ಉತ್ತರ ಕನ್ನಡ: ಗ್ಯಾಸ್ ಅನಿಲದ ರೇಟ್ (Gas Cylinder Price) ಏರ್ತಿದ್ರೂ ಈ ಭಾಗದ ಮಂದಿಗೆ ಅದ್ರ ಟೆನ್ಶನ್ನೇ ಇಲ್ಲ. ಇವ್ರದ್ದು ಏನೇ ಇದ್ರು ಗೋಬರ್ ಗ್ಯಾಸೇ (Gobar Gas) ಮೂಲ. ಇಂತಹ ತುಟ್ಟಿ ಕಾಲದಲ್ಲಿ ತೊಟ್ಟಿಯಿಂದ ತಮ್ಮ ಹೊಟ್ಟೆಗೆ ಬೇಕಾದ ಆಹಾರ ತಯಾರಿಸಿಕೊಳ್ಳೋ ಸ್ಮಾರ್ಟ್ ಮಂದಿ ಇವರು. ಹಾಗಿದ್ರೆ ಗೋಬರ್ ಬಳಕೆ ಹೇಗೆ? ಲಾಭವೇನು ಅನ್ನೋದರ ಮಾಹಿತಿ ಕೊಡ್ತೀವಿ ನೋಡಿ.
ಗೋಬರ್ ಗ್ಯಾಸ್ಗೆ ಬೇಡಿಕೆ
ಉತ್ತರ ಕನ್ನಡದ ಕೆಲವೆಡೆ ಈಗಲೂ ಸಿಲಿಂಡರ್ ಗ್ಯಾಸ್ ಬಳಕೆಯೇ ಕಡಿಮೆ. ಅಂತಹದ್ದೇನಾದ್ರೂ ಇದ್ರೆ, ಅದು ಕೇವಲ ಶುಭ ಸಮಾರಂಭಗಳಿಗಷ್ಟೇ. ಅದರ ಹೊರತು ಕುಮಟಾದ ಕಲ್ಲಬ್ಬೆ, ಮುಸ್ಗಪ್ಪೆ, ಹೊಸಳ್ಳಿ, ಮೂರುರು ಕಡೆ ಶೇಕಡಾ 95 ರಷ್ಟು ಜನ ಗೋಬರ್ ಗ್ಯಾಸ್ ಬಳಸಿಯೇ ಅಡುಗೆ ಮಾಡ್ತಾರೆ. ಅಂದಹಾಗೆ, ಇದೆಲ್ಲಾ ಕಳೆದ ಒಂದು ವರ್ಷದ ಹಿಂದೆ ಆದ ಬದಲಾವಣೆ.
ಮನೆ ಮನೆಗೆ ಗೋಬರ್ ಗ್ಯಾಸ್
ಕುಮಟಾದ ರಾಜೇಶ್ ಭಟ್ ಹಾಗೂ ದಿನೇಶ್ ಭಟ್ ಎಂಬ ಸ್ನೇಹಿತರು ತಮ್ಮ ಸ್ವ ಆಸಕ್ತಿಯಿಂದ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಬದಲಾವಣೆಗೆ ಮುನ್ನುಡಿ ಬರೆದರು. ಗೌಡರ ಕೊಪ್ಪ ಭಾಗದ ಜನರ ಪ್ರಮುಖ ಆದಾಯವೇ ಹೈನುಗಾರಿಕೆ ಆಗಿತ್ತು. ಹೀಗಾಗಿ ಗೋಬರ್ ಗ್ಯಾಸ್ ಚೇಂಬರ್ ಗಳ ನಿರ್ಮಾಣ ಕಷ್ಟಸಾಧ್ಯವಾಗಲಿಲ್ಲ.
ಸ್ನೇಹಿತರ ಪರಿಶ್ರಮ
ರಾಜೇಶ್ ಭಟ್ ಹಾಗೂ ದಿನೇಶ್ ಭಟ್ ಸ್ನೇಹಿತರು 15,000 ರೂಪಾಯಿ ಒಳಗಾಗಿ ಪ್ರತಿ ಮನೆಗೂ ಸುಸಜ್ಜಿತವಾದ ಗೋಬರ್ ಗ್ಯಾಸ್ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾದರು. ಇವರಿಗೆ ಸ್ಥಳೀಯರ ಸಹಕಾರವೂ ಸಿಕ್ಕಿದ್ದು, ಕಾರ್ಯ ಸಾಧನೆಗೆ ಇನ್ನಷ್ಟು ಸುಲಭವಾಯಿತು.
ಹೀಗೆ ತಯಾರಾಗುತ್ತೆ ಗೋಬರ್
ಈ ಗೋಬರ್ ಗ್ಯಾಸ್ ನಲ್ಲಿ ಮೊದಲು ಐದರಿಂದ ಹತ್ತು ಆಕಳುಗಳ ಸಗಣಿಯನ್ನು ಒಟ್ಟು ಮಾಡಿ ಕಾಂಪೋಸ್ಟ್ ಮಾಡಲಾಗುತ್ತದೆ. ನಂತರ ಅದಕ್ಕೆ ನೀರನ್ನು ಸೇರಿಸಿ ಚೇಂಬರ್ ಗೆ ಹಾಕುತ್ತಾರೆ, ಅದಾದ ಮೇಲೆ ಗ್ಯಾಸ್ ನಲ್ಲಿ ಉಳಿದ ತ್ಯಾಜ್ಯವನ್ನು, ಹೊರಗಡೆ ಇರುವ ಒಣ ಎಲೆಗಳು ಹಾಗೂ ಕೊಳೆತ ಹಣ್ಣು-ತರಕಾರಿಗಳ ಮೇಲೆ ಸುರಿಯುತ್ತಾರೆ. ಹೀಗೆ ಸಿದ್ಧವಾಗುವ ಅನಿಲವನ್ನ 24 ಗಂಟೆಗಳೂ ಉಪಯೋಗಿಸಲು ಸಾಧ್ಯವಾಗುತ್ತೆ.
ಇದನ್ನೂ ಓದಿ: Uttara Kannada: ಸ್ನಾತಕೋತ್ತರ ಪದವಿಯಲ್ಲಿ ಚಿನ್ನ ಗಳಿಸಿದ ಗೌಳಿ ಸಮುದಾಯದ ಮೊದಲ ಮಹಿಳೆ!
ಗೋಬರ್ ಗ್ಯಾಸ್ ಬಳಕೆ ಹೆಚ್ಚಲು ಇದೇ ಕಾರಣ!
ಈಗಾಗಲೇ ಈ ಊರಿನಲ್ಲಿ ಶೇಕಡಾ 95ರಷ್ಟು ಜನ ಗೋಬರ್ ಗ್ಯಾಸ್ ಅವಲಂಬಿಸಿದ್ದಾರೆ. ಸಿದ್ದಾಪುರದಿಂದ ಕುಮಟಾಗೆ ಬರುವಾಗ ಗಡಿಭಾಗದಲ್ಲಿ ಕಾಣಿಸಿಕೊಳ್ಳುವ ಊರುಗಳಿವು. ಸಂಪರ್ಕ ವ್ಯವಸ್ಥೆ ಕಮ್ಮಿ ಹಾಗೂ ರೋಡುಗಳು ಚೆನ್ನಾಗಿದ್ದರೂ ಕೂಡ ಹಳ್ಳಿ ಜನಗಳಿಗೆ ಕೆಲವೊಬ್ಬರಿಗೆ ವ್ಯವಸ್ಥಿತವಾಗಿ ಅಡುಗೆ ಅನಿಲ ಪೂರೈಕೆ ಆಗುತ್ತಿರಲಿಲ್ಲ. ಅಷ್ಟೇ ಅಲ್ಲದೇ, ಗ್ಯಾಸ್ ಬುಕ್ಕಿಂಗ್ ಮುಂತಾದವು ಮೊಬೈಲ್ ಮೂಲಕ ಆದ ಮೇಲೆ ನೆಟ್ವರ್ಕ್ ಇಲ್ಲದ ಕೆಲವು ಪ್ರದೇಶದ ಜನರು ತುಂಬಾ ಕಷ್ಟಪಟ್ಟರು. ಆ ಕಷ್ಟಕ್ಕೆ ಪರಿಹಾರವಾಗಿ ಒದಗಿದ್ದೇ ಈ ಗೋಬರ್ ಗ್ಯಾಸ್.
ಇದನ್ನೂ ಓದಿ: Uttara Kannada: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಎರಡೂ ಕೈಲಿ ಡ್ರಾಯಿಂಗ್ ಮಾಡುವ ಹಳ್ಳಿ ಶಾಲೆ ವಿದ್ಯಾರ್ಥಿ!
ಒಟ್ಟಿನಲ್ಲಿ ಊರಿನ ಯುವಕರು ಕಂಡುಕೊಂಡ ಐಡಿಯಾ, ಸಿಲಿಂಡರ್ ಬೆಲೆ ಏರಿಕೆ ಸಮಯದಲ್ಲಿ ಈ ಭಾಗದ ಜನರ ಜೇಬಿಗೆ ಕತ್ತರಿ ಬೀಳುತ್ತಿರುವುದನ್ನ ತಪ್ಪಿಸಿದಂತಾಗಿದೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ