ಕಾರವಾರ: ಕಡಲ ಮೇಲಿನ ತೇಲುವ ನಗರವನ್ನ ಯಾವತ್ತಾದ್ರು (Navy Day Special) ನೋಡಿದ್ರಾ? ನೌಕಾದಿನದ ಪ್ರಯುಕ್ತ ನಾವಿವತ್ತು ನಿಮಗೆ ತೋರಿಸ್ತೀವಿ ನೋಡಿ. ನಾವೀಗ ತೋರಿಸ್ತಿರೋ ಈ ದೃಶ್ಯದಲ್ಲಿರೋದು ಕಾರವಾರದಲ್ಲಿರುವ (INS Vikramaditya In Karwar) ಐಎನ್ಎಸ್ ವಿಕ್ರಮಾದಿತ್ಯ ನೌಕೆ. ಇದನ್ನ ಸಮುದ್ರದ ಮೇಲಿನ ತೇಲುವ ನಗರ (INS Vikramaditya) ಅಂತಲೇ ಕರೆಯಲಾಗುತ್ತೆ. ಅಷ್ಟು ವಿಶಾಲವಾಗಿದೆ ಈ ನೌಕೆ. 284 ಮೀಟರ್ ಉದ್ದ, 60 ಮೀಟರ್ ಎತ್ತರದ ಈ ನೌಕೆ, 12 ಫುಟ್ಬಾಲ್ ಸ್ಟೇಡಿಯಂನಷ್ಟು ವಿಸ್ತಾರವಿದೆಯಂತೆ. ಕೇವಲ ಇದರ ರನ್ ವೇ ಅಥವಾ ಫ್ಲೈಟ್ ಡೆಕ್ ಮೂರು ಫುಟ್ಬಾಲ್ ಸ್ಟೇಡಿಯಂಗೆ ಸರಿಸಮವಿದೆ ನೋಡಿ!
44,500 ಟನ್ ತೂಕದ ಈ ವಿಕ್ರಮಾದಿತ್ಯ ನೌಕೆಯಲ್ಲಿ 1600- 1800 ಸಿಬ್ಬಂದಿ ಕಾರ್ಯನಿರ್ವಹಿಸ್ತಾರೆ. ಒಮ್ಮೆ ಇಂಧನ ಭರ್ತಿಯಾದ್ರೆ 13,000 ಕಿ.ಮೀ. ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿರುವ ವಿಕ್ರಮಾದಿತ್ಯದಲ್ಲಿ 8 ಲಕ್ಷದ 80 ಸಾವಿರ ಅಶ್ವಶಕ್ತಿಯ ಎಂಟು ಬಾಯ್ಲರ್ಗಳಿವೆ.
30 ಯುದ್ಧವಿಮಾನ ನಿಲ್ಲುತ್ತೆ
ವಿಕ್ರಮಾದಿತ್ಯದ ಫ್ಲೈಟ್ ಡೆಕ್ ಮೇಲೆ ಸುಮಾರು 30 ಯುದ್ಧವಿಮಾನಗಳು ನಿಲ್ಲಬಹುದಾದ ವಿಸ್ತಾರ ಜಾಗವಿದೆ. 22 ಡೆಕ್ಗಳನ್ನ ಹೊಂದಿರುವ ಈ ವಿಕ್ರಮಾದಿತ್ಯದಲ್ಲಿ ಜಿಮ್, ಕಿಚನ್ ರೂಮ್ಗಳು, ಕಂಪಾರ್ಟ್ಮೆಂಟ್ಗಳು, ಎಸಿ ರೂಮ್ಗಳು ಇವೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಹೊಂದಿರುವ ಈ ನೌಕೆ, ಯುದ್ಧದ ಸಂದರ್ಭದಲ್ಲಿ ಮಹತ್ವದ ಪಾತ್ರವನ್ನ ವಹಿಸುತ್ತೆ
ಮೊದಲು ಎರಡು ಹೆಸರಿತ್ತು!
ಇನ್ನು ಇವೆಲ್ಲ ವಿಕ್ರಮಾದಿತ್ಯದ ಸಾಮರ್ಥ್ಯ, ಗಾತ್ರದ ಬಗ್ಗೆ ಆದ್ರೆ, ಇದರ ಇತಿಹಾಸವನ್ನು ಕೂಡ ತಿಳಿದುಕೊಳ್ಳೋದೂ ಅಷ್ಟೇ ಮುಖ್ಯ. ವಿಕ್ರಮಾದಿತ್ಯ ಭಾರತೀಯ ನೌಕಾಪಡೆಗೆ ಸೇರುವ ಮೊದಲು ಎರಡು ಹೆಸರುಗಳನ್ನ ಹೊಂದಿತ್ತು.
ಇದನ್ನೂ ಓದಿ: Kannada: ಕನ್ನಡ ತಾಯಿಯ ತೇರು ಹೊರಟಿತು, ಆಹಾ! ವೈಭವ ನೋಡಿ
ಮೊದಲನೆಯ ಹೆಸ್ರು ಬಾಕು ಅಂತ. ಬಾಕು, ಸೋವಿಯತ್ ನೌಕಾಪಡೆಯಲ್ಲಿ 1987ರಲ್ಲಿ ಕರ್ತವ್ಯ ಆರಂಭಿಸಿತ್ತು. ನಂತರ ರಷ್ಯಾ ನೌಕಾಪಡೆಯೊಂದಿಗೆ ವಿಲೀನವಾಗಿ ಅಡ್ಮಿರಲ್ ಗೋರ್ಶ್ಕೋವ್ ಆಗಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ 1996ರಲ್ಲಿ ನಿವೃತ್ತಿ ಪಡೆಯಿತು. ಆದರೆ 2004ರ ಭಾರತ- ರಷ್ಯಾ ಒಪ್ಪಂದದ ಪ್ರಕಾರ ರಷ್ಯಾ ಅಡ್ಮಿರಲ್ ಗೋರ್ಶ್ಕೋವನ್ನ ಭಾರತಕ್ಕೆ ನೀಡಿತು. ಅದರಂತೆ ರೀಫಿಟ್ಟಿಂಗ್ ಹಾಗೂ ರಿಪೇರಿಯ ಬಳಿಕ 2013ರ ನವೆಂಬರ್ ತಿಂಗಳಿನಲ್ಲಿ ವಿಕ್ರಮಾದಿತ್ಯ ಭಾರತೀಯ ನೌಕಾಪಡೆಗೆ ಸೇರಿ ಪುನಃ ತನ್ನ ಕಾರ್ಯಾಚರಣೆ ಆರಂಭಿಸಿತು.
ಇದನ್ನೂ ಓದಿ: Volleyball Tournament: 10 ಜಿಲ್ಲೆಗಳ 150 ಪುರುಷ, 40 ಮಹಿಳಾ ವಾಲಿಬಾಲ್ ಆಟಗಾರರ ಜಿದ್ದಾಜಿದ್ದಿ!
ಸುದೀರ್ಘ 35 ವರ್ಷಗಳ ಸೇವೆ
ಏಷ್ಯಾದ ಅತಿದೊಡ್ಡ ಯುದ್ಧವಾಹಕ ವಿಮಾನ ನೌಕೆ ಇದಾಗಿದ್ದು, ವಿಕ್ರಮಾದಿತ್ಯ ಭಾರತೀಯ ನೌಕಾಪಡೆಯ ಹೆಮ್ಮೆಯಾಗಿದೆ. ಸುದೀರ್ಘ 35 ವರ್ಷಗಳನ್ನು ನೌಕಾಪಡೆಗಳ ಕಾರ್ಯಾಚರಣೆಯಲ್ಲಿ ಕಳೆದಿರುವ ವಿಕ್ರಮಾದಿತ್ಯಕ್ಕೆ ಸರಿಸಾಟಿಯೇ ಇಲ್ಲ ನೋಡಿ.
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ