ಕೊಕೋಕೋಲಾ ಬರೀ ಕೋಲ್ಡ್ ಡ್ರಿಂಕ್ಸ್ ಮಾರಲ್ಲ, ನಿಮ್ಮೂರಿಗೆ ನೀರನ್ನೂ ಕೊಡುತ್ತೆ. ಅಜೀಂ ಪ್ರೇಂಜೀ ಸಂಸ್ಥೆ ನಿಮ್ಮ ಹೊಲದಲ್ಲಿ ಕೃಷಿ ಹೊಂಡ (Lake) ಮಾಡಿಕೊಡುತ್ತೆ. ಹೆಚ್ಡಿಎಫ್ಸಿ ಬ್ಯಾಂಕ್ ಬರೀ ಹಣ ಮಾತ್ರ ನೀಡೋದಲ್ಲ, ನಿಮ್ಮೂರಿನ ಕೆರೆಗಳನ್ನು ಹೂಳೆತ್ತಿ ಸರಿ ಮಾಡುತ್ತೆ. ಅರೆ! ಇದೇನ್ ಹೇಳ್ತಿದ್ದಾರಿವ್ರು ಅಂದ್ಕೊಂಡ್ರಾ? ಉತ್ತರ ಕನ್ನಡದ ಹಲವು ಗ್ರಾಮಗಳಲ್ಲಿ ಮಲ್ಟಿನ್ಯಾಷನಲ್ ಕಂಪೆನಿಗಳ (Multi National Companies) ಬೋರ್ಡ್ ಕಾಣಿಸ್ತಿದೆ! ಈ ಬೋರ್ಡ್ಗಳ ಹಿಂದಿರೋದು ಮಾತ್ರ ಅಪ್ಪಟ ಉತ್ತರ ಕನ್ನಡದ್ದೇ (Uttara Kannada) ಒಂದು ಸಂಸ್ಥೆ.
ಯೆಸ್, ಉತ್ತರ ಕನ್ನಡದಲ್ಲಿ ಹಳ್ಳಿಗಳಲ್ಲಿ ತುಂಬಿಕೊಂಡ ಕೃಷಿ ಹೊಂಡ, ಹೂಳೆತ್ತಿಕೊಂಡು ಭರ್ತಿಯಾಗಿರೋ ಕೆರೆ ಇವೆಲ್ಲವೂ ಮನುವಿಕಾಸ ಸಂಸ್ಥೆಯ ನೇತೃತ್ವದಲ್ಲಿ ನಡೆದ ಮಹತ್ವದ ಯೋಜನೆ. ಆದರೆ, ಇದೆಲ್ಲಕ್ಕೂ ಧನ ಸಹಾಯವನ್ನ ಹಲವು ದೊಡ್ಡ ಕಂಪೆನಿಗಳು ಒದಗಿಸಿದೆ. ಇದುವರೆಗೂ ಮನುವಿಕಾಸ ಸಂಸ್ಥೆಯಿಂದ 180 ಕ್ಕೂ ಹೆಚ್ಚು ಕೆರೆಗಳು ನೀರು ಕಂಡಿವೆ. 25,000 ಎಕರೆಗೂ ಮೀರಿ ಈ ಸರ್ಕಾರೇತರ ಸಂಸ್ಥೆ ನೀರಾವರಿ ಸೌಲಭ್ಯವನ್ನು ಒದಗಿಸಿದೆ. 3000 ಕೃಷಿಹೊಂಡಗಳನ್ನು ನಿರ್ಮಿಸಿ ರೈತರ ಬದುಕನ್ನು ಹಸನಾಗಿಸಿದೆ.
ನಿರಂತರ 20 ವರ್ಷಗಳಿಂದ ಸಮಾಜಸೇವೆ
ಮನುವಿಕಾಸ ಸಂಸ್ಥೆ ಸಿದ್ದಾಪುರದ ಗಣಪತಿ ಭಟ್ಟರ ಕನಸಿನ ಕೂಸು. ಅವರು ಅಡಿಗಲ್ಲು ಹಾಕಿ ಈಗ ಕಾಯ್ಧುಕೊಂಡು ಬಂದಿರುವ ಈ ಸಂಸ್ಥೆಯಿಂದ ನಿರಂತರ 20 ವರ್ಷಗಳಿಂದ ಸಮಾಜಮುಖಿ ಸೇವೆ ನಡೆಯುತ್ತಾ ಬಂದಿದೆ.
ಇದನ್ನೂ ಓದಿ: Scuba Diving: ಸ್ಕೂಬಾ ಡೈವಿಂಗ್ ಅನುಭವ ಹೀಗಿರುತ್ತೆ! ನೇತ್ರಾಣಿ ದ್ವೀಪದ ಗಮ್ಮತ್ತು ನೋಡಿ
ಹಾವೇರಿ, ಶಿವಮೊಗ್ಗ, ಉಡುಪಿ, ಧಾರವಾಡಕ್ಕೂ ವಿಸ್ತರಣೆ
ಮನುವಿಕಾಸ ಸಂಸ್ಥೆ ಬಹುರಾಷ್ಟ್ರೀಯ ಕಂಪೆನಿಗಳ ಗಮನ ಸೆಳೆದು ಅವರ ಸಹಭಾಗಿತ್ವದಲ್ಲಿ ಊರೂರಿಗೆ ನೀರು ಒದಗಿಸೋ ಪುಣ್ಯದ ಕೆಲಸ ಮಾಡುತ್ತಿದೆ. ಸಿದ್ದಾಪುರದ ಕರ್ಜಗಿಯಲ್ಲಿ ಶುರುವಾದ ಈ ಸಂಸ್ಥೆ ಸುತ್ತಮುತ್ತಲಿನ ಜಿಲ್ಲೆಗಳಾದ ಹಾವೇರಿ, ಶಿವಮೊಗ್ಗ, ಉಡುಪಿ, ಧಾರವಾಡಕ್ಕೂ ತನ್ನ ಕಾರ್ಯ ವಿಸ್ತರಿಸಿದೆ. 12,000ಕ್ಕೂ ಹೆಚ್ಚು ಬರಗಾಲ ಪ್ರದೇಶದ ರೈತರು ಮನುವಿಕಾಸ ಸಂಸ್ಥೆಯನ್ನು ಆಧರಿಸಿಕೊಂಡು ಕೃಷಿ ಮಾಡುತ್ತಿದ್ದಾರೆ.
ಇದನ್ನೂ ಓದಿ: Positive Story: ಜಗತ್ತಿನಲ್ಲಿ ಶಾಂತಿ ನೆಲೆಸೋಕೆ 8ನೇ ಕ್ಲಾಸ್ ಬಾಲಕಿಯ ಯಕ್ಷ ಪ್ರಯತ್ನ!
ಜೀವಜಲವನ್ನು ಕಾಯ್ದುಕೊಳ್ಳುವ, ಪುನರ್ಬಳಕೆ ಸೇರಿದಂತೆ ನೀರಿನ ಅಧ್ಯಯನ ಹಾಗೂ ಬಳಕೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಮನುವಿಕಾಸ ಸಂಸ್ಥೆಯು ಕಾರ್ಯನಿರ್ವಹಿಸ್ತಿದೆ. ಸೋತು ಕೂತ ಅದೆಷ್ಟೋ ಬಡ ರೈತರಿಗೆ ಹೆಗಲಾಗಿ ಈ ಸಂಸ್ಥೆ ನಿಂತಿದೆ. ಇವರ ಈ ಸೇವೆಯಲ್ಲಿ ತಮ್ಮದೂ ಒಂದು ಪಾಲಿರಲಿ ಅಂತಾ ದೊಡ್ಡ ದೊಡ್ಡ ಕಂಪೆನಿಗಳು ನೆರವು ನೀಡುತ್ತಿರುವುದು ಶ್ಲಾಘನೀಯ ವಿಚಾರವೇ ಸರಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ