ನಳನಳಿಸುತ್ತಿರುವ ಹಚ್ಚ ಹಸಿರ ಗಿಡಗಳು, ನೆಲಕ್ಕೆ ಹಾಸಲಾದ ಇಂಟರ್ ಲಾಕ್. ಒಂದೆಡೆ ಕಟ್ಟಿಗೆಗಳ ರಾಶಿ. ಇನ್ನೊಂದೆಡೆ ಮೃತದೇಹಗಳಿಗೆ ನಡೆಯುತ್ತಿರೋ ಸಂಸ್ಕಾರ. ಇದು ಮನುಷ್ಯನ ಬದುಕಿಗೆ ಮುಕ್ತಿ ನೀಡೋ ಚಿರಶಾಂತಿ ಧಾಮ. ಅಂದ್ರೆ ಸ್ಮಶಾನ ಭೂಮಿ. ರುದ್ರಭೂಮಿಯೊಂದು (Cemetery) ಹೀಗೆ ಹಸಿರು ಹಸಿರಾಗಿ ಕಂಗೊಳಿಸುತ್ತಿರೋದ್ರ (Positive Story) ಹಿಂದಿದೆ ಕುತೂಹಲದ ಕಥೆ. ಯೆಸ್, ಸಾಮಾನ್ಯವಾಗಿ ಸ್ಮಶಾನ ಅಂದ್ರೆ ಕರಕಲಾದ ಶವ ಸುಡುವ ಚೇಂಬರ್, ಗೆದ್ದಲು ಹಿಡಿದ ಕಟ್ಟಿಗೆ. ಅದೆಲ್ಲಕ್ಕೂ ಜಾಸ್ತಿ ಆತಂಕದ ವಾತಾವರಣ. ಆದ್ರೆ ಉತ್ತರ ಕನ್ನಡದ (Uttara Kannada) ಶಿರಸಿಯ ವಿದ್ಯಾನಗರದ ರುದ್ರಭೂಮಿಗೆ ಬಂದ್ರೆ ನಿಮಗೆ ಅಂತಹ ಭಾವನೆ ಬರಲು ಸಾಧ್ಯವೇ ಇಲ್ಲ.
ಈ ಪಾಸಿಟಿವ್ ಸ್ಟೋರಿ ಹಿಂದೆ ಇರೋದು ಇವರೇ!
ಈ ಸ್ಮಶಾನ ಸ್ಮಶಾನವೊಂದು ಈ ರೀತಿಯಲ್ಲಿ ಬದಲಾವಣೆ ಆಗೋದ್ರ ಹಿಂದೆ ಸುಭಾಷ್ ಚಂದ್ರ ಕಾರ್ಯಪಡೆಯಿದೆ. ಕೆಲ ವರ್ಷಗಳ ಹಿಂದೆ ಕೇಶವ್ ದೊಂಬೆ ಎಂಬುವವರು ಇಲ್ಲಿ ತಮ್ಮ ಅಪ್ಪನ ನೆನಪಿಗಾಗಿ ಗಿಡವೊಂದನ್ನು ನೆಟ್ಟರಂತೆ. ಅವರ ಸ್ನೇಹಿತರೆಲ್ಲ ಈ ಕಾರ್ಯ ನಿರಂತರವಾಗಿರಲಿ ಎಂದು ಸ್ಥಳೀಯರಾದ ವೈಶಾಲಿ.ಪಿ. ಹೆಗಡೆಯವರ ಮಾರ್ಗದರ್ಶನದಲ್ಲಿ ಸುಭಾಷ್ ಚಂದ್ರ ಕಾರ್ಯಪಡೆ ಎಂಬ ಹೆಸರಿನೊಂದಿಗೆ ಸ್ಮಶಾನಕ್ಕೆ ನಿರಂತರ ಶ್ರಮದಾನ ಶುರು ಮಾಡಿದರು.
ಇದನ್ನೂ ಓದಿ: Butterfly Park: ಆಹಾ, ಇದು ಚಿಟ್ಟೆ ಪಾರ್ಕ್! ಇಲ್ಲಿದೆ ನೋಡಿ ಮನಮೋಹಕ ವಿಡಿಯೋ
ಒಬ್ಬಂಟಿಯಾಗಿ ಮಹಿಳೆ, ಮಕ್ಕಳೂ ಓಡಾಡಬಹುದು
ಈಗ ಈ ಸ್ಮಶಾನ ಒಂದು ರಂಗಮಂದಿರ, ಕುಟೀರ, ಗ್ರಂಥಾಲಯ, ವಾಕಿಂಗ್ ಪಾತ್ ಹಾಗೂ ಆಟಿಕೆಗಳನ್ನೊಳಗೊಂಡ ಜನಸ್ನೇಹಿ ಸ್ಮಶಾನವಾಗಿಬಿಟ್ಟಿದೆ. ಒಬ್ಬಂಟಿಯಾಗಿ ಮಹಿಳೆಯರು, ಮಕ್ಕಳು ಸಹ ಓಡಾಡಬಹುದಾದಷ್ಟು ಒಳ್ಳೆ ವಾತಾವರಣ ನಿರ್ಮಾಣವಾಗಿದೆ.
ಈ ಕುಟೀರಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಸುಭಾಷ್ ಚಂದ್ರ ಕಾರ್ಯಪಡೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಶವದಹನಕ್ಕೆ ಕಟ್ಟಿಗೆ, ಸಾಗಣೆಗೆ ಆಂಬುಲೆನ್ಸ್, ಅಂತಿಮ ಕ್ರಿಯೆಗಳಿಗೆ ಬೇಕಾಗುವ ಸಲಕರಣೆಗಳನ್ನೂ ಎಲ್ಲವನ್ನೂ ಉಚಿತವಾಗಿ ಒದಗಿಸುತ್ತಿದೆ. ಸ್ಮಶಾನ ಸ್ವಚ್ಛತೆ ಪ್ರತೀ ರವಿವಾರವೂ ಅಡಚಣೆಯಿಲ್ಲದೇ ಸಾಗುತ್ತಿದೆ.
ಇದನ್ನೂ ಓದಿ: Uttara Kannada: ಕುಮಟಾದಲ್ಲಿ ನಿಗೂಢ ಗುಹೆ ಪತ್ತೆ! ಗ್ರಾಮಸ್ಥರಲ್ಲಿ ಹೆಚ್ಚಾಯ್ತು ಕುತೂಹಲ
ಯಾವ ಆಸೆಯೂ ಇಲ್ಲದೇ ನಿಸ್ವಾರ್ಥ ಪ್ರಯತ್ನ
ಹದಿನೈದರಿಂದ ಇಪ್ಪತ್ತು ಜನ ಈ ತಂಡದಲ್ಲಿದ್ದು ಎಲ್ಲರೂ ಬೇರೆ ಬೇರೆ ಕೆಲಸದಲ್ಲಿದ್ದಾರೆ. ಯಾರೂ ಕೂಡ ಯಾವುದೇ ಆಸೆಯಿಲ್ಲದೇ ನಿಸ್ವಾರ್ಥವಾಗಿ ಈ ಸೇವೆ ಮಾಡುತ್ತಿದ್ದಾರೆ. ಶವವಿರುವ ಜಾಗ ಶಿವನಿರುವ ಜಾಗ ಅನ್ನೋ ಮಾತಿನಂತೆ ಸುಭಾಷ್ ಚಂದ್ರ ಕಾರ್ಯಪಡೆ ಸ್ಮಶಾನದಲ್ಲಿ ಕೈಲಾಸವನ್ನೇ ನಿರ್ಮಿಸಿಬಿಟ್ಟಿದೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ