ಶಿರಸಿ: ಈ ಮನೆ ಒಳಹೊಕ್ಕರೆ ಇದೇನು ಮನೆನಾ, ಮಂಟಪನಾ ಅನ್ನೋ ಕನ್ಫ್ಯೂಶನ್ ಆಗೋದು ಕನ್ಫರ್ಮ್. ಮನೆ ಪ್ರವೇಶ ದ್ವಾರ, ಮೇಲ್ಛಾವಣಿ ಹೀಗೆ ಮರದಿಂದ ನಿರ್ಮಿತವಾಗಿದ್ರೆ, ಅದ್ರಲ್ಲಿ ಮೂಡಿದ ಡಿಸೈನ್ ವಿಶಿಷ್ಟ ಅನುಭವ ನೀಡುತ್ತವೆ. ಮನೆಯೊಳಗಿರುವ ಕಂಬಗಳಂತೂ ಕೆತ್ತನೆಯ ಕಲಾ ಕುಸುರಿಯನ್ನ (Art Design) ಪರಿಚಯಿಸುತ್ತವೆ. ಪುರಾಣದ ಕಥೆಯನ್ನ ಹೇಳುತ್ತೆ. ಹಾಗಿದ್ರೆ ಈ ಮನೆ ಯಾರ್ದು? ಹೇಗಿದೆ ಇಲ್ಲಿನ ವಾಸ್ತುಶಿಲ್ಪ (Architecture) ಅನ್ನೋದನ್ನ ಹೇಳ್ತೀವಿ ನೋಡಿ.
ನೀವಿಲ್ಲಿ ನೋಡ್ತಿರೋ ಈ ಕಂಬಗಳಿಗೆ ಏನಿಲ್ಲ ಅಂದ್ರು ಹೆಚ್ಚು ಕಡಿಮೆ 350 ವರ್ಷಗಳಾಗಿವೆ. ಆದ್ರೂ ಇಂದಿಗೂ ಅದೇ ಗಟ್ಟಿತನ ಹೊಂದಿದೆ. ಅದರಲ್ಲೂ ಮನೆಯೊಳಗಿರುವ ಅವಳಿ ಜವಳಿ ಕಂಬಗಳಂತೂ ಪುರಾತನ ಕಾಲದ ಮನೆಯನ್ನ ನೆನಪಿಸುತ್ತವೆ.
ಶಿರಸಿಯಲ್ಲಿದೆ ಈ ವಿಶಿಷ್ಟ ಮನೆ
ಅಂದಹಾಗೆ ಈ ಮನೆ ಕಂಡು ಬರುವುದು ಉತ್ತರಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ರಸ್ತೆಯಲ್ಲಿರುವ ಯಡಳ್ಳಿಯಲ್ಲಿ. ಇದು ಬಡಗುಂಡಿಮನೆ ಅನಂತ ಹೆಗಡೆಯವರಿಗೆ ಸೇರಿದ ಮನೆಯಾಗಿದ್ದು ಇಂದಿಗೂ ಹಳೆಯ ಶೈಲಿಯಲ್ಲಿ ಹೊಳೆಯುತ್ತಿದೆ. ವಿಶೇಷ ಅಂದ್ರೆ ಆರು ತಲೆಮಾರುಗಳು ಇದೇ ಮನೆಯಲ್ಲಿ ಜೀವನ ನಡೆಸಿದ್ದಾರೆ. ಈಗ ಏಳನೇ ತಲೆಮಾರಾದ ಅನಂತ ಹೆಗಡೆ ಅವರ ಕುಟುಂಬವೂ ಇದೇ ಮನೆಯಲ್ಲಿ ಬದುಕು ಕಟ್ಟಿಕೊಂಡಿದೆ.
ನವಗುಂಜರದ ಬಗ್ಗೆ ನಿಮಗೆ ಗೊತ್ತಾ?
ಈ ಚೌಕಟ್ಟಿನ ಕೆತ್ತನೆ ನೋಡಿದರೆ ನೀವು ದಿಟ್ಟಿಸಿ ನೋಡುವುದು ಗ್ಯಾರಂಟಿ. ಕಾರಣ ಏನೆಂದರೆ, ಪ್ರವೇಶ ದ್ವಾರದ ಮೇಲ್ಭಾಗದಲ್ಲಿ ಎರಡು ಬದಿಯನ್ನ ಹೊಂದಿರುವ ಮೊಸಳೆಯಾಕಾರದ ಪ್ರಾಣಿ ಕುತೂಹಲ ಹುಟ್ಟಿಸುತ್ತವೆ. ಪಲ್ಲಕ್ಕಿ ಅಡಿಯಲ್ಲಿದ್ದಂತಿದೆ ಈ ಪ್ರಾಣಿಗಳ ಕೆತ್ತನೆ. ಇದೆಲ್ಲವನ್ನೂ ಸಂಪೂರ್ಣವಾಗಿ ಮರದ ಕಟ್ಟಿಗೆಯಲ್ಲಿಯೇ ಕೆತ್ತಲಾಗಿದೆ ಅನ್ನೋದು ವಿಶೇಷ. ಹೀಗೆ ಕಾಣಿಸುವ ಈ ಪ್ರಾಣಿಯ ಹೆಸರು ‘‘ನವಗುಂಜರ‘‘ ಅಂತಾ. ಈ ಪ್ರಾಣಿಯನ್ನ ಒಡಿಶಾದ ಸರಳದಾಸರು ರಚಿಸಿದ ಮಹಾಭಾರತದಲ್ಲಿ ವಿಶ್ವರೂಪದರ್ಶನದ ವರ್ಣನೆಯಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: Bedara Vesha: ಬೇಡರ ವೇಷ ಡಾನ್ಸ್ಗಿದೆ ರೋಚಕ ಇತಿಹಾಸ! ನೃತ್ಯ ನೋಡ್ತಿದ್ರೆ ಮೈಯೆಲ್ಲ ರೋಮಾಂಚನ
ಪುರಿ ಜಗನ್ನಾಥ ಮಂದಿರದಲ್ಲಿ ಮಾತ್ರ ಈ ರೀತಿಯ ಕೆತ್ತನೆ ಕಂಡುಬರುತ್ತದೆ. ಇನ್ನು ಕರ್ನಾಟಕದ ಹಂಪಿಯಲ್ಲಿ ಮಾತ್ರ ಕಂಡುಬರುವ ಕೆತ್ತನೆ ಇದಾಗಿದೆ. ಅದೆಲ್ಲಿಯ ಒಡಿಶಾ, ಅದೆಲ್ಲಿಯ ಕರ್ನಾಟಕದ ಯಡಳ್ಳಿ ಅಂತಾ ನೀವ್ ಈ ಕೆತ್ತನೆ ನೋಡಿದ್ರೆ ಭಾವಿಸೋದ್ರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ: Uttara Kannada: ಹೆರಿಗೆಯ ದಿನ ಬಂದ್ರೂ ಈ ಎಮ್ಮೆಗೆ ಕೆಚ್ಚಲೇ ಮೂಡಿಲ್ಲ!
ಇನ್ನು ಎದುರುಗಡೆ ಕಂಬಗಳಲ್ಲಿ ಜಂಬೆ ಕಟ್ಟಿಗೆಯಲ್ಲಿ ಕೆತ್ತಿದ ಗಿಳಿ, ಚಕ್ರ ಅಡ್ಡವಾಗಿ ಮತ್ತಿ ಕಟ್ಟಿಗೆಯಲ್ಲಿ ಕೆತ್ತಿರುವ ಅಂದದ ಅಂಕಣ ನಿಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ತೊಟ್ಟಿ ಮನೆ, ಅಡಿಕೆಯ ರೀಪುಗಳು ಇದೆಲ್ಲವೂ ಮನೆಯ ಸೊಬಗನ್ನ ಹೆಚ್ಚಿಸಿದೆ. ಹೊರಗಡೆ ಎಂತಹದ್ದೇ ವಾತಾವರಣವಿದ್ರೂ ಮನೆಯಲ್ಲಂತೂ ಸದಾ ಆಹ್ಲಾದಕರ ವಾತಾವರಣ ಇರುವುದಂತೂ ದಿಟ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ