ಉತ್ತರ ಕನ್ನಡ: ದೂರದಿಂದ ನೋಡ್ತಿದ್ರೆ ನವಿಲೊಂದು ಗರಿ ಬಿಚ್ಚಿ ಕುಣಿದಂತೆ! ಕಲರ್ ಕಲರ್ ಆಗಿ ಫಳಫಳನೆ ಹೊಳೆಯುತ್ತಾ ಕಂಗೊಳಿಸುತ್ತೆ ನೋಡಿ ಈ ಚೆಂದದ ಅಲಂಕಾರ. ಅಷ್ಟಕ್ಕೂ ಈ ತೆಂಗಿನ ಗರಿಯ ಅಲಂಕಾರಿಕ ವಸ್ತು ಯಾಕೆ ಅಂತೀರ? ಅದು ಈ ನಾಡಿನ ಜಾನಪದ ಜೀವಾಳ (Traditional Culture) ಅಂದ್ರೆ ನೀವು ನಂಬಲೇಬೇಕು!
ಯೆಸ್, ಈ ಕಲರ್ಫುಲ್ ಆಗಿರೋ ಈ ವಸ್ತುಗಳೆಲ್ಲವೂ ಸುಮ್ಮನೆ ತಮಾಷೆಗೆ ತಯಾರಿಸಿದ್ದಲ್ಲ. ಉತ್ತರ ಕನ್ನಡದ ಹಾಲಕ್ಕಿ ಗೌಡ ಸಮುದಾಯದ ಜಾನಪದ ನೃತ್ಯ ಹಾಲಕ್ಕಿ ಸುಗ್ಗಿ ಕುಣಿತಕ್ಕೆ ಬಳಸೋ ಪರಿಕರಗಳಿವು. ಇದನ್ನ ಸುಗ್ಗಿ ಕುಣಿತ ಮಾಡೋ ಹಾಲಕ್ಕಿ ಸಮುದಾಯದವರು ತಲೆ ಮೇಲೆ ಧರಿಸಿಕೊಳ್ಳುತ್ತಾರೆ.
30 ವರ್ಷಗಳಿಂದ ಇದನ್ನೇ ಮಾಡ್ತಿರೋ ಕಲಾವಿದ!
ಆದ್ರೆ ಇದು ಹೆಚ್ಚೇನು ಭಾರವಿಲ್ಲದೇ, ಕುಣಿಯೋರಿಗೆ ತೊಂದರೆನೂ ಕೊಡದೇ ತಲೆ ಮೇಲೆ ನಿಲ್ಲುತ್ತವೆ. ಇಂತಹ ಕರಕುಶಲ ಕಲೆಯ ಮೂಲಕ ಈ ತೆಂಗಿನಕಾಯಿ ಗರಿಯ ಕಡ್ಡಿಯ ಬೊಂಡೆಯನ್ನು ತಯಾರಿಸುವಲ್ಲಿ ಯಶಸ್ವಿಯಾದವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ನಾರಾಯಣ ಗೌಡರು. ಇವರು ಕಳೆದ 30 ವರ್ಷಗಳಿಂದ ಈ ಕೆಲಸದಲ್ಲಿ ನಿರತರಾಗಿದ್ದಾರೆ.
ಇಷ್ಟು ಸಖತ್ತಾಗಿ ತಯಾರಿಸೋದು ಹೇಗೆ ಗೊತ್ತಾ?
ಈ ಬೊಂಡೆಗೆ ಮೊದಲು ಇದಕ್ಕೆ ಬೇಕಾದ ಹಾಗೆ ಕಟಿಂಗ್ಸ್ ಮಾಡಿಕೊಂಡು ನಂತರ ತೆಂಗಿನ ಗರಿಯ ಕಡ್ಡಿಗೆ ಈ ಬಟ್ಟೆಯ ಹೂವನ್ನು ಜೋಡಿಸುತ್ತಾರೆ. ಬಳಿಕ ಅದೆಲ್ಲವನ್ನು ಒಟ್ಟು ಮಾಡಿ ಕಳಸದ ಆಕೃತಿಯ ಥರ್ಮಾಕೋಲ್ ಅನ್ನು ಕಟ್ ಮಾಡಿಕೊಳ್ಳುತ್ತಾರೆ. ಅದಕ್ಕೆ ಪೇಂಟ್ ಮಾಡಿ, ಬಳಿಕ ಜೋಡಿಸಿ ಅದಕ್ಕೊಂದು ಹೊಸ ಲುಕ್ ನೀಡುತ್ತಾರೆ. ಇದು ಎಷ್ಟೇ ಹಗುರವಿದ್ರೂ, ಇದನ್ನು ಧರಿಸಿ ಕುಣಿಯಬೇಕಿದ್ರೆ ಅದು ಮುರಿಯದೇ ಹಾಗೆ ಇರೋದು ವಿಶೇಷ.
ಇದನ್ನೂ ಓದಿ: Bedara Vesha: ಶಿರಸಿಯ ಬೀದಿಗಳಲ್ಲಿ ಬೇಡರ ವೇಷದ್ದೇ ಕಾರುಬಾರು! ವಿಶೇಷ ಕುಣಿತಕ್ಕೆ ಯುವಕರ ಸಖತ್ ಹೆಜ್ಜೆ
ಒಂದು ತುರಾಯಿಗೆ ಎಷ್ಟು ರೂ.?
ಈಗ ಮತ್ತೆ ಸುಗ್ಗಿ ಬರುತ್ತಿದ್ದು, ಕಾರವಾರದಿಂದ ಹಿಡಿದು ಭಟ್ಕಳದ ತನಕ ಜನರು ಇವರ ಹತ್ತಿರ ಬಂದು ಮುಗಿಬಿದ್ದು ತುರಾಯಿ, ಮುಂಡಾಸು ಮಾಡಿಸಿಕೊಳ್ಳುತ್ತಾರೆ. ಒಂದಕ್ಕೆ ಮುನ್ನೂರರಿಂದ ನಾಲ್ಕುನೂರು ರೂಪಾಯಿಯ ಹಾಗೆ ಮಾರಾಟವಾಗುತ್ತದೆ. ಈಗಾಗಲೇ 60 ದಾಟಿರುವ ನಾರಾಯಣ ಗೌಡರು ಸುಗ್ಗಿ ಬಂತೆಂದರೆ ತಮ್ಮ ಬೇಸಾಯದ ಕೆಲಸ ಬಿಟ್ಟು . ಬೊಂಡೆ ಕಟ್ಟುವುದರಲ್ಲಿ ನಿರತರಾಗುತ್ತಾರೆ.
ಇದನ್ನೂ ಓದಿ: Uttara Kannada: ಜಿಲೇಬಿ ಮಾರಿ ಶಾಲೆ ಕಟ್ಟಿದ ಸಾಹಸಿ! ಶಿಕ್ಷಣ ಕ್ರಾಂತಿ ಮಾಡಿದ ಅಡುಗೆ ಭಟ್ಟರು!
ಹೀಗೆ ತಯಾರಾದ ಬೊಂಡೆಯನ್ನ ಸುಗ್ಗಿ ಕುಣಿಯುವವನೊಬ್ಬನು ಹೇಗೆ ಬೇಕಾದ್ರೂ ಧರಿಸಿ ಕುಣಿದರೂ ಇದು ಮಿಸುಕೋದಿಲ್ಲ. ಹಾಗೆಂದ ಮೇಲೆ ಈ ರೀತಿಯ ನಾಜೂಕಿನ ಕೈಚಳಕಕ್ಕೆ ನಾವೆಲ್ಲ ಶಹಬ್ಬಾಸ್ ಎನ್ನಲೇಬೇಕು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ