ಕಾರವಾರ: ಜೈಲು ಸರಳುಗಳ ಹಿಂದೆ ನಿಂತಿರೋ ಮಹಿಳೆ. ಹೊರಗಡೆ ಬ್ರಿಟಿಷ್ ಕಾಲದ ಪೊಲೀಸ್. ಕಂಕುಳಲ್ಲೇ ಮಗುವನ್ನಿರಿಸಿಕೊಂಡಿದ್ರೂ ಬಿಡದ ಹೋರಾಟದ ಛಲ. ಹೌದು, ಇದೆಲ್ಲವೂ ಅದೇನೋ ಕಥೆಯನ್ನ ಹೇಳ್ತಿದೆಯಲ್ಲ ಅಂತ ಕುತೂಹಲ ಮೂಡಿರಬಹುದು. ಬ್ರಿಟೀಷರ (Freedom Fighting) ವಿರುದ್ಧ ಹೋರಾಡಿದ ವೀರ ವನಿತೆಯರ ಸ್ಮಾರಕದ ಇಂದಿನ ಪರಿಸ್ಥಿತಿಯಿದು. ನಿಜ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ (Uttara Kannada Siddapur) ಮಾವಿನಗುಂಡಿಯಲ್ಲಿರೋ (Mavinagundi) ಈ ಸ್ಮಾರಕ ಕರುನಾಡಿನ ಮಹಿಳಾ ಹೋರಾಟಗಾರ್ತಿಯರ ಸಾಕ್ಷ್ಯ ಚಿತ್ರದಂತಿರಬೇಕಿತ್ತು.
ಆದರೆ ನಿರ್ಲಕ್ಷ್ಯದಿಂದ ಇಂದು ಇಂತಹ ಸ್ಥಿತಿ ತಲುಪಿದೆ. ಚಿಕ್ಕ ಜಾಗದಲ್ಲಿ ಚೊಕ್ಕದಾಗಿ ಇರಬೇಕಿದ್ದ ಈ ಸ್ಮಾರಕವು ಇನ್ನೇನು ಪಾಳು ಬಿದ್ದಿದೆ ಅನ್ನೋ ಸ್ಥಿತಿ ತಲುಪಿದೆ. ಹತ್ತಿರದಲ್ಲೇ ಇರೋ ಈಶ್ವರನ ಶಿರದಲ್ಲಿರೋ ಗಂಗೆಯೂ ಬತ್ತಿ ಹೋಗಿದ್ದಾಳೆ. ಪ್ರವಾಸಿ ತಾಣವಾಗಬೇಕಿದ್ದ ಈ ಸ್ಮಾರಕ ನೋಡ್ತಿದ್ರೆ ಅಯ್ಯಯ್ಯೋ ಎನಿಸುವಂತಾಗಿದೆ.
ಸ್ಮಾರಕದ ಹಿಂದಿದೆ ರೋಚಕ ಕಥೆ
ಈ ಮಹಿಳಾ ಸ್ಮಾರಕದ ಹಿಂದೆಯೂ ಒಂದು ರೋಚಕ ಕಥೆಯಿದೆ. ಅದು 1932ರ ಕಾಲಘಟ್ಟ. ಸಿದ್ದಾಪುರ ಎಂಬ ಪುಟ್ಟ ಮಲೆನಾಡಿಗೂ ಬ್ರಿಟಿಷ್ ಕಬಂಧಬಾಹು ಹೊಕ್ಕಿದ್ದ ಸಮಯ. ಇಂತಹ ಸಮಯದಲ್ಲಿ ಕಾರಕೂನ ಹಾಗೂ ಹವಾಲ್ದಾರರು ಜನರ ಆದಾಯ ಮೂಲವಾದ ಹೈನುಗಾರಿಕೆ ಮೇಲೂ ತೆರಿಗೆ ವಿಧಿಸಿದ್ರಂತೆ. ಇದನ್ನ ವಿರೋಧಿಸಿ ಮೊದಲ ಬಾರಿಗೆ ವೀರ ವನಿತೆಯರು ಉಪವಾಸ ಸತ್ಯಾಗ್ರಹ ಮಾಡಿದ್ದರು.
ಇದನ್ನೂ ಓದಿ: Kamakshi Temple: ಕುದಿಯುವ ಎಣ್ಣೆಯಿಂದ ವಡೆ ತೆಗೆಯೋ ಉತ್ತರ ಕನ್ನಡದ ಭಕ್ತರು!
ಈ ಹೋರಾಟಗಾರರಂತೂ ಅಜರಾಮರ
ತ್ಯಾಗಲಿ ಭುವನೇಶ್ವರಿ, ಕಲ್ಲಹಳ್ಳಿ ಲಕ್ಷ್ಮಮ್ಮ, ಮಹದೇವಮ್ಮ, ಗಣಪಮ್ಮ, ದುಗ್ಗಮ್ಮ, ಭಾಗೀರಥಮ್ಮ, ಸೀತಮ್ಮ, ದೇವಮ್ಮ ಮುಂತಾದವರು ಹೋರಾಟ ನಡೆಸಿದ್ರು. ಕೆಲವರು ಕಂಕುಳಲ್ಲಿ ಮಗುವನ್ನಿರಿಸಿ ಹೋರಾಟ ಮಾಡಿದ್ರೆ, ಇನ್ನು ಕೆಲವರು ಬಾಣಂತಿ, ಗರ್ಭಿಣಿಯರೂ ಇದ್ದರು.
ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ
ಅಂದು ಮಹಿಳೆಯರು ನಡೆಸಿದ್ದ ಹೋರಾಟದ ದೃಶ್ಯಕಾವ್ಯವೇ ಈ ಸ್ಮಾರಕ. ಆದ್ರೆ ದುರಂತ ಅಂದ್ರೆ ಕಣ್ಣಿಗೆ ಕಟ್ಟುವಂತೆ ಕಥೆ ಹೇಳಬೇಕಿದ್ದ ಸ್ಮಾರಕದ ಕಲಾಕೃತಿಗಳು ಒಂದೊಂದಾಗಿಯೇ ನಾಮಾವಶೇಷವಾಗುವ ಆತಂಕದಲ್ಲಿದೆ. ಹೀಗಾಗಿ ಜಿಲ್ಲೆಯ ಪ್ರಥಮ ಮಹಿಳಾ ಹೋರಾಟಗಾರರ ಸ್ಮಾರಕವನ್ನ ಸಂರಕ್ಷಿಸಿ ಪ್ರವಾಸಿ ತಾಣವಾಗಿಸಬೇಕು ಅನ್ನೋದೆ ಸಾರ್ವಜನಿಕರ ಕಳಕಳಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ