ಉತ್ತರ ಕನ್ನಡ: ಸುತ್ತ ಎಲ್ಲಿ ನೋಡಿದರೂ ಹಸಿರು, ನೀಟಾಗಿ ಬೆಳೆದಿರುವ ಗಿಡಗಳು, ಚೈತ್ರದ ಆಗಮನಕ್ಕೆ ಸಜ್ಜಾಗಿರುವ ಹೂರಾಶಿ, ಅಲ್ಲೊಂದು ಇಲ್ಲೊಂದು ವಿಶ್ರಾಂತಿ ಧಾಮಗಳು! ಹೀಗೆ ಹಸಿರ ಕಾನನ (International Day of Forests 2023) ಆಗಿ ಬದಲಾದ ಈ ಭೂಮಿ ನಿಜಕ್ಕೂ ದೇವರ ಕೊಡುಗೆಯೇ ಎನ್ನಬೇಕು. ಅದ್ಯಾಕೆ ಅಂತೀರ? ಈ ಸ್ಟೋರಿ ನೋಡಿ ನಿಮ್ಗೇ ಗೊತ್ತಾಗ್ಬೇಕು.
ಮುಂಚೆ ಬರಡು ಭೂಮಿಯಾಗಿತ್ತು!
ಹೌದು, ಶಿರಸಿಯ ಮಂಜುಗುಣಿ ಒಂದು ಕಾಲಕ್ಕೆ ಹೀಗೆ ಇರ್ಲಿಲ್ಲ. ಬರಡು ಭೂಮಿಯಾಗಿದ್ರಿಂದ ಬ್ರಿಟಿಷರು ಕೂಡಾ ಇಲ್ಲಿ ಗರಿಕೆಯೂ ಬೆಳೆಯಲ್ಲ ಎಂದು ತೆರಿಗೆ ಹಾಕಿರಲಿಲ್ಲವಂತೆ. ಅಂತಹ ನೆಲದಲ್ಲೀಗ ಮಲೆನಾಡಿನ ಸುಮಗಳ ಘಮಘಮದ ಜೊತೆಗೆ ವಿವಿಧ ಮರ, ಗಿಡಗಳು ಬೆಳೆದು ನಿಂತಿವೆ. ಇದೆಲ್ಲವೂ ಸ್ಥಳೀಯ ದೇವರಾದ ಶ್ರೀನಿವಾಸನ ಕೃಪೆಯೇ ಇರಬೇಕು ಎಂದು ಜನ ನಂಬಿದ್ದಾರೆ.
ದೇವರ ಕಾಡು ಯೋಜನೆ
ಉತ್ತರ ಕನ್ನಡ ಶೇಕಡಾ 89 ರಷ್ಟು ಅರಣ್ಯ ಪ್ರದೇಶ ಹೊಂದಿರುವ ನೆಲ. ಆದರೆ ಮಂಜುಗುಣಿಯಂತಹ ಕೆಲ ಪ್ರದೇಶಗಳಲ್ಲಿ ಬರಡು ನೆಲವೇ ಇತ್ತು. ಇದನ್ನ ಮನಗಂಡ ಅರಣ್ಯ ಇಲಾಖೆಯು ಒಂದು ನೂತನ ಹೆಜ್ಜೆ ಇಟ್ಟಿತು. ಅದೇ "ದೇವರ ಕಾಡು" ಎಂಬ ಯೋಜನೆ. ಶ್ರೀ ದೇವರ ಸುಪರ್ದಿಯಲ್ಲಿ ಕಾಡು ಎಂಬ ಭಾವವನ್ನು ಜನರಿಗೆ ಮೂಡಿಸಿ ಸುಮಾರು 14 ಎಕರೆಯಲ್ಲಿ ಕಾಡನ್ನು ಬೆಳೆಸಲಾಗಿದೆ. ಅದರಲ್ಲೂ ಎರಡೂವರೆ ಎಕರೆಯಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!
100ಕ್ಕೂ ಅಧಿಕ ಮರ
ಇಲ್ಲಿ ಈಗ ಸದ್ಯ ರುದ್ರಾಕ್ಷಿ ಮರ, ಬಿಲ್ವಪತ್ರೆ, ಗೇರು, ನೇರಳೆ, ಮಾವು, ಕದಂಬ, ಕವಲು, ಸೀತಾ ಲಕ್ಷ್ಮಣ ಸೇರಿದಂತೆ 100ಕ್ಕೂ ಹೆಚ್ಚು ಜಾತಿಯ ಮರಗಳನ್ನು ಬೆಳೆಸಲಾಗಿದೆ. ಕರ್ನಾಟಕದ ಅರಣ್ಯ ಇಲಾಖೆಯಿಂದ ಬೀಜ,ಗೊಬ್ಬರ ಪೂರೈಕೆಯೊಂದಿಗೆ ರಕ್ಷಣೆಯನ್ನೂ ಒದಗಿಸಲಾಗುತ್ತಿದೆ. ಗ್ರಾಮಸ್ಥರ ತಂಡವೊಂದನ್ನು ರಚನೆ ಮಾಡಿ ಅವರಿಗೂ ಕೂಡ ಅರಣ್ಯ ರಕ್ಷಣೆಯ ಜವಾಬ್ದಾರಿ ನೀಡಲಾಗಿದೆ.
ಇದನ್ನೂ ಓದಿ: Uttara Kannada: ಈ ಹಳ್ಳಿ ಸಂಸ್ಥೆ 6 ತಿಂಗಳಿಗೆ 15 ಲಕ್ಷ ವಹಿವಾಟು ನಡೆಸುತ್ತೆ!
ಅತ್ಯುತ್ತಮ ನಿರ್ಮಾಣ
ಇಲ್ಲಿನ ವಿಶೇಷವೆಂದರೆ ಇಲ್ಲಿ ನೀವೆಲ್ಲೂ ಒಂದೇ ಒಂದು ಕಸವನ್ನೂ ಕಾಣೋದಿಲ್ಲ. ಪ್ಲಾಸ್ಟಿಕ್ ಸಹ ಇಲ್ಲಿ ಕಾಣುವುದೇ ಇಲ್ಲ. ದಪ್ಪ ದಪ್ಪ ಅರೆ ಬಂಡೆಗಳು ಎಂದು ಕರೆಯಲ್ಪಡುವ ಬಂಡೆಗಳಿಗೆ ಅದಕ್ಕೆ ನೈಸರ್ಗಿಕ ಬಣ್ಣಗಳಿಂದ ಪೇಂಟ್ ಮಾಡಲಾಗಿದೆ ಹಾಗೂ ಅಷ್ಟೇ ಅಲ್ಲದೇ ಹಿರಿಯರಿಗೆ ವಾಕಿಂಗ್ ಪಥ ಮಕ್ಕಳಿಗೆ ಆಟಿಕೆ ಮೈದಾನ ನಿರ್ಮಿಸಲಾಗಿದೆ. ಒಟ್ಟಿನಲ್ಲಿ ದೇವರ ಕಾಡು ಅಂದ್ರೆ ಪಕ್ಕ ದೇವರೇ ನಿರ್ಮಿಸಿದ್ದಾನೆ ಅನ್ನೋ ಮಟ್ಟಿಗೆ ಮಂಜುಗುಣಿಯ ಈ ಉದ್ಯಾನವನ ಬೆಳೆದು ನಿಂತಿದೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ