ಉತ್ತರ ಕನ್ನಡ: ಒಂದು ಕಡೆ ಸಾಂಪ್ರದಾಯಿಕ ಉಡುಗೆ ತೊಟ್ಟು ನಿಂತಿರೋ ಯುವ ಜೋಡಿ. ಇನ್ನೊಂದೆಡೆ ಕ್ರೀಡಾಂಗಣದಲ್ಲಿ ಹಗ್ಗಜಗ್ಗಾಟ ಆಡ್ತಿರೋ ತರುಣ ಪಡೆ. ಹೀಗೆ ಮೋಜು ಮಸ್ತಿಯ ನಡುವೆ ಟಿಬೆಟಿಯನ್ನರ ಸಂಭ್ರಮ! ತಾಯ್ನಾಡು ಬಿಟ್ಟು ಬಂದು ಭಾರತದಲ್ಲಿ ಜೀವನ ಕಟ್ಟಿಕೊಂಡಿರುವ ಟಿಬೇಟಿಯನ್ನರ ಈ ಆಚರಣೆಯಾದ್ರೂ ಏನು? ಅನ್ನೋ ಕುತೂಹಲವನ್ನು ನಾವು ತಣಿಸ್ತೀವಿ ನೋಡಿ.
ಟಿಬೇಟಿಯನ್ನರ ಹೊಸ ವರ್ಷ
ಯೆಸ್, ʼಮಿನಿ ಟಿಬೆಟ್ʼ ಅಂತಲೇ ಕರೆಯಲ್ಪಡುವ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕೇಂದ್ರದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಈ ಸಂಭ್ರಮಕ್ಕೆ ಕಾರಣ ʼಲೋಸಾರ್ʼ. ಅಂದಹಾಗೆ ಈ ʼಲೋಸಾರ್ʼ ಅಂದ್ರೆ ಟಿಬೆಟಿಯನ್ನರ ಪಾಲಿನ ಹೊಸ ವರ್ಷ. ಫೆಬ್ರವರಿ 21ಕ್ಕೆ ಆರಂಭವಾದ ಇವರ ಹೊಸ ವರ್ಷಾಚರಣೆಯು 16 ದಿನಗಳ ಕಾಲ ನಡೆಯುತ್ತಿದೆ.
ಈ ವರ್ಷದ ಅಧಿಪತಿ ಹಿಮದ ಮೊಲ
ಟಿಬೆಟಿಯನ್ನರು ಅವರದೇ ಆದ ಪಂಚಾಂಗ ಹೊಂದಿದ್ದಾರೆ. ಆ ಪಂಚಾಂಗದ ಪ್ರಕಾರ ಇದು ಅವರ 2150ನೇ ವರ್ಷ. ಈ ವರ್ಷದ ಅಧಿಪತಿ ʼʼಹಿಮದ ಮೊಲʼʼ ಎಂದು ಘೋಷಿಸಲಾಗಿದೆ. ಅದು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ. ಇವರಂತೂ ಹೊಸ ವರ್ಷದ ದಿನ ಸಾಂಪ್ರದಾಯಿಕ ಉಡುಗೆ, ಕ್ರೀಡೆ ಜೊತೆ ಸಂಭ್ರಮಿಸುತ್ತಾರೆ.
ಪಾರಂಪರಿಕ ವಸ್ತ್ರಗಳ ಝಲಕ್!
ಟಿಬೆಟಿಯನ್ ಪಂಗಡಗಳ ವಸ್ತ್ರ ಧರಿಸಿ ಆಯಾ ಕುಟುಂಬದ ಮುಂದಾಳುಗಳು ಅವರ ಪರಿವಾರದ ನೇತೃತ್ವ ವಹಿಸುತ್ತಾರೆ. ಅಷ್ಟೇ ಅಲ್ದೇ, ಬೆಳೆದ ಬೆಳೆಯನ್ನು ಹಾಗೂ ಸಿಹಿ ಪಾನೀಯವನ್ನು 14ನೇ ದಲೈಲಾಮಾ ಮೂರ್ತಿಗೆ ಅರ್ಪಿಸುತ್ತಾರೆ. ಇನ್ನು ಪಾರಂಪರಿಕ ವಸ್ತ್ರದಲ್ಲಿ ಕಂಗೊಳಿಸುವ ಅತೀ ಸುಂದರ ಜೋಡಿಗೆ ಬುಲೆಟ್ ಬೈಕ್ ಕೂಡಾ ಸಿಗುತ್ತೆ.
ಇದನ್ನೂ ಓದಿ: Uttara Kannada: ಈ ಹಳ್ಳಿ ಮಕ್ಕಳು ತಾವೇ ಡ್ರೋನ್ ಮಾಡಿ ಹಾರಿಸ್ತಿದ್ದಾರೆ ನೋಡಿ!
ಕೇಡು ಬಗೆಯುವ ವಸ್ತು ದಹನ!
ಹೀಗೆ ಹದಿನಾರು ದಿನಗಳ ಕಾಲ ನಡೆಯಲಿರುವ ಟಿಬೆಟಿಯನ್ ಹೊಸ ವರ್ಷ ಆಚರಣೆಯನ್ನು ಮುಂಡಗೋಡಿನ ಟಿಬೆಟಿಯಿನ್ ಕಾಲೊನಿ ಅದ್ದೂರಿಯಾಗಿ ಸ್ವಾಗತಿಸುತ್ತಿದೆ.
ಈ ವರ್ಷ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಪ್ರಾರ್ಥನೆಯೊಂದಿಗೆ ಶುರುವಾಗುವ ಕಾರ್ಯಕ್ರಮ ಕೊನೆಯ ದಿನ ಕೇಡು ಮಾಡುವ ವಸ್ತುವನ್ನು ಸುಡುವುದರೊಂದಿಗೆ ಮುಗಿಯಲಿದೆ. ಇದು ಭಾರತದ ವಿವಿಧತೆಯಲ್ಲಿನ ಏಕತೆಯ ಪ್ರತೀಕವಾಗಿದ್ದು, ವಿಭಿನ್ನ ಸಂಸ್ಕೃತಿಯ ಜೀವಾಳವೂ ಆಗಿದೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ