ಉತ್ತರ ಕನ್ನಡ: ವಿಶಿಷ್ಟ ಶೈಲಿಯ ಕೆತ್ತನೆ, ಪುರಾತನ ಕಟ್ಟಡ, ಶಿವನ ಜೊತೆಗಿದ್ದು ಕ್ಷೇತ್ರಕ್ಕೆ ಸ್ವಾಗತಿಸೋ ಹನುಮಂತ. ಹೌದು, ಇದು ರಾಮೇಶ್ವರ ದೇಗುಲದ ದೃಶ್ಯ. ಅರೇ! ತಮಿಳುನಾಡಿನ ರಾಮೇಶ್ವರ (Rameshwara Temple) ಹೀಗಿದ್ಯಾ ಅಂತಾ ಕೇಳ್ತೀರ? ಖಂಡಿತಾ ಅಲ್ಲ, ಇದು ನಮ್ಮದೇ ಕರುನಾಡಿನಲ್ಲಿರೋ ರಾಮೇಶ್ವರ ದೇಗುಲ. ಹಾಗಿದ್ರೆ ಈ ಈಶ್ವರ ದೇಗುಲ (Itagi Rameshwara Temple) ಎಲ್ಲಿದೆ? ಶಿವರಾತ್ರಿ (Maha Shivaratri 2023) ಸಮಯದಲ್ಲಿ ಈ ರಾಮೇಶ್ವರ ದೇಗುಲದ (Rameshwara Temple Of Karnataka) ಬಗ್ಗೆನೂ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.
ಇದು ಕರುನಾಡ ರಾಮೇಶ್ವರ!
ಹೌದು, ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಇರುವ ಈ ರಾಮೇಶ್ವರ ದೇಗುಲ. ಇಲ್ಲಿರೋ ಈಶ್ವರನನ್ನು ‘‘ಮಾತನಾಡುವ ರಾಮೇಶ್ವರ"ನೆಂದೇ ಕರೆಯುತ್ತಾರೆ. ಭಕ್ತರ ಪ್ರತಿ ಮಾತನ್ನೂ ಆಲಿಸುವ ಪುಷ್ಪ ಪ್ರಸಾದ ಕೊಡುವ ತ್ರಿಕಾಲ ಬಲಿ ಸ್ವೀಕರಿಸುವ ಗಣಗಳವುಳ್ಳ ಈಶ್ವರ ಇಲ್ಲಿ ನೆಲೆಸಿ ಭಕ್ತರನ್ನು ಕಾಯುತ್ತಿದ್ದಾನೆ.
ರಾಜರ ಕಾಲದ ಮುಖ್ಯ ದೇಗುಲ
ಇಟಗಿ ಒಂದು ಪುಟ್ಟ ಗ್ರಾಮ ಇಷ್ಟಿಕಾಪುರ ಇದರ ಮೂಲ ಹೆಸರು ಇಷ್ಟಿಕಾ ಎಂದರೆ ಇಟ್ಟಿಗೆ ಯಾಗಗಳಿಗೆ ಹಾಗೂ ತಾಂತ್ರಿಕ ಕ್ರಿಯೆಗಳಿಗೆ ಪ್ರಸಿದ್ಧವಾದ ಈ ಕ್ಷೇತ್ರ ಬೀಳಗಿ ಅರಸರ ರಾಜಧಾನಿಯೂ ಕದಂಬರ ಪ್ರಮುಖ ಪಟ್ಟಣವೂ ಆಗಿತ್ತು. ಇಲ್ಲಿ ಶ್ರೀರಾಮಚಂದ್ರನೇ ಪ್ರತಿಷ್ಠಾಪಿಸಿದ ಎಂದು ಹೇಳಲ್ಪಡುವ ಪುರಾತನ ಶಿವಲಿಂಗವಿದೆ. ಕದಂಬರು, ವಿಜಯನಗರ ಅರಸರು, ಬೀಳಗಿ ಅರಸರು ಮೂರು ಅರಸರ ಕಾಲದಲ್ಲೂ ಈ ದೇಗುಲ ಸಾಕಷ್ಟು ಪ್ರಾಮುಖ್ಯತೆ ಪಡೆದಿತ್ತು.
ಇಲ್ಲಿವೆ ಲಜ್ಜಾಗೌರಿ, ಮಿಥುನ ಶಿಲ್ಪಗಳು!
ಈ ದೇವಾಲಯದ ಸುತ್ತಲೂ ಲಜ್ಜಾಗೌರಿ, ಮಿಥುನ ಶಿಲ್ಪಗಳು ಇರುವುದು ವಿಶೇಷ. ಅದರಲ್ಲೂ ಈ ದೇಗುಲದ ಮೇಲೆ ಆಂಜನೇಯನ ಮೂರ್ತಿ ಇರೋದು ಅಚ್ಚರಿ ಹುಟ್ಟಿಸುತ್ತೆ. ಇನ್ನು ಡ್ರ್ಯಾಗನ್ ಹೋಲುವ ಕಲ್ಲಿನ ರಚನೆಗಳು ಒಂದು ಸಲ ಅಚ್ಚರಿ ಮೂಡಿಸುತ್ತವೆ. ಸಾವಿರ ವರ್ಷ ಹಳೆಯ ಈ ದೇಗುಲ ಇತಿಹಾಸ ಸಾರುತ್ತೆ.
ಇದನ್ನೂ ಓದಿ: Uttara Kannada: ಜೇನು ಮೇಣದಿಂದ ಪೇಪರ್ ತಯಾರಿ! ಯಲ್ಲಾಪುರದ ಕೃಷಿಕರ ವಿಶಿಷ್ಟ ಬ್ಯುಸಿನೆಸ್
ಮಾತನಾಡುವ ರಾಮೇಶ್ವರ!
ರಾಮೇಶ್ವರ ಭಕ್ತರ ಜೊತೆ ಮಾತಾಡುತ್ತಾನೆ ಎಂಬ ಪ್ರತೀತಿಯಿದೆ. ಯಾರಾದರೂ ಏನಾದರೂ ಬೇಡಿಕೊಂಡಾಗ ಹೂ ಬೀಳಿಸುವ ಮೂಲಕ ಮಾರ್ಗ ತೋರಿಸಿಕೊಡುವುದು ಅದಕ್ಕೆ ಸಾಕ್ಷಿಯಂತೆ. ಅಲ್ಲದೇ ಇಲ್ಲಿ ಶಿವಗಣಗಳಿಗೆ ನಿತ್ಯ ತ್ರಿಕಾಲ ಬಲಿ ನಡೆಯುತ್ತದೆ. ಆಗ ಪಂಚವಾದ್ಯದೊಂದಿಗೆ ಬಿಲ್ವಾರ್ಚನೆ ಹಾಗೂ ಹೊರಗಿರುವ ಗಣಕ್ಕೆ ಭತ್ತವನ್ನು ಅರ್ಪಿಸಲಾಗುತ್ತದೆ.
ಇದನ್ನೂ ಓದಿ: ಶಿರಸಿಯಲ್ಲಿ IT ಕಂಪನಿ ಸ್ಥಾಪನೆ! ಮಲೆನಾಡು, ಕರಾವಳಿಯ ಪ್ರತಿಭೆಗಳಿಗೆ ಹೊಸ ಅವಕಾಶ
ಇನ್ನು ಮಹಾಶಿವರಾತ್ರಿ, ಫಾಲ್ಗುಣ ನವಮಿ, ದಶಮಿಗೆ ವಿಶೇಷ ರಥೋತ್ಸವ ನಡೆಯುವುದರೊಂದಿಗೆ ಸಾವಿರಾರು ಭಕ್ತರ ಸಾನಿಧ್ಯಕ್ಕೆ ಸಾಕ್ಷಿಯಾಗುತ್ತದೆ. ಹೀಗೆ ಹಲವು ವೈಶಿಷ್ಟ್ಯದ ದೇಗುಲವಾದ ರಾಮೇಶ್ವರವು ಅತ್ಯಂತ ಪುರಾತನ ಹಾಗೂ ಅತ್ಯಂತ ಕಾರಣಿಕ ಕ್ಷೇತ್ರವೆಂದೇ ಹೆಸರಾಗಿದೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ