ಉತ್ತರ ಕನ್ನಡ: ಉಧೋ, ಉಧೋ ಎನ್ನುವ ಉದ್ಘೋಷ. ತೇರ ಮಂಟಪದಲ್ಲಿ ಸಾಗಿ ಬರುತ್ತಿರುವ ತಾಯಿ ಮಾರಿಕಾಂಬೆ. ಚೆಂಡೆ, ಡೋಲು, ಬೊಂಬೆ, ಬಗೆ ಬಗೆಯ ವೇಷ, ಕುಣಿತಗಳು ಇಡೀ ಉತ್ಸವಕ್ಕೆ ತುಂಬಿತ್ತು ರಂಗು. ಹಾಗಿದ್ರೆ ಮುಂಡಗೋಡಿನ (Mundgod Jatre) ಮಾರಿಕಾಂಬೆಯ ಜಾತ್ರಾ (Mundgod Marikamba Jatra) ಮಹೋತ್ಸವದ ಆ ಕ್ಷಣಗಳು ಹೇಗಿತ್ತು ಅನ್ನೋದನ್ನ ನೀವೇ ನೋಡಿ.
ಮೂರು ವರ್ಷಕ್ಕೊಮ್ಮೆ ನಡೆಯುವ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳೂರಿನ ಮಾರಿಕಾಂಬಾ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಜಾತ್ರೆಯು ಹತ್ತೂರಿನ ಜನರನ್ನು ಒಗ್ಗೂಡಿಸಿದ್ದಲ್ಲದೇ ಕೊರೊನಾ ನಂತರದ ಪ್ರಥಮ ಜಾತ್ರಾ ಸಂಭ್ರಮವಾದ್ದರಿಂದ ಊರ ಜನರಿಗೆ ಉತ್ಸಾಹದ ಬುಗ್ಗೆಯನ್ನು ತುಂಬಿದೆ.
2006ರಿಂದ ಪ್ರಾರಂಭ
ಹಳೂರಿನ ಮಾರಿಕಾಂಬಾ ದೇವಿ ಜಾತ್ರೆ ಜಿಲ್ಲೆಯ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದೆ. 2006 ರಿಂದ ಶುರುವಾಗಿ ಈ ವರ್ಷ 6ನೇ ಬಾರಿ ಜಾತ್ರೆ ನಡೆಯುತ್ತಿದ್ದು ಅಪಾರ ಸಂಖ್ಯೆಯ ಭಕ್ತರ ಆಗಮನಕ್ಕೆ ಸಾಕ್ಷಿಯೂ ಆಯಿತು.
ದೇವರ ಮೂರ್ತಿಯ ವೈಭವದ ಮೆರವಣಿಗೆ
ಹಳೂರಿನ ಮಾರಿಕಾಂಬಾ ದೇವಾಲಯದಿಂದ ಚೌತಮನೆ ಎಂದು ಕರೆಯುವ ಜಾತ್ರಾ ಗದ್ದುಗೆಗೆ ಒಂದು ಕಿಲೋಮೀಟರ್ ಇದ್ದು, ಅಲ್ಲಿವರೆಗೂ ದೇವರ ಮೂರ್ತಿಯ ಮೆರವಣಿಗೆ ಮಾಡಿ ಪ್ರತಿಷ್ಠಾಪಿಸಲಾಯಿತು. ನಂತರ ಒಂಬತ್ತು ದಿನಗಳ ಉಡಿ ತುಂಬುವ ಕಾರ್ಯಕ್ರಮ, ಹಣ್ಣುಕಾಯಿ ಸೇವೆ, ಕುಂಕುಮಾರ್ಚನೆ ಸೇರಿದಂತೆ ಹಲವು ವಿಧಿವಿಧಾನಗಳು ಜರುಗಲಿದೆ.
ನಾನಾ ಗಣ್ಯರು ಬಂದು ದೇವಿಯ ದರ್ಶನ ಪಡೆಯುತ್ತಾರೆ.
ಜಾತ್ರೆಯಲ್ಲಿ ವಿವಿಧ ಬಗೆಯ ಸಂಭ್ರಮ, ಊರಿಡೀ ವ್ಯಾಪಾರ ವಹಿವಾಟುಗಳು ಜೋರಾಗಿರುತ್ತವೆ. ಬೇರೆ ಬೇರೆ ಊರಿಂದ ತವರಿಗೆ ಮರಳಿದವರು ತಾಯಿಯ ಆಶೀರ್ವಾದ ಪಡೆಯುತ್ತಾರೆ.
ಇದನ್ನೂ ಓದಿ: Uttara Kannada: ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ!
ನಾಲ್ಕು ಗ್ರಾಮದೇವಿಯರು ಅಕ್ಕ ತಂಗಿಯರು!
ಮುಂಡಗೋಡ, ಶಿರಸಿ, ಯಲ್ಲಾಪುರ ಈ ಮೂರು ಸೀಮೆಗಳ ನಾಲ್ಕು ಗ್ರಾಮದೇವಿಯರನ್ನು ಸಹೋದರಿಯರು ಎಂದು ಕರೆಯುತ್ತಾರೆ. ಶಿರಸಿಯ ಮಾರಿಕಾಂಬೆ ದೊಡ್ಡಮ್ಮ. ಅವಳ ತಂಗಿಯರು ಯಲ್ಲಾಪುರದ ದುರ್ಗೆ, ಕಾಳಿಕಾಂಬಾ ಹಾಗೂ ಮುಂಡಗೋಡಿನ ಮಾರಿಕಾಂಬೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಜಾತ್ರೆಗೆ ಮಹತ್ವವಿದೆ.
ಇದನ್ನೂ ಓದಿ: Uttara Kannada: ತಾಳೆ ಮರದಿಂದ ತುಂಬಿ ಹೋದ ವರದಾ ದಂಡೆ! ಬಂಡವಾಳದ 3 ಪಟ್ಟು ಲಾಭ ಗಳಿಸಿದ ಬನವಾಸಿ ಕೃಷಿಕರು
ಜಾಗೃತ ದೇವಿಯಾದ ಮಾರಿಕಾಂಬೆಯ ಜಾತ್ರೆ ಊರಿನ ಜನರಲ್ಲಿ ಒಗ್ಗಟನ್ನೂ ಹಾಗೂ ಭಕ್ತಿಭಾವವನ್ನೂ ತಂದುಕೊಡುವ ಅಪೂರ್ವವಾದ ಕ್ಷಣವಾಗಿದೆ. ಮಾರಿಕಾಂಬೆಯು ಎಲ್ಲಾ ಗಡಿ ಮೀರಿದ ಅಧಿದೇವತೆ ಅನ್ನೋ ನಂಬಿಕೆಯಿದ್ದು, ನಾಡಿನಾದ್ಯಂತ ಇರುವ ಮಾರಿಕಾಂಬೆ ಭಕ್ತರು ಇದಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ