ಉತ್ತರ ಕನ್ನಡ: ಒಂದೆಡೆ ದೇವರಿಗೆ ಅರ್ಪಿಸಲು ಬಗೆ ಬಗೆಯ ಮದ್ಯ. ಇನ್ನೊಂದೆಡೆ ಮದ್ಯವನ್ನ ದೇವರಿಗೆ ಅಭಿಷೇಕ ಮಾಡುತ್ತಿರುವ ಅರ್ಚಕರು. ಮತ್ತೊಂದೆಡೆ ದೇವಸ್ಥಾನದ ಎದುರು ಕ್ಯಾಂಡಲ್ಗಳ ಬೆಳಕು. ಇಲ್ಲಿ ಮತ್ತೇರಿಸುವ ಮದ್ಯದಿಂದಲೇ ದೇವರಿಗೆ (Khapri God Temple)ಅಭಿಷೇಕ, ಬೀಡಿ- ಸಿಗರೇಟ್ನಿಂದಲೇ ಆರತಿ. ಅರೇ! ಯಾವುದಪ್ಪಾ ಆ ಡಿಫ್ರೆಂಟ್ ದೇವರು ಅಂತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ!
ಇಂತಹ ಆಚರಣೆ ಕಂಡುಬರೋದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದಲ್ಲಿ ನಡೆಯುವ ಖಾಪ್ರಿ ದೇವರ ಜಾತ್ರೆಯಲ್ಲಿ. ಸಾಮಾನ್ಯವಾಗಿ ಜಾತ್ರೆಗಳಲ್ಲಿ ದೇವರಿಗೆ ಹಣ್ಣು- ಹಂಪಲು ನೈವೇದ್ಯ ಮಾಡುತ್ತಾರೆ. ಇದಲ್ಲದೇ, ಹಾಲಿನ ಅಭಿಷೇಕ, ಎಣ್ಣೆ, ಬೆಣ್ಣೆಯ ನೈವೇದ್ಯ ಸಹ ಮಾಡಲಾಗುತ್ತದೆ. ಆದರೆ ಈ ಖಾಪ್ರಿ ದೇವರ ಜಾತ್ರೆ ಮಾತ್ರ ಕೊಂಚ ವಿಭಿನ್ನ.
ಮದ್ಯದ ಅಭಿಷೇಕ
ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ದೇವರಿಗೆ ಪೂಜೆಯನ್ನ ಸಲ್ಲಿಸುತ್ತಾರೆ. ಹರಕೆ ಕಟ್ಟಿಕೊಂಡು ಬಂದಂತಹ ಭಕ್ತರು ಸಿಗರೇಟು, ಕ್ಯಾಂಡಲ್ನಿಂದ ಆರತಿಯನ್ನ ಮಾಡೋದರ ಜೊತೆಗೆ ಮದ್ಯದಿಂದಲೇ ದೇವರಿಗೆ ಅಭಿಷೇಕವನ್ನ ಸಹ ಮಾಡ್ತಾರೆ. ಇದಲ್ಲದೇ ದೇವರಿಗೆ ಕೋಳಿ ಬಲಿಯನ್ನ ಕೊಟ್ಟು ರಕ್ತದಿಂದ ಸಹ ನೈವೇದ್ಯ ಮಾಡಲಾಗುತ್ತದೆ.
ಆಫ್ರಿಕಾ ಮೂಲದ ದೇವರು
ಖಾಪ್ರಿ ಶಕ್ತಿ ದೇವರಾಗಿರುವುದರಿಂದ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಈ ರೀತಿಯ ಹರಕೆ ಭಕ್ತರು ಈಡೇರಿಸುತ್ತಾರೆ. ಖಾಪ್ರಿ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನ ತಂದು ಪೂಜಿಸುತ್ತಿದ್ದನಂತೆ. ಬಳಿಕ ಇದ್ದಕ್ಕಿದ್ದಂತೆ ಒಂದು ದಿನ ಕಣ್ಮರೆಯಾದನಂತೆ.
ಕನಸಲ್ಲಿ ಕಂಡಿದ್ದ ಖಾಪ್ರಿ
ನಂತರ ಇಲ್ಲಿನ ಪರಸಪ್ಪ ಮನೆತನದವರಿಗೆ ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ನಂತರ ಕನಸ್ಸಿನಲ್ಲೂ ದೇವರು ಬಂದು ತನಗೆ ಕೋಳಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ದೇವಸ್ಥಾನವನ್ನ ಕಟ್ಟಲಾಯಿತಂತೆ. ಈ ಜಾತ್ರೆ ನೂರಾರು ವರ್ಷಗಳಿಂದಲೂ ನಡೆಯುತ್ತಾ ಬಂದಿದ್ದು, ಪ್ರತಿ ವರ್ಷ ಇದೇ ರೀತಿ ದೇವರಿಗೆ ಫಲ- ಪುಷ್ಪ, ಹಣ್ಣು- ಕಾಯಿಯ ಸಮರ್ಪಿಸುವ ಜೊತೆಗೆ ಸಾರಾಯಿ, ಸಿಗರೇಟ್, ಕೋಳಿ ಅರ್ಪಿಸುತ್ತಾರೆ.
ಇದನ್ನೂ ಓದಿ: Shigehalli Ganapati Temple: ಭಕ್ತರ ಜೊತೆ ಮಾತನಾಡ್ತಾನಂತೆ ಬಯಲಲ್ಲೇ ನೆಲೆಸಿರುವ ಈ ಬಂಡೆ ಗಣಪ!
ಮಾರ್ಚ್ ತಿಂಗಳಿನಲ್ಲಿ ಜಾತ್ರೆ ಸಂಭ್ರಮ
ಅಲ್ಲದೇ, ಹೆದ್ದಾರಿಗೆ ಹೊಂದಿಕೊಂಡೇ ಈ ದೇವರು ಇದ್ದು, ದೇವಸ್ಥಾನವಾದ ಬಳಿಕ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಸಹ ಕಡಿಮೆಯಾಗಿದೆ ಅನ್ನೋದು ಭಕ್ತರ ಅಭಿಪ್ರಾಯ. ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುವ ಈ ಜಾತ್ರೆಗೆ ಕೇವಲ ಕಾರವಾರದಿಂದ ಮಾತ್ರವಲ್ಲದೇ ನೆರೆಯ ಗೋವಾ, ಮಹಾರಾಷ್ಟ್ರದಿಂದ ಸಹ ಭಕ್ತರು ಆಗಮಿಸಿ, ದೇವರಿಗೆ ಹೆಂಡ, ಸಿಗರೇಟು, ಕೋಳಿಯನ್ನ ಅರ್ಪಿಸಿ ತಮ್ಮ ಹರಕೆಯನ್ನ ತೀರಿಸಿಕೊಳ್ಳುತ್ತಾರೆ.
ಒಟ್ಟಾರೆ ಕಾರವಾರದಲ್ಲಿ ನಡೆಯುವ ಈ ಸಾರಾಯಿ ಜಾತ್ರೆ ಸಾಕಷ್ಟು ವಿಶೇಷತೆಯನ್ನ ಹೊಂದಿದ್ದು, ದೇವರನ್ನ ಹೀಗೂ ಆರಾಧಿಸುತ್ತಾರೆ ಅನ್ನೋದಿಕ್ಕೆ ಖಾಪ್ರಿ ದೇವರು ಸಾಕ್ಷಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ