ಪುಟ್ಟ ಪುಟ್ಟ ಆಲದ ಮರ, ಬೀಟೆ ಅರಳಿ ವೃಕ್ಷಗಳು! ಅರೇ! ಇಷ್ಟೊಂದು ಚಿಕ್ಕ ಮರಗಳೂ ಇರುತ್ತಾ ಅಂತ ನೀವು ಕಣ್ಣರಳಿಸಬಹುದು! ಕೃಷಿ ಮಾಡ್ಬೇಕು, ಗಿಡ- ಮರಗಳನ್ನ ಬೆಳೆಸ್ಬೇಕು ಅಂತ ಎಲ್ರೂ ಹೇಳ್ತಾರೆ. ಆದ್ರೆ ಹೇಳಿದಂತೆ ಮಾಡೋರು ಬಹಳ ಕಡಿಮೆ. ಇನ್ನು ಕಾಂಕ್ರೀಟ್ ಕಟ್ಟಡಗಳೇ (Concrete Forest) ಹೆಚ್ಚಾಗಿರೋ ಈ ಸಮಯದಲ್ಲಿ ಗಿಡ ಬೆಳ್ಸೋಕೆ ಜಾಗವಾದ್ರೂ ಎಲ್ಲಿದೆ ಹೇಳಿ! ಆದ್ರೆ ಇಲ್ಲೊಬ್ರು ಹೊಸ ಕೃಷಿ ವಿಧಾನದ (Bonsai Trees) ಮೂಲಕ ಕಡಿಮೆ ಜಾಗದಲ್ಲಿ ನೂರಾರು ವರ್ಷ ಬಾಳುವ ಮರಗಳನ್ನ ಬೆಳೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಕುಮಟಾ ತಾಲೂಕಿನ ಮೂರೂರು ಕಲ್ಲಬ್ಬೆ ಗ್ರಾಮದ ನಿವಾಸಿಯಾಗಿರುವ ಎಲ್.ಆರ್.ಹೆಗಡೆಯವರೇ ಈ ಹೊಸ ಕೃಷಿ ವಿಧಾನದ ಸಾಧಕ.
ನೂರಾರು ವರ್ಷಗಳ ಕಾಲ ಬೆಳೆಯುವ ಮರಗಳು ಸೇರಿದಂತೆ ಹಲವು ಬಗೆಯ ಔಷಧೀಯ ಗಿಡಗಳನ್ನು ಬೋನ್ಸಾಯ್ ಪದ್ಧತಿಯ ಮೂಲಕ ಬೆಳೆಸಿ, ಬೋನ್ಸಾಯ್ ವನವನ್ನೇ ನಿರ್ಮಿಸಿ ಹೆಗಡೆ ಮಾದರಿಯಾಗಿದ್ದಾರೆ.
ಋಷಿಮುನಿಗಳು ಬರೆದ ಗ್ರಂಥ ಆಧರಿಸಿ ಔಷಧಿ ವನ
ಎಲ್.ಆರ್. ಹೆಗಡೆ ಅರಣ್ಯ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ವಲಯ ಅರಣ್ಯಾಧಿಕಾರಿಯಾಗಿ ನಿವೃತ್ತಿಯಾಗಿದ್ರು. ಆದ್ರೆ ಪ್ರಕೃತಿ ಮೇಲಿನ ಪ್ರೀತಿಗೆ ನಿವೃತ್ತಿಯಾಗದಂತೆ ಇಳಿ ವಯಸ್ಸಿನಲ್ಲೂ ಕಾಡು ಸಂರಕ್ಷಣೆ ಮಾಡುವ, ಮರ ಬೆಳೆಸುವ ಆಸಕ್ತಿ ಮುಂದುವರೆಸಿದ್ರು. ಹೀಗಾಗಿ ಕಳೆದ ಎಂಟು ವರ್ಷದಿಂದ ಬೋನ್ಸಾಯ್ ಪದ್ಧತಿಯಲ್ಲಿ ಕೃಷಿ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೆಗಡೆಯವರು ವರಹಾಮಿಹಿರ ಹಾಗೂ ಇತರ ಋಷಿಮುನಿಗಳು ಬರೆದ ಗ್ರಂಥ ಆಧರಿಸಿ ಔಷಧಿ ವನ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: Success Story: ಕಿರಾಣಿ ಅಂಗಡಿ ಮಾಲೀಕ ವೇಟ್ ಲಿಫ್ಟಿಂಗ್ನಲ್ಲಿ ಬಂಗಾರಕ್ಕೆ ಮುತ್ತಿಟ್ರು!
ಸಪ್ತರ್ಷಿ ವನ, ರಾಶಿ ವನ, ಪಂಚಫಲ ವನ, ನಕ್ಷತ್ರ ವನ, ನವಗ್ರಹವನ ಸೇರಿದಂತೆ ಸುಮಾರು 175ಕ್ಕೂ ಅಧಿಕ ಔಷಧಿ ಗುಣವುಳ್ಳ ಮರಗಳು ಇಲ್ಲಿವೆ.
400 ಕ್ಕೂ ಹೆಚ್ಚು ತಳಿಯ ಬೋನ್ಸಾಯ್ ಗಿಡಗಳು
ಹೆಗಡೆಯವರು ಬೋನ್ಸಾಯ್ ವನದಲ್ಲಿ ಆಲ, ಅರಳಿ, ಅಶ್ವತ, ಬೀಟೆ, ರಕ್ತ ಚಂದನ, ರುದ್ರಾಕ್ಷಿ, ನೆಲ್ಲಿ, ಅಶ್ವಿನಿ, ದೇವವೃಕ್ಷ ಸೇರಿದಂತೆ ವಿವಿಧ ತಳಿಯ 400ಕ್ಕೂ ಅಧಿಕ ಗಿಡಗಳನ್ನ ಬೆಳೆಸಿದ್ದಾರೆ. ಅತಿ ಕಡಿಮೆ ನೀರು ಹಾಗೂ ಕಡಿಮೆ ಜಾಗದಲ್ಲಿ ಈ ಸಣ್ಣ ಕಾಡನ್ನೇ ಕಟ್ಟಿದ್ದಾರೆ. ಸಹಜವಾಗಿ ಗಿಡ- ಮರಗಳು ಯಾವ ಯಾವ ಕಾಲಕ್ಕೆ ಹೂವು ಫಲ ಬಿಡುತ್ತವೆಯೋ ಅದೇ ಸಮಯದಲ್ಲಿ ಈ ಕುಬ್ಜ ಗಿಡಗಳೂ ಫಲ ನೀಡುತ್ತವೆ.
ಇದನ್ನೂ ಓದಿ: Belambar Treatment: ಉತ್ತರ ಕನ್ನಡದ ಈ ನಾಟಿವೈದ್ಯರ ಬಳಿ ರಾಜ್ಕುಮಾರ್, ಬಿಗ್ ಬಿ ಸಹ ಚಿಕಿತ್ಸೆ ಪಡೆದಿದ್ರು!
ನೀವೂ ಇವರನ್ನು ಭೇಟಿಯಾಗ್ಬೇಕೇ?
ಇನ್ನು ಇಲ್ಲಿಗೆ ಭೇಟಿ ನೀಡಿದ್ರೆ ಹೆಗಡೆಯವರು ಬಳಿ ನೀವು ಬೋನ್ಸಾಯ್ ಕೃಷಿ ಪದ್ಧತಿ ಬಗ್ಗೆ ಉಚಿತವಾಗಿ ಮಾಹಿತಿ ಪಡೆಯಬಹುದು.
ಎಲ್.ಆರ್.ಹೆಗಡೆಯವರ ಸಂಪರ್ಕ ಸಂಖ್ಯೆ: 9480746716
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ