"ನಿತ್ಯೋತ್ಸವ.. ತಾಯಿ ನಿತ್ಯೋತ್ಸವ" ಅಂತ ಹಾಡುತ್ತಿರೋ ಕನ್ನಡಾಭಿಮಾನಿಗಳು. ಕೆಂಪು, ಹಳದಿ ರಂಗಿನ ನಡುವೆ ಕಂಗೊಳಿಸುತ್ತಿರೋ ಭುವನೇಶ್ವರಿ ತಾಯಿ. ಕನ್ನಡಾಂಬೆಯ ಕಣ್ತುಂಬಿಕೊಳ್ಳುತ್ತಾ ಮೊಳಗಿದವು ಜೈಕಾರ ಘೋಷಣೆಗಳು. ಸುಂದರ ಅಲಂಕಾರದಿಂದ ಕಂಗೊಳಿಸುತ್ತಿರುವ ಇದು ಕನ್ನಡದ ತೇರು. ಕನ್ನಡಾಂಬೆಯ ತೇರು. ಉತ್ತರ ಕನ್ನಡ ಜಿಲ್ಲೆ (Uttara Kannada) ಕನ್ನಡದ ಕಂಪನ್ನ ಬೀರಿದ ಜಿಲ್ಲೆ. ಮೊದಲ ರಾಜ ಮನೆತನ (Kadamba) ಹಾಗೂ ರಾಜ್ಯದ ಏಕೈಕ ಕನ್ನಡ ಮಾತೆ ಭುವನೇಶ್ವರಿ ತಾಯಿಯ ದೇಗುಲ (Bhuvaneshwari Temple) ಹೊಂದಿದ ಜಿಲ್ಲೆ. ಇಂತಹ ಜಿಲ್ಲೆಯಿಂದಲೇ ಇದೀಗ ಕನ್ನಡದ ತೇರಿಗೆ ಚಾಲನೆ ಸಿಕ್ಕಿದೆ.
ಉತ್ತರ ಕನ್ನಡದ ಸಿದ್ದಾಪುರ-ಶಿರಸಿಯಲ್ಲಿ ಕನ್ನಡ ತಾಯಿಯ ಕಂಚಿನ ತೇರಿಗೆ ಚಾಲನೆ ನೀಡಲಾಗಿದೆ. ಕೈಯ್ಯಲ್ಲಿ ಕೆಂಪು, ಹಳದಿ ಧ್ವಜಧಾರಿಣಿ ಭುವನೇಶ್ವರಿಗೆ ಆರತಿ ಬೆಳಗಿ ಪೂಜಿಸಲಾಗಿದೆ. ಈ ಕನ್ನಡ ತೇರು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಲಿದ್ದು, ಕರುನಾಡಿನಾದ್ಯಂತ ಕನ್ನಡಾಭಿಮಾನ ಹೆಚ್ಚಿಸಲಿದೆ.
ಅದ್ಭುತವಾಗಿದೆ ರಥ
ಭುವನೇಶ್ವರಿ ದೇವಿಯ ಮೂರ್ತಿಯನ್ನು ಕಲ್ಯಾಣದ ಚಾಲುಕ್ಯರ ವಾಸ್ತುಶಿಲ್ಪವನ್ನು ಹೋಲುವ ರಥದ ಮಾದರಿಯ ಮಂಟಪದಲ್ಲಿ ಸ್ಥಾಪಿಸಲಾಗಿದೆ. ಸುತ್ತಲೂ ಆನೆ, ಕುದುರೆಯ ಉಬ್ಬು ಶಿಲ್ಪಗಳಿವೆ. ಸಿದ್ದಾಪುರದಿಂದ ಶಿರಸಿಯಯವರೆಗೆ ಮೊದಲ ದಿನ ಆಗಮಿಸಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಂಚಾರ ಆರಂಭಿಸಲಿದೆ.
ಇದನ್ನೂ ಓದಿ: Volleyball Tournament: 10 ಜಿಲ್ಲೆಗಳ 150 ಪುರುಷ, 40 ಮಹಿಳಾ ವಾಲಿಬಾಲ್ ಆಟಗಾರರ ಜಿದ್ದಾಜಿದ್ದಿ!
ಇದೇ ಮೊದಲು ಇಂತಹ ತೇರಿನ ಕಲ್ಪನೆ
ಇಂತಹ ತೇರಿನ ಪರಿಕಲ್ಪನೆ ಇದೇ ಮೊದಲಾಗಿದ್ದು ಉತ್ತರ ಕನ್ನಡ ಜಿಲ್ಲೆಯಿಂದಲೇ ಈ ತೇರಿನ ಪರ್ಯಟನೆಗೆ ಚಾಲನೆ ಸಿಕ್ಕಿದೆ. ಸತತ 25 ದಿನ 25 ಜನರ ತಂಡ ಹಾವೇರಿಯ ಜಾನಪದ ವಿಶ್ವವಿದ್ಯಾಲಯದಲ್ಲಿ ಈ ತೇರನ್ನು ತಯಾರಿಸಿದ್ದಾರೆ. ಮೈಸೂರು ದಸರಾದಲ್ಲಿ ಪ್ರದರ್ಶಿಸುವ ಸ್ತಬ್ಧ ಚಿತ್ರವು ಈ ತೇರಿಗೆ ಸ್ಫೂರ್ತಿಯಾಗಿದೆ.
ಇದನ್ನೂ ಓದಿ: Uttara Kannada: ಅಯ್ಯಪ್ಪನ ದರ್ಶನಕ್ಕೆ ಹೊರಟ ನಾಯಿ! ಪಾದಯಾತ್ರಿಗಳ ಜೊತೆ ಶಬರಿಮಲೆಗೆ ಪಯಣ
ಕನ್ನಡ ತಾಯಿಯ ತೇರು ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನದ ತನಕ ರಾಜ್ಯಾದ್ಯಂತ ತಿರುಗಾಟ ನಡೆಸಲಿದೆ. ಒಟ್ಟಿನಲ್ಲಿ ಕನ್ನಡದ ವಿಷಯ ಬಂದಾಗ ಉತ್ತರಕನ್ನಡ ಎಂದಿಗೂ ಮುಂದೆ ಅನ್ನೋದಕ್ಕೆ ಕನ್ನಡಾಂಬೆಯ ತೇರು ಆರಂಭವೂ ಸಾಕ್ಷಿಯಾಯಿತು.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ