Akrama-Sakrama: ಮತ್ತೆ ಶುರುವಾಗಿದೆ ಅರಣ್ಯ ಅತಿಕ್ರಮಣದಾರರಿಗೆ ಆತಂಕ, ಅಕ್ರಮ-ಸಕ್ರಮಕ್ಕಾಗಿ ನಡೆಯುತ್ತಿದೆ ಹೋರಾಟ
ಕಳೆದ ನಾಲ್ಕೈದು ದಶಕಗಳಿಗಿಂತ ಪೂರ್ವದಲ್ಲಿ ಕುಟುಂಬಗಳು ಅರಣ್ಯಗುಂಟ ಪ್ರದೇಶಗಳಲ್ಲಿ ಜಮೀನು, ಮನೆಗಳನ್ನ ಮಾಡಿಕೊಂಡು ವಾಸಿಸುತ್ತಿವೆ. ಆದ್ರೆ ಅರಣ್ಯ ಇಲಾಖೆ ಈ ಕುಟುಂಬಗಳನ್ನ ಒಕ್ಕಲೆಬ್ಬಿಸುವ ನಿರ್ಧಾರ ಮಾಡಿರೋದು ಆತಂಕಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ: ರಾಜ್ಯದ ಗ್ರಾಮೀಣ (Rural) ಭಾಗದಲ್ಲಿರುವ ಅರಣ್ಯವಾಸಿಗಳ ಆತಂಕ ಇನ್ನೂ ಮುಂದುವರಿದಿದೆ. ಅನಾದಿ ಕಾಲದಿಂದ ವಾಸ ಮಾಡುತ್ತಿರುವ ಮನೆ (House), ತಲೆತಲಾಂತರದಿಂದ ಬೇಸಾಯ (Agriculture) ಮಾಡಿಕೊಂಡು ಬಂದ ಜಮೀನು (Land) ಯಾವಾಗ ಅರಣ್ಯ ಇಲಾಖೆ (Forest Department) ತೆರವುಗೊಳಿಸುತ್ತದೆಯೋ ಎಂಬ ಭಯದಲ್ಲಿದ್ದಾರೆ. ಉತ್ತರಕನ್ನಡ (Uttara Kannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಬೊರಳ್ಳಿ, ಅಚವೆ ಸೇರಿದಂತೆ ಇತರ ಭಾಗದ ಪರಿಶಿಷ್ಟ ಕುಟುಂಬಗಳು ಈಗ ಕಂಗಾಲಾಗಿವೆ.
ಅರಣ್ಯ ಇಲಾಖೆಯಿಂದಾಗಿ ಶುರುವಾಯ್ತು ಆತಂಕ
ಉತ್ತರಕನ್ನಡ ಜಿಲ್ಲೆಯ ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಆತಂಕ ಶುರುವಾಗಿದೆ. ತಲೆತಲಾಂತರದಿಂದ ಸಾಗುವಳಿ ಮಾಡುವ ಜಮೀನು ಕೈ ತಪ್ಪುವ ಭಯ ಕಣ್ಣ ಮುಂದೆ ಕಾಣುವಂತಾಗಿದ್ದು ಅಕ್ರಮ ಸಕ್ರಮ ಕಾಯ್ದೆಯಡಿ ಹಕ್ಕುಪತ್ರ ನೀಡುವಂತೆ ಅತಿಕ್ರಮಣದಾರರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ..
ಎಷ್ಟು ವರ್ಷದಿಂದ ಇವರ ಸಮಸ್ಯೆ
ಜಿಲ್ಲೆಯ ಹಲವು ಭಾಗದಲ್ಲಿ ಅರಣ್ಯ ವಾಸಿಗಳ ಆತಂಕ ಇನ್ನೂ ಕೂಡ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊರಳ್ಳಿ, ಅಚವೆ, ಕರಿಕಲ್, ಕುಂಟಗಣಿ ಸೇರಿದಂತೆ ಇತರೆ ಭಾಗಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಅರಣ್ಯವಾಸಿ ಕುಟುಂಬಗಳಿವೆ.
ಕಳೆದ ನಾಲ್ಕೈದು ದಶಕಗಳಿಗಿಂತ ಪೂರ್ವದಲ್ಲಿ ಕುಟುಂಬಗಳು ಅರಣ್ಯಗುಂಟ ಪ್ರದೇಶಗಳಲ್ಲಿ ಜಮೀನು, ಮನೆಗಳನ್ನ ಮಾಡಿಕೊಂಡು ವಾಸಿಸುತ್ತಿವೆ. ಆದ್ರೆ ಅರಣ್ಯ ಇಲಾಖೆ ಈ ಕುಟುಂಬಗಳನ್ನ ಒಕ್ಕಲೆಬ್ಬಿಸುವ ನಿರ್ಧಾರ ಮಾಡಿರೋದು ಆತಂಕಕ್ಕೆ ಕಾರಣವಾಗಿದೆ.
ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಿಲ್ಲ
ಹಲವು ದಶಕಗಳಿಂದ ತಮ್ಮ ತಮ್ಮ ಮನೆಯ ಆಸುಪಾಸಿನಲ್ಲಿ ಅಡಿಕೆ, ತೆಂಗು, ಬಾಳೆ ಸೇರಿ ಇತರೆ ಹಣ್ಣುಹಂಪಲ ಗಿಡಗಳನ್ನ ಬೆಳೆದುಕೊಂಡಿದ್ದಾರೆ. ಕೃಷಿ ಮಾಡಿಕೊಂಡೇ ಬಹುತೇಕ ಕುಟುಂಬಗಳು ಜೀವನ ಮಾಡುತ್ತಿವೆ. 1978 ರ ಪೂರ್ವದಲ್ಲಿ ಇಲ್ಲಿ ವಾಸವಾಗಿರುವ ಕುಟುಂಬಗಳು ಅಕ್ರಮ ಸಕ್ರಮದಡಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮನೆಗಳನ್ನ ಸರಿ ಪಡಿಸಿಕೊಳ್ಳಲು ಕೂಡ ಸಮಸ್ಯೆ
ತಮಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿದ್ದರು. ಈ ಹಿಂದೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾದಯಾತ್ರೆ ಮೂಲಕ ಹೋರಾಟ ಮಾಡಿದ್ದರು. ಆದ್ರೆ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ. ಹೀಗಾಗಿ ದುರಸ್ತಿಗೆ ಬಂದ ಮನೆ ರಿಪೇರಿ ಮಾಡಿಕೊಳ್ಳಲು ಆಗುತ್ತಿಲ್ಲ. ಮಳೆಗಾಲದಲ್ಲಿ ಮನೆಯ ಚಾವಣೆ ಸೋರಿ ಇದ್ದ ಸೂರಿನಲ್ಲಿ ಉಳಿದುಕೊಳ್ಳಲಾಗದ ಪರಿಸ್ಥಿತಿ ಎಂದು ಅಳಲು ತೋಡಿಕೊಳ್ತಾರೆ.
ಚುನಾವಣೆ ಬಂದಾಗ ಮಾತ್ರ ಬರುವ ನಾಯಕರು
ಇದೇ ಗ್ರಾಮದಲ್ಲಿರುವ ಎಸ್ಟಿ ಕುಟುಂಬಗಳಿಗೆ ಸರ್ಕಾರ ಹಿಂದೆ ಹಕ್ಕು ಪತ್ರ ನೀಡಿದೆ. ಆದ್ರೆ ಪರಿಶಿಷ್ಟ ಜಾತಿಯವರಾದ ನಮಗೆ ಹಕ್ಕು ಪತ್ರ ಇದುವರೆಗೆ ನೀಡುವ ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಇವರದ್ದಾಗಿದೆ. ಚುನಾವಣೆ ಬಂದಾಗ ಮಾತ್ರ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಶ್ವಾಸನೆ ನೀಡ್ತಾರೆ. ಆದ್ರೆ ಬಳಿಕ ನಮ್ಮನ್ನ ನೋಡಲ್ಲ ಎಂದು ನಾಗರಿಕರು ಅಸಮಧಾನ ವ್ಯಕ್ತಪಡಿಸ್ತಾರೆ.
ಒಟ್ಟಿನಲ್ಲಿ ಹಲವು ವರ್ಷಗಳಿಂದ ಅರಣ್ಯಭೂಮಿಯಲ್ಲಿ ವಾಸಿಸುತ್ತಾ ಬಂದಿರುವ ಕುಟುಂಬಗಳ ಗೋಳು ಹೆಚ್ಚಾಗಿದೆ. ತಮ್ಮ ಜಮೀನಿನ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿದ್ರು, ಅವರ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲ. ಯಾವಾಗ ಅರಣ್ಯಾಧಿಕಾರಿಗಳು ತಮ್ಮನ್ನ ಒಕ್ಕಲೆಬ್ಬಿಸ್ತಾರೆಂಬ ಆತಂಕದಿಂದಲೇ ಇವರು ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಸರ್ಕಾರ ಅರಣ್ಯವಾಸಿಗಳಿಗೆ ಜೀವಿಸಲು ಅವಕಾಶ ಮಾಡಿಕೊಡಬೇಕಾಗಿದೆ.