ಉತ್ತರ ಕನ್ನಡ: ಬಿದ್ದು ಹೋಗೋ ಎಲೆಯಲ್ಲಿ ಎದ್ದು ಬಂದ ಆದಿಶಿವ, ಒಣಗೋ ತರಗೆಲೆಯಲ್ಲಿ ನಗುತ್ತಿರುವ ಚಾರ್ಲಿ ಚಾಪ್ಲಿನ್. ಕಾಂತಾರದ ಶಿವ ಪಂಜುರ್ಲಿ (Kantara Shiva Panjurli), ನೆಚ್ಚಿನ ನಟಿಯರು, ದೇವರ ಸ್ವರೂಪದ ಅದ್ಭುತ ಪೆನ್ಸಿಲ್ ಆರ್ಟ್. ಇಷ್ಟೆಲ್ಲ ಬಗೆ ಬಗೆಯ ಡ್ರಾಯಿಂಗ್ ಕಲೆ ಕರಗತ ಮಾಡ್ಕೊಂಡಿರೋ ಈ ಹುಡುಗ ಇನ್ನೂ ಪಿಯು ಸ್ಟೂಡೆಂಟ್. ಈತನ ಕಲಾ ಚತುರತೆಯಿಂದ ಹದಿ ಹರೆಯದಲ್ಲೇ ಪಾರ್ಟ್ ಟೈಂ ಆರ್ಟ್ ಟೀಚರ್ (Art Teacher) ಆಗಿ ಪಾಠ ಮಾಡ್ತಾನೆ. ಒಂದೊಂದು ಚಿತ್ರವೂ ಈತನ ಕುಂಚದಲ್ಲಿ ಅದ್ಭುತವನ್ನೇ ಸೃಷ್ಟಿಸಿ ಮೋಡಿ ಮಾಡ್ತಿದೆ.
ಲೀಫ್ ಆರ್ಟ್ ಚಾಕಚಕ್ಯತೆ
ಯೆಸ್, ರವಿವರ್ಮನ ಕಲೆಯ ಕುಂಚದಲ್ಲಿ ಅರಳಿದಂತೆಯೇ ಅಂಕೋಲಾದ ರವೀಶ್ ಹರಿಕಂತ್ರ ಕುಂಚದಲ್ಲಿ ಅದ್ಭುತ ಎನಿಸೋ ಕಲಾಚಿತ್ರಗಳು ಆಕರ್ಷಿಸುತ್ತವೆ. ಅಂಕೋಲಾದ ಚಿಗುರು ಮೀಸೆಯ ಹುಡುಗ ರವೀಶ್, ಅದಾಗಲೇ ಐದಾರು ಬಗೆಯ ಚಿತ್ರಕಲೆ ಪ್ರಕಾರಗಳನ್ನು ಕರಗತ ಮಾಡಿಕೊಂಡು ಭೇಷ್ ಎನಿಸಿಕೊಂಡಿದ್ಧಾರೆ. ಅದರಲ್ಲೂ ಲೀಫ್ ಆರ್ಟ್ನಲ್ಲಿ ಕೇವಲ ಹದಿನೈದು ನಿಮಿಷದಲ್ಲಿ ಚಿತ್ರ ಬಿಡಿಸಿ ಹುಬ್ಬೇರಿಸುವಂತೆ ಮಾಡುತ್ತಾರೆ.
ಪಾರ್ಟ್ ಟೈಂ ಆರ್ಟ್ ಟೀಚರ್!
ಅಷ್ಟೇ ಅಲ್ದೇ, ಪೂರ್ಣಪ್ರಜ್ಞ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ರವೀಶ್ ಸದ್ಯ ಅಂಕೋಲಾದ ಪಾಯಿಂಟ್ ಔಟ್ ಡ್ಯಾನ್ಸ್ ಅಕಾಡೆಮಿ ಆರ್ಟ್ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಜಿಲ್ಲೆಯ ದಿ ಬೆಸ್ಟ್ ಲೀಫ್ ಆರ್ಟಿಸ್ಟ್ ಅನ್ನೋ ಹೆಗ್ಗಳಿಕೆಯೂ ರವೀಶ್ ಅವರದ್ದಾಗಿದೆ.
ಬಾಲ್ಯದಿಂದಲೇ ಕಲೆ ಕರಗತ!
ಒಂದನೇ ತರಗತಿಯಲ್ಲಿರಬೇಕಾದರೇ ಗಣೇಶನ ಚಿತ್ರ ಬಿಡಿಸುತ್ತಾ ತಮ್ಮ ಕಲೆಯನ್ನು ಶುರು ಮಾಡಿದ ರವೀಶ್ಗೆ ನಂತರ ಅವರ ತಾಯಿಯೇ ಚಿತ್ರಕಲೆಯ ಪಾಠ ಮಾಡಿದರು. ಜೊತೆಗೆ ಆದಿ ನಾಯ್ಕ್ ಎಂಬ ಟ್ಯಾಟೂ ಕಲಾವಿದರ ಶಿಷ್ಯನಾಗಿ ಯೂಟ್ಯೂಬ್ನಲ್ಲಿ ಪೆನ್ಸಿಲ್ ಆರ್ಟ್ ಕಲಿತು ಅಲ್ಲೂ ತನ್ನ ಚಾಕಚಕ್ಯತೆ ಮೂಡಿಸುತ್ತಾ ಬಂದಿದ್ದಾರೆ. ಇನ್ನು ಉದ್ದದ ಆಲದ ಎಲೆಗಳನ್ನು ಆರಿಸಿಕೊಂಡು, ಅದನ್ನು ಕತ್ತರಿಸುತ್ತಾ ಲೀಫ್ ಆರ್ಟ್ ಬಿಡಿಸ್ತಾರೆ. ನೋಡುಗನಿಗಂತೂ ಇದೊಂದು ಕಣ್ಕಟ್ಟಿನ ವಿದ್ಯೆಯೇ ಎನ್ನಬಹುದಾಗಿದೆ.
ಇದನ್ನೂ ಓದಿ: Uttara Kannada Viral News: ಹಲಸಿನ ಮರದಲ್ಲಿ ಕಾಯಿ ಬಿಟ್ಟ ಗೇರು ಬೀಜ!
ವಿವಿಧ ಕಲಾ ಪ್ರಕಾರದ ಪರಿಣತ
ಇನ್ನು ರವೀಶ್ ಅವರು ಸ್ಕ್ರಿಬಲ್ ಆರ್ಟ್ ಮೂಲಕ ಬಿಡಿಸಿದ ಶಿವ, ಪಂಜುರ್ಲಿ ದೈವದ ಕಾಂತಾರ ಪೋಸ್ಟರ್ ಗಂತೂ ಅಂಕೋಲಾದಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಪೆನ್ಸಿಲ್ ಸ್ಕೆಚ್, ಸ್ಕ್ರಿಬಲ್ ಆರ್ಟ್, ಕ್ಲೇ ಮಾಡೆಲಿಂಗ್, ವಾಟರ್ ಕಲರ್, ಸ್ಪೀಡ್ ಪೇಂಟಿಂಗ್, ಲೀಫ್ ಆರ್ಟ್ ಈ ಆರೂ ವಿಧದ ಡ್ರಾಯಿಂಗ್ ಅಲ್ಲಿ ಇವರು ಪರಿಣಿತರಾಗಿದ್ದಾರೆ. ಒಟ್ಟಿನಲ್ಲಿ ಲೀಫ್ ಆರ್ಟ್, ಪೆನ್ಸಿಲ್ ಆರ್ಟ್ ಹೀಗೆ ಹಲವು ಬಗೆಯ ಚಿತ್ರಕಲೆಯನ್ನು ಮೈಗೂಡಿಸಿಕೊಂಡ ರವೀಶ್ ಹರಿಕಂತ್ರ ಟ್ಯಾಲೆಂಟ್ಗೆ ಬಿಗ್ ಸೆಲ್ಯೂಟ್ ಅನ್ಲೇಬೇಕು.
ಇದನ್ನೂ ಓದಿ: Summer Business Idea: ಬಿಸಿಲಿನಿಂದ ಹಣ ಗಳಿಸುವ ಚಾಣಕ್ಯ, ಇವ್ರನ್ನ ನೋಡಿ ಕಲಿಯಬೇಕು ಕಣ್ರೀ!
ನೀವು ನಿಮ್ಮ ಮುಖದ ಲೀಫ್ ಆರ್ಟ್ ಮಾಡಿಸಿಕೊಳ್ಳುವುದಿದ್ದರೆ 82172 84024 ಈ ನಂಬರ್ ಮೂಲಕ ರವೀಶ್ ಹರಿಕಂತ್ರ ಅವರನ್ನು ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ