ಉತ್ತರ ಕನ್ನಡ: ನೋಡೋದಕ್ಕೆ ಸುಂದರವಾದ ದ್ವೀಪ. ಸುತ್ತಲೂ ಶಾಂತವಾಗಿ ಹರಿಯುವ ನದಿಯ ನಡುವೆ ಇದು ಶಕ್ತಿಯ ತಾಣ. ಹವ್ಯಕರ ಮೂಲ ನೆಲೆ, ಕದಂಬರ ಕಾಲದ ಜೊತೆಗೆ ರೋಚಕ ಇತಿಹಾಸ ಹೊಂದಿರೋ ಹಸಿರ ಭೂಮಿಯಿದು. ಶರಾವತಿ ನದಿ ಒಡಲಲ್ಲಿ ಅಡಗಿದ ಈ ಭೂಮಿ ಹತ್ತು ಹಲವು ಕಾರಣಗಳಿಗಾಗಿ ವೈಶಿಷ್ಟ್ಯತೆ ಹೊಂದಿದೆ. ಅದೇನು ಅಂತೀರ? ನೀವೇ ನೋಡಿ ಈ ಸ್ಟೋರೀಲಿ!
ಯೆಸ್. ಇದು ಉತ್ತರ ಕನ್ನಡ ಹೊನ್ನಾವರ ತಾಲೂಕಿನ ದ್ವೀಪ ಪ್ರದೇಶ "ಹೈಗುಂದ". ಹವ್ಯಕುಂಡ ಎಂಬುದರ ಪ್ರಾಕೃತ ರೂಪ. ವಿಶೇಷ ಅಂದ್ರೆ ಇದು ಮಾನವ ನಿರ್ಮಿತ ದ್ವೀಪ. ಈಗ ಹೋಗ್ಬೇಕೆಂದ್ರೆ ಉದ್ದನೆಯ ಸೇತುವೆಯ ಸಂಪರ್ಕವಿದೆ. ಇದ್ರ ಮೂಲ ನೋಡುತ್ತಾ ಹೋದ್ರೆ ಕದಂಬರ ಕಾಲ ತಲುಪುತ್ತೆ. ಅದೆಷ್ಟೋ ರಾಜ ಮನೆತನ ಗುರಿಯಾಗಿದ್ರಿಂದಲೇ ಈ ಭುಮಿಯನ್ನ ದ್ವೀಪವಾಗಿ ಬದಲಾಯಿಸಲಾಗಿದೆ.
ಹವ್ಯಕ ಬ್ರಾಹ್ಮಣರ ಮೂಲ!
ಕದಂಬ ರಾಜ ಮಯೂರವರ್ಮನು ತನ್ನ ಯಾಜ್ಞಿಕ ಕ್ರಿಯೆಗಳ ಕರ್ತವ್ಯಕ್ಕಾಗಿ ನೈನಿತಾಲ್ ನಿಂದ 32 ಬ್ರಾಹ್ಮಣ ಕುಟುಂಬಗಳನ್ನು ಇಲ್ಲಿಗೆ ಕರೆಯಿಸಿಕೊಳ್ಳುತ್ತಾನೆ. ಅಲ್ಲಿಂದ ಕರೆದುಕೊಂಡ ಬಂದ ವಿವಿಧ ಗೋತ್ರದ ಬ್ರಾಹ್ಮಣರು ಇಲ್ಲಿಗೆ ಮೊದಲು ಬಂದು ಅಶ್ವಮೇಧ ಯಾಗ, ರಾಜಸೂಯ ಮತ್ತು ವಾಜಪೇಯಿ ಯಾಗಗಳನ್ನು ನಡೆಸಿದ್ದರಂತೆ. ಅದಕ್ಕೆ ಕುರುಹಾಗಿ ಇನ್ನೂ ಕೂಡ ಇಟ್ಟಿಗೆಗಳನ್ನು ಇಲ್ಲಿಡಲಾಗಿದ್ದು, ಅದಕ್ಕೆ ಹವ್ಯ-ಕವ್ಯ ಎಂದೇ ಕರೆಯಲಾಗುತ್ತವೆ. ಅದುವೇ ಹವ್ಯಕ ಬ್ರಾಹ್ಮಣರ ಮೂಲ ಅನ್ನೋದಾಗಿ ನಂಬಲಾಗಿದೆ.
ತೇಲಾಡುವ ದ್ವೀಪ!
ಪಲ್ಲವರು ಸೇರಿದಂತೆ ಅನೇಕ ಪಂಗಡಗಳ ಆಕ್ರಮಣವನ್ನು ಎದುರಿಸುತ್ತಿದ್ದ ಕದಂಬ ರಾಜ ಮಯೂರವರ್ಮ ಶರಾವತಿ ನದಿಯ ದಡದಲ್ಲಿದ್ದ ಈ ಭಾಗವನ್ನು ನಾಲ್ಕೂ ಕಡೆ ಕೊರೆಯಿಸಿ ದ್ವೀಪವನ್ನಾಗಿಸಿದನಂತೆ. ಆಗ ಪ್ರತಿಷ್ಠಾಪಿಸಿದ ದುರ್ಗಾಂಬಿಕಾ ದೇಗುಲ ಹಾಗೂ ಕಲ್ಯಾಣಿ ಎಲ್ಲವೂ ಹಾಗೇ ಇವೆ ಹೊರಗಿನ ರಚನೆ ಮಾತ್ರ ನವೀಕರಣಗೊಂಡಿದೆ.
ಇದನ್ನೂ ಓದಿ:Success Story: ಹಳ್ಳಿಯಿಂದಲೇ ಲಕ್ಷ ಲಕ್ಷ ಸಂಪಾದಿಸೋ ಮಹಿಳೆ, ಇವ್ರನ್ನ ನೋಡಿ ಕಲಿಯಬೇಕು ಕಣ್ರೀ!
ಅಷ್ಟೇ ಅಲ್ಲದೇ, ಆಗಿಂದ ಇಲ್ಲಿ ಬರುವ ಗಾಳಿಗೆ ಮನುಷ್ಯರು ಕೂಡ ತೇಲಿದ ಹಾಗೆ ಅನುಭವವಾಗುತ್ತದೆ. ಸುತ್ತಲೂ ನಾಲ್ಕು ಕಡೆಯ ನೀರಿನ ಮೇಲಿಂದ ತೇಲಿ ಬರುವ ತಂಗಾಳಿಗೆ ಒಂದು ಸಲ ತೇಲಾಡಿದ ಹಾಗೆ ಅನುಭವ ಪಡೆಯುವುದರಿಂದ ಈ ದ್ವೀಪವನ್ನು ತೇಲಾಡುವ ದ್ವೀಪ ಎನ್ನಲಾಗುತ್ತದೆ.
ಬೊಬ್ಬರ್ಯನ ಶಕ್ತಿ ತಾಣವೂ ಹೌದು!
ಬಳಿಕ ಇಲ್ಲಿಗೆ ಜೈನರ ಆಗಮನವಾಯಿತು. ಈ ಜಾಗಕ್ಕೆ ಕಾವಲುಗಾರನಾಗಿ ತುಳುನಾಡ ದೈವ ಬೊಬ್ಬರ್ಯ ಬಂದ ಅನ್ನೋ ಐತಿಹ್ಯವಿದೆ. ಈಗಲೂ ಸುಮಾರು 6 ಅಡಿ ಎತ್ತರದ ಮಾನವ ರೂಪದ ಬೊಬ್ಬರ್ಯ ವಿಗ್ರಹ ಇಲ್ಲಿದೆ.
ಇದನ್ನೂ ಓದಿ: Positive Story: ಸೈಕಲ್ ಸವಾರಿ ಮಾಡ್ತಾ ಊರಿಡೀ ಓಡಾಡುವ 74ರ ಅಜ್ಜಿ! ಇವರ ಜೀವನೋತ್ಸಾಹ ಎಲ್ರಿಗೂ ಮಾದರಿ
ಮನೆ ಕಟ್ಟೋದಾದ್ರೆ ಇಟ್ಟಿಗೆ ಬೇಡ!
ವಿಶೇಷ ಅಂದ್ರೆ ಈಗ ಇಲ್ಲಿ ಹವ್ಯಕರೊಂದೇ ಅಲ್ಲ, ಎಲ್ಲರೂ ಮನೆ ಕಟ್ಟಿಕೊಂಡು ಅನ್ಯೋನ್ಯವಾಗಿ ವಾಸಿಸುತ್ತಿದ್ದಾರೆ. ಇವರಿಗೆ ಇಲ್ಲಿ ಮನೆ ಕಟ್ಟುವಲ್ಲಿ ಇಟ್ಟಿಗೆಗಳೇ ಬೇಡ! ಕಾರಣ ಇಲ್ಲಿ ಭೂಮಿ ಹುದುಗಿದಲ್ಲೆಲ್ಲ ಇಟ್ಟಿಗೆ ಸಿಗುತ್ತದೆ. ಅವುಗಳನ್ನೇ ಬಳಸಿ ಸ್ಥಳೀಯ ಜನರು ಮನೆ ಕಟ್ಟಿಕೊಂಡಿದ್ದಾರೆ. ನೀವು ಊಹಿಸಲೂ ಸಾಧ್ಯವಾಗದಷ್ಟು ಯಜ್ಞಕುಂಡದ ರಚನೆಗಳು ಹಾಗೂ ಕದಂಬರ ಕಾಲದ ಇಟ್ಟಿಗೆಗಳು ನಿಮಗಿಲ್ಲಿ ಸಿಗುತ್ತವೆ.
ಹೀಗೆ ಬನ್ನಿ
ಒಟ್ಟಿನಲ್ಲಿ ಹವ್ಯಕರ ಮೂಲ ನೆಲೆ, ಶಕ್ತಿಯ ಆರಾಧನಾ ತಾಣ ನೋಡಬೇಕೆಂದರೆ ಹೊನ್ನಾವರ-ಗೇರುಸೊಪ್ಪ ಮಾರ್ಗವಾಗಿ ಬರಬೇಕು.. ಅಲ್ಲಿಂದ ಬಸ್ಸು ಏರಿ ಅಳ್ಳಂಕಿ ಬಳಿ ಇಳಿದು ನಡೆಯುತ್ತಾ ಎರಡು ಕಿಲೋಮೀಟರ್ ಸಾಗಿದ್ರೆ ಈ ತೇಲುವ ದ್ವೀಪ, ಹವ್ಯಕರ ಮೂಲ ನೆಲೆ, ಶಕ್ತಿಯ ಆರಾಧನಾ ತಾಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ