ಉತ್ತರ ಕನ್ನಡ: ಮನೆ ಮನೆಯಲ್ಲೂ ಗಣಪತಿ, ವಿಘ್ನ ವಿನಾಯಕನಿಗೆ ಇಷ್ಟವಾಗೋ ನೈವೇದ್ಯ, ಸಂಭ್ರಮದಿಂದ ನಡೆಯಿತು ನೋಡಿ ಪೂಜೆ ಪುನಸ್ಕಾರ. ಅರೆ, ಗಣಪತಿಗೆ ಈಗ್ಯಾವ ಹಬ್ಬ ಅಂತೀರಾ? ನಿಜ, ಗಣೇಶ ಚತುರ್ಥಿ ಮುಗಿದು ತಿಂಗಳುಗಳೇ ಕಳೆದವು. ಹಾಗಿದ್ರೆ ಏನಿದು ಆಚರಣೆ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮಾಘ ಚೌತಿ ಸಂಭ್ರಮ
ಹೌದು, ಕರಾವಳಿ ಭಾಗದಲ್ಲಿ ಚೌತಿ ಹಬ್ಬದಂತೆ ಗಣಪತಿಗೆ ಪೂಜೆ ಮಾಡುವ ಪದ್ಧತಿ ಮಾಘ ಚೌತಿಯಲ್ಲೂ ಇದೆ. ಹಾಗಾಗಿ ಉತ್ತರ ಕನ್ನಡದ ಕಾರವಾರದ ಕೆಲ ಮನೆಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜಿಸಲಾಗುತ್ತೆ. ವಿಶೇಷವಾಗಿ ಮನೆಗಳಲ್ಲಿ ಮನೆ ಮಂದಿ, ಕುಟುಂಬಿಕರು, ನೆರೆಹೊರೆಯವರೆಲ್ಲ ಸೇರಿ ಹಬ್ಬವನ್ನು ಸಂಭ್ರಮಿಸಿದರು. ಮನೆಯ ಯಜಮಾನ, ಯಜಮಾನಿ ಮುಂದೆ ನಿಂತು ಪೂಜೆ ಸಲ್ಲಿಸಿದ್ರೆ, ಮಹಿಳೆಯರು ಭಕ್ತಿಗೀತೆ ಮೂಲಕ ದೇವರ ಸಂಪ್ರೀತಿ ಪಡೆಯುವರು.
ಗಣೇಶ ಚತುರ್ಥಿಗಿಂತ ಕಮ್ಮಿಯಿಲ್ಲ!
ಗಣೇಶ ಚತುರ್ಥಿ ಹಬ್ಬದಂತೆಯೇ ಹಲವು ವಿಧದ ನೈವೇದ್ಯವನ್ನು ವಿಘ್ನ ವಿನಾಯಕನಿಗೆ ಅರ್ಪಿಸಲಾಯಿತು. ಸಾರ್ವಜನಿಕ ಪ್ರದೇಶಗಳಲ್ಲೂ ಗಣೇಶ ಪ್ರತಿಷ್ಠಾಪಿಸಿ ಪೂಜಿಸಲ್ಪಟ್ಟರೆ, ಮನೆಯಲ್ಲಿ ಪ್ರತಿಷ್ಠಾಪಿಸುವವರಂತೂ ಇಡೀ ಮನೆಯನ್ನ ತಳಿರು ತೋರಣಗಳಿಂದ ಅಲಂಕರಿಸಿ ಕಂಗೊಳಿಸುವಂತೆ ಮಾಡಿದರು. ಜೊತೆಗೆ, ಗಣಪತಿಗೆ ಪ್ರಿಯವಾದ ತಿನಿಸುಗಳ ಜೊತೆಗೆ ಅಲಂಕಾರ ಭೂಷಿತನನ್ನಾಗಿಸಿ ಆರಾಧಿಸಿದರು.
ಒಂದು ದಿನವಷ್ಟೇ ಪ್ರತಿಷ್ಠಾಪನೆ
ಮಾಘ ಮಾಸದಲ್ಲಿ ಬರುವ ಮಾಘ ಚೌತಿಯನ್ನು ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ಆಚರಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಹೀಗೆ ಆರಾಧಿಸುವವರು ಕೇವಲ ಒಂದು ದಿನವಷ್ಟೇ ಗಣಪತಿಯನ್ನ ಪ್ರತಿಷ್ಠಾಪಿಸಿ ಆರಾಧಿಸುವರು. ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚತುರ್ಥಿ ವೇಳೆ ಸೂತಕ, ಇಲ್ಲವೇ ಇನ್ಯಾವುದೋ ಕಾರಣದಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗದವರು, ಹರಕೆ ಹೊತ್ತವರು ಗಣೇಶ ಹುಟ್ಟಿದ ದಿನವಾದ ಮಾಘ ಮಾಸ ಚತುರ್ಥಿಯಲ್ಲಿ ಗಣೇಶನನ್ನು ತಂದು ಪೂಜಿಸುತ್ತಾರೆ.
ನೆರೆ ರಾಜ್ಯದ ಪ್ರಭಾವ
ಇನ್ನು ಮಾಘ ಚತುರ್ಥಿಯ ಆಚರಣೆ ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿರುವುದರಿಂದ ಪಕ್ಕದ ರಾಜ್ಯವಾದ ಉತ್ತರ ಕನ್ನಡದ ಕಾರವಾರದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಆಚರಣೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕಾರವಾರದ ಕೆಲ ಮನೆಗಳಲ್ಲಿ ಭಾದ್ರಪದ ಚೌತಿಯಂತೆ ಮಾಘ ಮಾಸದ ಚೌತಿಯನ್ನೂ ಅದ್ಧೂರಿಯಾಗಿ ಆಚರಿಸಲಾಯಿತು. ಪ್ರಥಮ ಪೂಜಿತನಿಗೆ ವಿಶೇಷ ಪೂಜೆ ಪುನಸ್ಕಾರ ನಡೆಸಿ ಮನೆ ಮಂದಿಯೂ ಪುನೀತರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ