ಉತ್ತರ ಕನ್ನಡ: ಜನಸಂದಣಿ ಮಧ್ಯೆ ಕುಣಿಯುತ್ತಾ, ಕುಣಿಸುತ್ತಾ ಎಂಟ್ರಿ ಕೊಡೋ ಭಯಂಕರ ವೇಷ. ಹಿಂದೆ ಹಗ್ಗ ಹಿಡಿದು ವೇಷಧಾರಿಯನ್ನ(Bedara Vesha) ನಿಯಂತ್ರಿಸೋ ಇಬ್ಬರ ಕಾಲಾಳುಗಳು. ಸುತ್ತುವರಿದು 'ಓಯ್.. ಓಯ್!' ಎಂದು ಹುರಿದುಂಬಿಸೋ ಯುವಕರು. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡದ (Uttara Kannada News) ಶಿರಸಿಯ ಹೋಳಿ ಹುಣ್ಣಿಮೆ (Holi 2023) ಸಂಭ್ರಮದಲ್ಲಿ.
ಬೇಡರ ವೇಷದ ಅಬ್ಬರ
ಮುಖದಲ್ಲಿ ವಿವಿಧ ಬಣ್ಣಗಳ ಚಿತ್ತಾರ, ಅದಕ್ಕೆ ರೌದ್ರತೆ ನೀಡೋ ಕೆಂಪು ಬಣ್ಣ, ದಪ್ಪ ಮೀಸೆ, ಕೊಂಬು ಹೊಂದಿರೋ ಕಿರೀಟ, ಕಿರೀಟಕ್ಕೆ ಶೋಭೆ ನೀಡೋ ನವಿಲುಗರಿ, ಮೇಲಿಂದ ಕೆಳಕ್ಕೆ ಸಂಪೂರ್ಣ ಕೆಂಪು ಬಣ್ಣದ ಧಿರಿಸು, ಕೈಯಲ್ಲಿ ಖಡ್ಗ, ಬೆನ್ನ ಹಿಂದೆ ನವಿಲುಗರಿಗಳ ಪ್ರಭಾವಳಿ! ಹೀಗೆ ಬೇಡರ ವೇಷವು ಅತ್ಯಂತ ಆಕರ್ಷಣೀಯವಾಗಿಯೂ, ರೌದ್ರ ರಮಣೀಯವಾಗಿಯೂ ಕಣ್ಮನ ಸೆಳೆಯುತ್ತೆ.
ರೌದ್ರ ನರ್ತನ
ಪ್ರತೀ ಎರಡು ವರ್ಷಗಳಿಗೊಮ್ಮೆ ಕಾಣ ಸಿಗೋ ಈ ಬೇಡರ ಕುಣಿತವನ್ನ ಕಾಣಲು ಬೇರೆ ಬೇರೆ ಜಿಲ್ಲೆ, ಹೊರ ರಾಜ್ಯಗಳಿಂದಲೂ ಜನ ಆಗಮಿಸ್ತಾರೆ. ತಮಟೆಯ ಭರ್ಜರಿ ಸದ್ದಿಗೆ ದೊಡ್ಡ ದೊಡ್ಡ ಹೆಜ್ಜೆ ಹಾಕಿಕೊಂಡು ಖಡ್ಗ ಬೀಸೋ ಈ ವೇಷಧಾರಿಯ ಹಿಂದೆ ಇಬ್ಬರು ಹಗ್ಗದಿಂದ ಹಿಡಿದುಕೊಂಡು ಒಂದೇ ರೀತಿಯ ಹೆಜ್ಜೆ ಹಾಕ್ಕೊಂಡು ರಸ್ತೆಯಿಡೀ ಸಾಗುತ್ತಾರೆ. ಈ ವೇಷಧಾರಿಗಳ ರೌದ್ರತೆ, ಅವರು ಹಾಕೋ ಕೇಕೆ, ತಮಟೆಯ ಸದ್ದು ಜನರನ್ನು ಕೂಡಾ ಹುಚ್ಚೆಬ್ಬಿಸುತ್ತದಲ್ಲದೇ, ವೇಷಧಾರಿಗಳ ಜತೆಗೆ ಭರ್ಜರಿ ಸ್ಟೆಪ್ ಹಾಕುವಂತೆ ಮಾಡುತ್ತದೆ.
ಇದನ್ನೂ ಓದಿ: Uttara Kannada: ಕ್ಲಾಸ್ ಬೋರಾದ್ರೆ ಕುಟೀರಕ್ಕೆ ಬರುವ ವಿದ್ಯಾರ್ಥಿಗಳು! ಇದು ಉತ್ತರ ಕನ್ನಡದ ಈ ಶಾಲೆಯ ಸ್ಪೆಷಲ್
ನಾಲ್ಕು ದಿನಗಳ ಸಂಭ್ರಮ
ಒಂದು ವರ್ಷ ಶಿರಸಿಯ ಮಾರಿಕಾಂಬೆಯ ಜಾತ್ರೆ ವೈಭವವಾದರೆ ಮರು ವರ್ಷ ಈ ಜಾನಪದ ಕಲೆ ಮೇಳೈಸುತ್ತದೆ. ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ `ವೇಷಧಾರಿ'ಯ ದೇಹ, ಮನಸ್ಸು ಬೇಡರ ಕುಣಿತಕ್ಕೆ ಒಗ್ಗಿಕೊಳ್ಳಲು ಕೆಲವಷ್ಟು ಸಾಂಪ್ರದಾಯಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.
ಇದನ್ನೂ ಓದಿ: Uttara Kannada: ಜಿಲೇಬಿ ಮಾರಿ ಶಾಲೆ ಕಟ್ಟಿದ ಸಾಹಸಿ! ಶಿಕ್ಷಣ ಕ್ರಾಂತಿ ಮಾಡಿದ ಅಡುಗೆ ಭಟ್ಟರು!
ಹೀಗೆ ನಾಲ್ಕು ದಿನಗಳ ಕಾಲ ರಾತ್ರಿಯಿಡೀ ಬೇಡರ ಕುಣಿತ ಶಿರಸಿಯ ವಿವಿಧ ಭಾಗಗಳ ಓಣಿ, ಗಲ್ಲಿಗಳಿಂದ ಹೊರಬರುವುದನ್ನು ನೋಡುತ್ತಿದ್ದಂತೇ ಜನರು ರೋಮಾಂಚಿತಗೊಳ್ಳುತ್ತಾರೆ. ಒಟ್ಟಿನಲ್ಲಿ ಬೇಡರ ಕುಣಿತ ಶಿರಸಿಯಲ್ಲಿ ಸಂಭ್ರಮ, ಸಡಗರದಿಂದ ಕುಣಿದು ಕುಪ್ಪಳಿಸುವಂತೆ ಮಾಡುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ