ಉತ್ತರ ಕನ್ನಡ: ಸುತ್ತಲೂ ದಟ್ಟ ಕಾಡು. ಗಿಜುಗಿಡುವ ಕೀಟ, ಹಕ್ಕಿಗಳ ರುದ್ರ ರಮಣೀಯ ತಾಣ. ಕಾನನದ ನಡುವೆ ನೆಲೆಸಿರೋದು ಆಫ್ರಿಕಾ (Africa) ಮೂಲದ ದೈವ. ಅರೇ! ಇದೇನು ದಕ್ಷಿಣ ಆಫ್ರಿಕಾದ (South Africa) ಕಾಡೇ ಅಂತಾ ಕೇಳಿದ್ರೆ ಉಹೂಂ ಅಲ್ವೇ ಅಲ್ಲ. ಹಾಗಿದ್ರೆ ದಕ್ಷಿಣ ಆಫ್ರಿಕಾದ ದೈವದ ಕರುನಾಡಿನ ಮಲೆನಾಡಿಗೆ (Malenadu) ಬಂದಿದ್ದು ಹೇಗೆ ಅನ್ನೋದೆ ಇಂಟೆರೆಸ್ಟಿಂಗ್ ಸ್ಟೋರಿ.
ಯೆಸ್, ಈ ದೈವದ ಹೆಸರು ಗುಡುಗುಡಿ ನಾಸ. ಇದ್ರ ಹೆಸ್ರೇ ಎಷ್ಟು ವಿಚಿತ್ರ ಆಗಿದೆಯಲ್ವ? ಇನ್ನು ಇದ್ರ ಆಚರಣೆಯಂತೂ ಇನ್ನೂ ವಿಶಿಷ್ಟವಾಗಿದೆ. ಅಂದಹಾಗೆ ಈ ಗುಡುಗುಡಿ ನಾಸ ದೈವ ನೆಲೆಯಾಗಿರೋದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹೆಮ್ಮಾಳಿಯಲ್ಲಿ. ಈ ಗುಡುಗುಡಿ ನಾಸ ಕಾಡಿನ ಮಧ್ಯೆ ಇದ್ದರೂ ಈತನಿಗೆ ಸಾವಿರಾರು ಭಕ್ತರು ನಾಡಿನಾದ್ಯಂತ ಇದ್ದಾರೆ.
ಗಾಂಜಾ ಹರಕೆ
ಈತನಿಗೆ ಹರಕೆ ಅರ್ಪಿಸೋದಿದ್ರೆ ಕೋಳಿ ಜೊತೆಗೊಂದಿಷ್ಟು ಗಾಂಜಾ ಅಥವಾ ತಂಬಾಕು ಇಡಬೇಕು. ಅಷ್ಟೇ ಅಲ್ದೇ, ಅಕ್ಕಿ, ಬಾಳೆಗೊನೆಯೂ ಸ್ವೀಕಾರಾರ್ಹ. ಗುಡುಗುಡಿ ನಾಸ ಆಫ್ರಿಕಾದಿಂದ ವಲಸೆ ಬಂದ ವ್ಯಕ್ತಿಗಳಲ್ಲಿ ಒಬ್ಬ. ಆತನು ಪರಾಕ್ರಮಿಯೂ, ಶೂರನೂ, ಊರಿನ ರಕ್ಷಕನೂ ಆಗಿದ್ದನಂತೆ. ರಾಜಾಳ್ವಿಕೆಯಲ್ಲಿ ಬಂಟನಾಗಿ ಸುತ್ತಲಿನ ಊರನ್ನು ರಕ್ಷಿಸಿದವನು ಈಗ ಜನಪ್ರಿಯ ದೈವವಾಗಿ ಬದಲಾಗಿದ್ದಾನೆ.
ನಾಸನ ಪಾಡ್ದನ
ಗುಡುಗುಡಿ ನಾಸನ ಬಗ್ಗೆ ದಟ್ಟ ಕಾನನಗಳಲ್ಲಿ ವಾಸಿಸುವ ಸಿದ್ಧಿಗಳು ಪಾಡ್ದನದ ರೀತಿಯ ಜನಪದ ಕೊಂಕಣಿ ಹಾಡನ್ನ ಹೊಂದಿದ್ಧಾರೆ. ಅವನಿಗೆ ಗುಡುಗುಡಿ ಇಷ್ಟದ ಪದಾರ್ಥವಾಗಿತ್ತಂತೆ. ಆದ್ದರಿಂದ ತಂಬಾಕು ಹೊಗೆಸೊಪ್ಪನ್ನು ಈ ದೈವಕ್ಕೆ ಅರ್ಪಿಸುತ್ತಾ ಬಂದಿದ್ದಾರೆ.
ಉಗ್ರ ಸ್ವರೂಪದ ದೈವ
ಈ ದೈವದ ಮೂರ್ತಿಯು ಕೈ ಮುಗಿಯುವ ಭಂಗಿಯಲ್ಲಿದ್ದು, ಜೊತೆಗೆ ಕೋರೆಹಲ್ಲು, ನಿಗ್ರೋ ಸಮುದಾಯದ ವ್ಯಕ್ತಿತ್ವವನ್ನು ಹೋಲುವ ಮುಖದ ರಚನೆ, ಮೀಸೆ, ಹೊರಚಾಚಿದ ನಾಲಿಗೆ ಹಾಗೂ ಶಲ್ಯ, ಪಂಚೆ ಮತ್ತು ಖಡ್ಗಗಳನ್ನು ಹೊಂದಿವೆ. ಹಾಗಾಗಿ ಇದು ಉಗ್ರ ಸ್ವರೂಪದ ದೈವ ಎನ್ನುವುದನ್ನ ಭಕ್ತರು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: Children Swimming: ಈ ಹಳ್ಳಿ ಮಕ್ಕಳು ಹೇಗೆ ಈಜ್ತಾರೆ ನೋಡಿ, ಮಜಾ ಅಂದ್ರೆ ಇದು ಕಣ್ರೀ!
ಎಲ್ಲಿದೆ ಈ ದೈವ?
ಯಲ್ಲಾಪುರದಿಂದ ಕೈಗಾಗೆ ಸಾಗುವ ದಾರಿಯಲ್ಲಿ ತೇಲಂಗಾರ, ವಜ್ರಳ್ಳಿ ಎಲ್ಲಾ ದಾಟಿದ ಮೇಲೆ ಘಟ್ಟ ಹತ್ತುವ ದಾರಿಯಿದೆ. ಅಲ್ಲಿ ಚಿಕ್ಕಪುಟ್ಟ ಹಳ್ಳಿಗಳಿವೆ. ಅಂತಹ ಹಳ್ಳಿಗಳಲ್ಲಿ ಅರಬೈಲಿನ ಘಟ್ಟದ ಬುಡದ ಊರು ಹೆಮ್ಮಾಳಿ. ಈ ಊರಿಗೆ ಒಬ್ಬರೇ ಹೋಗಲಿಕ್ಕಾಗುವುದಿಲ್ಲ ಖಾಸಗಿ ವಾಹನ ಬೇಕೇ ಬೇಕು.
ಆಲಯವಿಲ್ಲದ ಮೂರ್ತಿ
ಇನ್ನು ಸಾಹಸ ಮತ್ತು ಇತಿಹಾಸ ನಿಮ್ಮಿಷ್ಟದ ವಿಷಯಗಳಾಗಿದ್ದರೆ ಈ ದಟ್ಟಾರಣ್ಯವನ್ನು ಸುತ್ತಬಹುದು. ಮೇಲ್ನೋಟಕ್ಕೆ ಆಂಜನೇಯನ ಮೂರ್ತಿಯ ರೀತಿ ಕಂಡರೂ ವಿಜಯನಗರ ಕಾಲದ ಶಿಲ್ಪಕಲೆಯನ್ನು ನೆನಪಿಸುವ ಈ ಮೂರ್ತಿ ಸುಮಾರು 500 ವರ್ಷದಿಂದ ಈ ಕಾಡಲ್ಲಿ ಗುಡಿಯಿಲ್ಲದೇ ಬಿಸಿಲು, ಸಿಡಿಲು, ಮಳೆ, ಚಳಿ, ಗಾಳಿಗೆ ಮೈಯೊಡ್ಡಿ ನಿಂತಿದೆ.
ಇದನ್ನೂ ಓದಿ: Ankola: ಇವ್ರೇ ರಿಯಲ್ ಹೀರೋ! ಹಾಲಕ್ಕಿ ಮಹಿಳೆಯನ್ನು ಹೊಗಳಿದ ಆನಂದ್ ಮಹಿಂದ್ರಾ
ಒಟ್ಟಿನಲ್ಲಿ ಗುಡುಗುಡಿ ನಾಸನು ಕಾಡಿನ ಮಧ್ಯೆ ಇದ್ದು ಜನರನ್ನು ರಕ್ಷಿಸುತ್ತಿದ್ದಾನೆ ಅನ್ನೋದು ಜನರ ನಂಬಿಕೆಯಾಗಿದೆ. ಅದೇನೇ ಇರ್ಲಿ ತುಳುನಾಡಿನ ದೈವಗಳಂತೆ ದಕ್ಷಿಣ ಆಫ್ರಿಕಾದ ದೈವ ನೆಲೆಯಾಗಿರುವುದು ಕೌತುಕವೇ ಸರಿ.
ವರದಿ: ಎ.ಬಿ. ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ