆ ಸೂರ್ಯನ ಕೆಳಗೆ ಒಣಗಿಸಲಾಗುತ್ತದೆ. ಆಗೇರ ಸಮುದಾಯಸ ಕುಶಲಕರ್ಮಿಗಳು ಗುದ್ದಲಿಗಳಲ್ಲಿ ಉಪ್ಪನ್ನು ಅಗೆದು ಆಯೋಡಿನ್ ಮಿಕ್ಸರ್​ಗೆ ಹಾಕುತ್ತಾರೆ. 20 ಮೆಟ್ರಿಕ್ ಟನ್ ಉಪ್ಪಿಗೆ 1 ಕಿಲೋ ಆಯೋಡಿನ್ ಅಗತ್ಯವಿದೆ.

Sanikatta Salt Kumta
ಆಗೇರ ಸಮುದಾಯದ ಜೀವನಾಧಾರ ಉಪ್ಪು


ಉಪ್ಪಿನ ಗದ್ದೆಗಳ ಮಾಲೀಕರು ಯಾರು?
ನೀವು ಗೋಕರ್ಣ ಪ್ರವೇಶಿಸುವ ಮುನ್ನ ಕಾಣುವ ಉಪ್ಪು ಉತ್ಪಾದಿಸುವ ಗದ್ದೆ ಬಯಲುಗಳು ಎಷ್ಟು ನೋಡಿದರೂ ಮುಗಿಯುವುದೇ ಇಲ್ಲ! ಅಷ್ಟು ವಿಶಾಲವಾದ ಗದ್ದೆ ಬಯಲುಗಳ ಮಾಲೀಕರು ಯಾರು? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಗದ್ದೆ ಬಯಲುಗಳು ನೂರಾರು ಜನರಿಗೆ ಸೇರಿವೆ. ನಾಗರಬೈಲ್ ಉಪ್ಪಿನ ಸೊಸೈಟಿ ಶುರುವಾಗುವ ಮುನ್ನ ಇವರೆಲ್ಲರೂ ಪ್ರತ್ಯೇಕವಾಗಿ ಉಪ್ಪು ಉತ್ಪಾದನೆ ಮಾಡುತ್ತಿದ್ದರಂತೆ. ಆದರೆ ಕಾಲ ಬದಲಾದಂತೆ ಉದ್ಯೋಗಕ್ಕಾಗಿ ಮುಂಬೈ ಸೇರುವ ಪ್ರವೃತ್ತಿ ಹೆಚ್ಚಿತು. ಆಗಲೇ ಉಪ್ಪಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಅದರಲ್ಲೂ ಆಗೆಲ್ಲ ಈಗಿನಂತೆ ಬೇರೆ ಬೇರೆ ಕಂಪನಿಯ ಉಪ್ಪುಗಳು ಸಿಗುತ್ತಿರಲಿಲ್ಲ. ಹೀಗಾಗಿ ಉಪ್ಪಿನ ಉತ್ಪಾದನೆಯನ್ನು ನಿಲ್ಲಿಸುವಂತೆಯೂ ಇಲ್ಲ, ಏನು ಮಾಡೋದು?

ದೇಶದ ಮೊದಲ ಉಪ್ಪು ಉತ್ಪಾದನಾ ಸಹಕಾರಿ ಸಂಘ!
ಎಲ್ಲರೂ ಸೇರಿ ಸಹಕಾರಿ ಸಂಘ ಕಟ್ಟಿದರು. ಹೆಸರಾಂತ ರುಚಿ ರುಚಿ ಸಾಣಿಕಟ್ಟಾ ಉಪ್ಪು ಉತ್ಪಾದಿಸುವ ಜವಾಬ್ದಾರಿ ಹೊತ್ತಿರುವ ಆ ಸಂಘವೇ 300 ಕ್ಕಿಂತ ಹೆಚ್ಚು ಸದಸ್ಯರ ನಾಗರಬೈಲ್ ಸೊಸೈಟಿ. ಕಾರವಾರ, ಅಂಕೋಲಾದಲ್ಲೂ ಉಪ್ಪು ಉತ್ಪಾದಿಸುತ್ತಾರೆ. ಆದರೆ ಸಾಣಿಕಟ್ಟಾ ಸೊಸೈಟಿ  ಇದು ದೇಶದ ಮೊದಲ ಉಪ್ಪು ಉತ್ಪಾದನಾ ಸಹಕಾರಿ ಸಂಘವೂ ಹೌದು. ಕರ್ನಾಟಕದ ಅತಿ ದೊಡ್ಡ ಉಪ್ಪು ಉತ್ಪಾದನಾ ಕೇಂದ್ರವೂ ಹೌದು!Sanikatta Salt Kumta
ಗದ್ದೆ ಬಯಲಿಂದ ಊಟದ ತಟ್ಟೆಗೆ ಸಾಣಿಕಟ್ಟಾ ಉಪ್ಪು ಬರುವುದೇ ವಿಸ್ಮಯ!


ಎಲ್ಲೆಲ್ಲಿ ಪೂರೈಕೆ ಆಗುತ್ತೆ?
ಕರಾವಳಿ ಇದ್ದ ಮಾತ್ರಕ್ಕೆ ಉಪ್ಪು ಉತ್ಪಾದನೆ ಸಾಧ್ಯವಿಲ್ಲ. ನೀವು ಮಂಗಳೂರು, ಉಡುಪಿಯಲ್ಲಿ ಎಲ್ಲೂ ಉಪ್ಪಿನ ಉತ್ಪಾದನೆ ನೋಡಲು ಸಾಧ್ಯವೇ ಇಲ್ಲ. ಆಗಲೂ, ಈಗಲೂ ಕರ್ನಾಟಕದಲ್ಲಿ ಉಪ್ಪು ಉತ್ಪಾದನೆಯಾಗುವುದು ಅಂಕೋಲಾ-ಕುಮಟಾ-ಕಾರವಾರ ಪ್ರದೇಶಗಳಲ್ಲಿ ಮಾತ್ರ. ಇಲ್ಲಿಯ ಉಪ್ಪು ರಾಜ್ಯದ ಬಹುತೇಕ ಭಾಗಗಳಲ್ಲಿ ಮಾರುಕಟ್ಟೆ ಸ್ಥಾಪಿಸಿದೆ. ಅದರಲ್ಲೂ ಸಹಕಾರ ಪದ್ಧತಿಯಲ್ಲಿ ಬೆಳೆಯುವ ಸಾಣಿಕಟ್ಟಾ ಉಪ್ಪಿಗೆ ಹುಬ್ಬಳ್ಳಿ-ಧಾರವಾಡ, ಹಾವೇರಿ, ಹಾನಗಲ್ ಸೇರಿ ಉತ್ತರ ಕರ್ನಾಟಕದೆಲ್ಲೆಡೆ ಸರಬರಾಜಾಗುತ್ತದೆ. ಅದರ ಉಪ್ಪು ಉತ್ಪಾದನೆ ಎಷ್ಟೇ ಕುಸಿತವಾದರೂ ಸ್ವಂತ ಜಿಲ್ಲೆ ಉತ್ತರ ಕನ್ನಡಕ್ಕೇ ಮೊದಲ ಆದ್ಯತೆ ಎನ್ನುತ್ತಾರೆ ನಾಗರಬೈಲ್ ಸೊಸೈಟಿಯ ಅಧ್ಯಕ್ಷ ನವೀನ್.

ಇದನ್ನೂ ಓದಿ: Wonder Mango: ವರ್ಷಕ್ಕೆ ಎರಡು ಸಲ ಫಸಲು ನೀಡುವ ಮಾವಿನ ಮರ! ಬೆಳಗಾವಿಯಲ್ಲಿದೆ ಅಚ್ಚರಿಯ ಮಾವು

ಈ ಬಾರಿ ಉಪ್ಪು ಉತ್ಪಾದನೆಯ ಕೊರತೆ ಆಗಿರುವುದಿಂದ ಹೊರಜಿಲ್ಲೆಗಳಿಗೆ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ಹಿಂದಿನಿಂದಲೂ ಇದ್ದ ವ್ಯಾಪಾರಿಗಳಿಗೆ ಪೂರೈಸಲು ಆದ್ಯತೆ ನೀಡಲಾಗಿದೆ. ಉಪ್ಪು ಉತ್ಪಾದನೆ ಕುಸಿತದ ದುರುಪಯೋಗ ಪಡೆಯಲು ಬ್ಲಾಕ್ ಮಾರ್ಕೆಟ್ ದಂದೆಯೂ ಶುರುವಾಗಿದೆ.

Sanikatta Nagarbail Karnataka ಕರ್ನಾಟಕದ ಅತಿ ದೊಡ್ಡ ಉಪ್ಪು ಉತ್ಪಾದನಾ ಕೇಂದ್ರಕ್ಕೆ ಹೀಗೆ ಹೋಗಿ! (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

ಸಾಣಿಕಟ್ಟಾ ಉಪ್ಪನ್ನೇ ಏಕೆ ತಿನ್ನಬೇಕಂತೆ?
ಭಾರತದಲ್ಲಿ ಕರ್ನಾಟಕದ ಅಂಕೋಲಾ-ಕುಮಟಾ ಬಿಟ್ಟರೆ ಗುಜರಾತ್, ತಮಿಳುನಾಡಲ್ಲಿ ಬೃಹತ್ ಪ್ರಮಾಣದಲ್ಲಿ ಉಪ್ಪು ಉತ್ಪಾದನೆಯಾಗುತ್ತದೆ. ಆದರೆ ಅದು ಕಲ್ಲುಪ್ಪು ಅಥವಾ ಹರಳುಪ್ಪು ಅಲ್ಲ. ವಿವಿಧ ಬ್ರಾಂಡೆಡ್ ಕಂಪನಿಗಳ ಲೇಬಲ್​ನಡಿ ಮಾರುಕಟ್ಟೆಯಲ್ಲಿ ಸಿಗುವ ಪೌಡರ್ ಉಪ್ಪು. ಪೌಡರ್ ಉಪ್ಪಿನಂತೆ ಕಲ್ಲುಪ್ಪಿನಲ್ಲಿ ರಾಸಾಯನಿಕಗಳಿಲ್ಲ. ಜೊತೆಗೆ ಕಲ್ಲುಪ್ಪಿನಿಂದ ಯಾವ ದುಷ್ಪರಿಣಾಮವೂ ಇಲ್ಲ. ಕಲ್ಲುಪ್ಪು ಪೌಡರ್ ಉಪ್ಪಿನಷ್ಟು ಕಟು ಅಲ್ಲ. 

ಇದನ್ನೂ ಓದಿ: World's Cheapest Water Filter: ಈ ವಾಟರ್ ಫಿಲ್ಟರ್ ಬೆಲೆ 30 ರೂ ಮಾತ್ರ! ಜಗತ್ತಿನ ಅತಿ ಕಡಿಮೆ ಬೆಲೆಯ ಫಿಲ್ಟರ್ ತಯಾರಿಸಿದ ಬೆಳಗಾವಿಯ ಸಂಶೋಧಕ

ಒಮ್ಮೆ ಕಲ್ಲುಪ್ಪಿನ ರುಚಿ ಕಂಡ ಬೆಂಗಳೂರಿನ ಮಂದಿಯಂತೂ ಇದೇ ಉಪ್ಪು ಬೇಕೆಂದು ದುಂಬಾಲು ಬೀಳುತ್ತಾರೆ ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ ನಾಗರಬೈಲ್ ಸೊಸೈಟಿಯ ಉಪ್ಪು ಮಾರಾಟದ ಮುಖ್ಯಸ್ಥ ಅನಿಲ್ ನಡ್ಕಣಿ.
Published by:guruganesh bhat
First published: