ಉತ್ತರ ಕನ್ನಡ: ಬೆಳ್ಳುಳ್ಳಿ, ಈರುಳ್ಳಿ (Onion), ಶುಂಠಿ, ಇನ್ನೊಂದಿಷ್ಟು ತರಕಾರಿ (Vegetables) ತಿರುಳುಗಳಲ್ಲಿ ತಂಬುಳಿ ಮಾಡೋದನ್ನ ನೋಡಿದ್ದೀವಿ ಅಥವಾ ಟೇಸ್ಟ್ ಮಾಡಿದ್ದೀವಿ. ಆದ್ರೆ ಇಲ್ಲೋರ್ವ ಮಹಿಳೆ ಶ್ರೀಗಂಧದ ಎಲೆ ತಂಬುಳಿ ಮಾಡಿ ಉಣಬಡಿಸುತ್ತಾರೆ. ಅಷ್ಟೇನು ಬಾಯಿಗೆ ರುಚಿಕರವಲ್ಲದ ಶ್ರೀಗಂಧದ ಎಲೆಯ ತಂಬುಳಿ ರುಚಿ ಹೇಗಿರುತ್ತೆ ಅಂತಾ ಕೇಳ್ತೀರ? ಉತ್ತರ ಕನ್ನಡದ ಮುಂಡಗೋಡ ನಿವಾಸಿ ಆಶಾ ರಾವ್ ಅದನ್ನ ರೆಸಿಪಿ ಸಹಿತ ನಮ್ ಮುಂದಿಟ್ಟಿದ್ದಾರೆ ನೋಡಿ.
ಹೀಗೆ ಮಾಡಿ ತಂಬುಳಿ
ಯೆಸ್, ಶ್ರೀಗಂಧದ ಎಲೆಯ ತಂಬುಳಿ ಈಗಂತೂ ಅಪರೂಪದಲ್ಲಿ ಅಪರೂಪ. ಹೆಚ್ಚಿನವರಿಗೆ ಶ್ರೀಗಂಧದ ಎಲೆಯಿಂದನೂ ತಂಬುಳಿ ಮಾಡೋದಕ್ಕೆ ಸಾಧ್ಯ ಅನ್ನೋದೆ ಗೊತ್ತಿಲ್ಲ. ಹಾಗಿದ್ರೆ ಈ ತಂಬಳಿ ಮಾಡೋದು ಹೇಗೆ ಅಂತಾ ಆಶಾ ರಾವ್ ತೋರಿಸಿ ಕೊಡುತ್ತಾರೆ ನೋಡಿ. ಮೊದಲು ತುಪ್ಪದಲ್ಲಿ ಶ್ರೀಗಂಧದ ಕುಡಿಗಳನ್ನು ಹುರಿದುಕೊಳ್ಳಬೇಕು. ನಂತರ ಮತ್ತೊಂದು ಕಡೆ ಜೀರಿಗೆ, ಕಾಳುಮೆಣಸು, ಬೇವಿನ ಸೊಪ್ಪು, ಮೆಂತ್ಯೆಯನ್ನು ಸೇರಿಸಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹುರಿದುಕೊಳ್ಳಬೇಕು.
ಅದಾದ ಮೇಲೆ ತುಪ್ಪದಲ್ಲಿ ಬೇಯಿಸಿದ ಶ್ರೀಗಂಧದ ಕುಡಿಗಳನ್ನು ಆ ಜೀರಿಗೆ, ಕಾಳುಮೆಣಿಸಿನ ಒಗ್ಗರಣೆಗೆ ಬೆರೆಸಿ ಹುರಿದುಕೊಳ್ಳಬೇಕು. ನಂತರ ಕೊಬ್ಬರಿ ತುರಿಯನ್ನು ಸೇರಿಸಿ ಮತ್ತೆ ಸ್ವಲ್ಪ ಸಣ್ಣಗಿನ ಉರಿಯಲ್ಲಿ ಹುರಿಯಬೇಕು. ಈಗ ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಬೇಕು. ತದನಂತರ ಒಂಚೂರು ಮೊಸರು ಸೇರಿಸಿ ಕೊನೆಗೆ ಮಜ್ಜಿಗೆಯನ್ನು ಸೇರಿಸಿದರೆ ನಿಮಗೆ ಶ್ರೀಗಂಧದ ಎಲೆ ತಂಬುಳಿ ರೆಡಿ!
ದೇಹಕ್ಕೆ ತಂಪು ನೀಡೋ ತಂಬುಳಿ
ಹೀಗೆ ತಯಾರಾದ ಶ್ರೀಗಂಧದ ಎಲೆಯ ತಂಬುಳಿಯನ್ನು ಅನ್ನದ ಜೊತೆಗೆ ಸೇವಿಸಬಹುದು ಅಥವಾ ಮಿಕ್ಸಿ ಮಾಡಿದ ಮಿಶ್ರಣವನ್ನು ಚಟ್ನಿಯಾಗಿ ಮಾಡಿಟ್ಟುಕೊಂಡು ಎರಡು ಮೂರು ದಿನಗಳವರೆಗೆ ತಿನ್ನಬಹುದು. ಹಾಗೆ ಕುಡಿಯಲಿಕ್ಕೂ ಒಳ್ಳೆ ಗಮ್ಮತ್ತಿನ ಪೇಯ ಇದು. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡೋ ಈ ತಂಬುಳಿ, ಹುಳಿ, ಒಗರಿನೊಂದಿಗೆ ಬಾಯಿ ರುಚಿಯನ್ನೂ ಹೆಚ್ಚಿಸುತ್ತೆ.
ಇದನ್ನೂ ಓದಿ: ಕಾಫಿ ಸ್ಟಿಕ್ನಲ್ಲಿ ಅದ್ಭುತ ಕಲಾಕೃತಿ, ಇವರ ನೈಪುಣ್ಯಕ್ಕೆ ಭೇಷ್ ಅಂತೀರಿ!
ಆಶಾ ರಾವ್ ಅಡುಗೆ ಸ್ಪೆಷಲ್
ವಿಶೇಷ ಅಂದ್ರೆ ಆಶಾ ರಾವ್ ಅವರು ಚಿಕ್ಕಂದಿನಿಂದ ಈ ತಂಬುಳಿ ಮಾಡುತ್ತಾ ಬಂದಿದ್ದಾರೆ. ಶ್ರೀಗಂಧ ಅಷ್ಟೇ ಅಲ್ಲದೇ ಕುಂಬಳಕಾಯಿಯಿಂದ ಹಿಡಿದು ವೇಸ್ಟ್ ಎಂದು ಬಿಸಾಡುವ ಕಾಯಿಬದನೆವರೆಗೂ ಎಲ್ಲಾ ರೀತಿಯ ತಂಬುಳಿ, ಚಟ್ನಿ, ಪಲ್ಯ, ತಿನಿಸುಗಳನ್ನು ಮಾಡುವುದರಲ್ಲಿ ಇವ್ರದ್ದು ಎತ್ತಿದ ಕೈ. ಒಟ್ಟಿನಲ್ಲಿ ಬೇಸಿಗೆಯಲ್ಲಿ ದೇಹ ತಂಪಾಗಿಸೋ ಈ ಮಲೆನಾಡಿನ ಪಾನೀಯ ಎಂತವರಿಗೂ ಇಷ್ಟವಾಗೋದ್ರಲ್ಲಿ ಸಂಶಯನೇ ಇಲ್ಲ.
ವರದಿ: ಎ.ಬಿ. ನಿಖಿಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ