ಉತ್ತರ ಕನ್ನಡ: ರಕ್ಕಸರ ಅಬ್ಬರ, ದುಷ್ಟರ ಸಂಹಾರ ಮಾಡುವ ದೇವಿ, ರಾಮ ಲಕ್ಷ್ಮಣರನ್ನ ಎತ್ತಿ ಹಿಡಿದ ಆಂಜನೇಯ, ಕಾಂತಾರ ಕಂಬಳದ ಕೋಣ, ಜೊತೆಗೊಂದಿಷ್ಟು ಮನರಂಜನಾ ನೃತ್ಯಗಳು. ಹೀಗೆ ಒಂದನ್ನೊಂದು ಮೀರಿಸುವಂತಹ ಟ್ಯಾಬ್ಲೋಗಳು ರಸ್ತೆಯುದ್ದಕ್ಕೂ ಕಣ್ಮನ ಸೆಳೆಯಿತು ಒಂದೊಂದು ಬಗೆಯ ವೇಷ. ಉತ್ತರ ಕನ್ನಡದ (Uttara Kannada News) ಜನರಿಗಂತೂ ಒಂದಕ್ಕಿಂತ ಇನ್ನೊಂದು ಅಚ್ಚುಮೆಚ್ಚು. ಅಂದಹಾಗೆ ಇದೆಲ್ಲ ಯಾವ್ ಖುಷಿಗೆ ಅಂತೀರ? ಆ ಕುತೂಹಲಕ್ಕೆ ಈ ಸ್ಟೋರಿ ನೋಡಿ.
ವಿಜೃಂಭಣೆಯ ಮೆರವಣಿಗೆ
ಇದು ಉತ್ತರ ಕನ್ನಡದ ಅಂಕೋಲಾದ ಬಡಗೇರಿ ಹಾಲಕ್ಕಿ ಸಮುದಾಯದ ಜನರ ಸಂಭ್ರಮ. ತಮ್ಮಲ್ಲಿ ಅಡಗಿರುವ ಕಲಾ ನೈಪುಣ್ಯತೆಯಿಂದ ವಾರಗಟ್ಟಲೇ ಪರಿಶ್ರಮ ಪಟ್ಟು ಹಗರಣ ಹಾಕುವ ಅಂಕೋಲಾದ ಒಂದು ಪುಟ್ಟ ಹಳ್ಳಿಯ ಜನರ ಸಡಗರ ಈ ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತೆ. ಈ ಬಾರಿಯಂತೂ ಇನ್ನಷ್ಟು ವೈಭವದ ಛದ್ಮವೇಷಗಳು ಕಣ್ಣು ಕೋರೈಸಿದವು.
ಮನರಂಜನೆಯ ಅದ್ಧೂರಿತನ
ದೇವಾದಿ ದೇವತೆಗಳು, ದುಷ್ಟ ಸಂಹಾರ, ಕಾಂತಾರ ಸಿನೆಮಾದ ಕಂಬಳ ಓಟ, ಆರ್ಆರ್ಆರ್ ಸಿನಿಮಾದ ಕೋಮರಂಭೀಮ, ಸಮುದ್ರ ಮಂಥನ, ರಾಮ ಲಕ್ಷ್ಮಣರ ಎತ್ತಿ ಹಿಡಿದ ಆಂಜನೇಯ, ಸೈನಿಕರ ರಕ್ಷಣಾ ಕಾರ್ಯಾಚರಣೆ ಹೀಗೆ ಧರ್ಮ, ಆಧ್ಯಾತ್ಮ, ಮನೋರಂಜನೆ ಜೊತೆಗೆ ದೇಶ ಭಕ್ತಿ ಇಮ್ಮಡಿಗೊಳಿಸುವ ವಿಶಿಷ್ಟ ವೇಷಗಳು ಕಂಡುಬಂದವು.
ಅಂಕೋಲಾದ ಬಡಗೇರಿ ಹಾಲಕ್ಕಿ ಸಮುದಾಯದ ಪ್ರಮುಖ ದೇವರು ಬೇಟೆಬೀರ. ಈ ದೇವರಿಗೆ ಹಗರಣದ ಮೂಲಕ ಕಲಾಸೇವೆ ಕೊಡುವುದು ಇಲ್ಲಿನ ಜನಪದರ ಸಂಪ್ರದಾಯ. ಹೀಗಾಗಿ ಕಾಲಕಾಲಕ್ಕೂ ಈ ರೀತಿ ಅದ್ದೂರಿ ವೇಷಗಳು ರಂಗೆದ್ದು ಕಳೆ ಹೆಚ್ಚಿಸುತ್ತವೆ. ಒಂದೊಂದು ಪಾತ್ರಗಳು ವಾಹನದ ಮೂಲಕ ಸಾಗಿಬರುತ್ತಿದ್ದರೆ ಜನ ಹೋಯ್ ಎಂದು ಕಿರುಚಿ ಪ್ರೋತ್ಸಾಹಿಸಿದರು.
ಇದನ್ನೂ ಓದಿ: Uttara Kannada: ಕಾರ್ ಓಡಿಸುವ ಮುನ್ನ ಈ ಯಂತ್ರದೊಳಗೆ ಕುಳಿತು ನೋಡಿ!
ಕಲಾ ನೈಪುಣ್ಯತೆ
ಬರೀ ಕೃಷಿ ಹಾಗೂ ಕೂಲಿಯನ್ನೇ ನೆಚ್ಚಿಕೊಂಡ ಈ ಜನ ತಮ್ಮ ಕಷ್ಟದಲ್ಲೂ ಹಬ್ಬ ಹಾಗೂ ಸಂಭ್ರಮವನ್ನು ಮರೆಯುವುದಿಲ್ಲ. ತಮ್ಮ ಕಲಾ ನೈಪುಣ್ಯತೆಯಿಂದಲೇ ಇಲ್ಲಿ ಜನ ಲಭ್ಯವಿರುವ ಪರಿಕರಗಳನ್ನು ಅನುಕೂಲಕರವಾಗಿ ಬಳಸಿಕೊಂಡಿದ್ದಾರೆ.
ಇದನ್ನೂ ಓದಿ: Uttara Kannada: ಇವರಿಗೆ ಆಕಾಶವೇ ಬಂಡವಾಳ, ಕಗ್ಗಾಡ ಹಳ್ಳಿಯಲ್ಲಿದೆ 40 ಲಕ್ಷದ ಆಸ್ಟ್ರೋ ಫಾರ್ಮ್!
ಒಟ್ಟಿನಲ್ಲಿ ಬಡಗೇರಿ ಹಾಲಕ್ಕಿ ಸಮುದಾಯದ ಜನರ ಈ ವೈಶಿಷ್ಟ್ಯಪೂರ್ಣ ಟ್ಯಾಬ್ಲೋ ಗ್ರಾಮದಲ್ಲಿ ನಾಡಹಬ್ಬದ ಸಂಭ್ರಮ ಮನೆ ಮಾಡುವಂತೆ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ