Uttara Kannada: ಆಸಾದಿಗಳೆಂಬ ಜನಪದ ಅರ್ಚಕರು! ದೇವಿ ಕೃಪೆ ಸಿಗೋಕೆ ಇವ್ರೇ ಬೇಕು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಜಾನಪದ ಹಿನ್ನೆಲೆಯಿಂದಾಗಿ ಈ ಆಸಾದಿ ಜನಾಂಗವು ಇಂದಿಗೂ ಉನ್ನತ ಸ್ಥಾನ ಪಡೆದಿದ್ದು, ದೇವಿಯ ಸೇವೆಯಲ್ಲಿ ನಿರತವಾಗಿದೆ.

 • Share this:

  ಉತ್ತರ ಕನ್ನಡ: ಅಕ್ಕಿ ರಾಶಿ, ಅದರ ಮೇಲೆ ರಚಿಸಲಾದ ಮುದ್ರೆಗಳು. ಚಕ್ರದ ಆಕಾರದ ಮಂಟಪ, ಪ್ರತಿಯೊಂದು ಖಾನೆಯಲ್ಲೂ ಒಂದೊಂದು ತೆಂಗಿನಕಾಯಿ, ಪೇಟ, ತಾಂಬೂಲ, ಅದರ ಮೇಲೆ ಮಡಿಕೆಗಳು. ಮೇಲೊಂದು ದೀಪ, ಪೀಠಸ್ಥಳಾದ ದೇವಿಯನ್ನೇ ಹೋಲುವ ಒಂದು ಸರ್ಪಾಕಾರದ ಮಂತ್ರದಂಡ. ಬಂದವರೆಲ್ಲರೂ ಕೈ ಮುಗಿದು ಪಡೆಯುತ್ತಿದ್ದಾರೆ ಮಂತ್ರದಂಡದ ಆಶೀರ್ವಾದ. ಹೀಗೆ ರಂಗವನ್ನ ರಚಿಸಿ ಬಂದರವನ್ನ ಹರಸುತ್ತಿದ್ದಾರೆ ನೋಡಿ ಕರ್ನಾಟಕದ (Karnataka Fold Culture) ಹಳೆಯ ಜಾನಪದ ಅರ್ಚಕರು (Fold Priest) .


  ಹೌದು, ಈ ರಂಗದ ವಿಧಿ ವಿಧಾನವನ್ನ ನೆರವೇರಿಸುವವರು ಆಸಾದಿಗಳು. ಇವರು ರಾಜ್ಯದ ಜಾನಪದ ಅರ್ಚಕರು ಅನ್ನೋ ಹೆಸರನ್ನ ಪಡೆದವರು. ಅಷ್ಟೇ ಅಲ್ಲ, ಇವರನ್ನ ಗ್ರಾಮ ದೇವತೆಯ ಮಕ್ಕಳೆಂದೇ ಭಾವಿಸುತ್ತಾರೆ. ಹಾಗಾಗಿ ಜಾತಿ ವಿಚಾರಕ್ಕೆ ಬಂದ್ರೆ ಇವ್ರು ಕೆಳವರ್ಗಕ್ಕೆ ಸೇರಿದ್ರೂ, ಮಾಡೋ ವೃತ್ತಿಯಲ್ಲಿ ಮಾತ್ರ ಉನ್ನತ ಸ್ಥಾನವಿದೆ.


  ಆಸಾದಿಗಳ ಮೂಲಕವೇ ಆಶೀರ್ವಾದ!
  ಈ ರಂಗದ ಬಳಿ ಬಂದವರು ಕಡ್ಡಾಯವಾಗಿ ದೇವಿಯ ಆಶೀರ್ವಾದ ಪಡೆಯಬೇಕೆಂದರೆ ಈ ಆಸಾದಿಗಳ ಮೂಲಕವೇ ಆಶೀರ್ವಾದ ಪಡೆಯಬೇಕಾಗುತ್ತದೆ. ಈ ಆಸಾದಿಗಳಿಗೊಂದು ಹಿನ್ನೆಲೆಯಿದೆ. ಹಾಗಾಗಿಯೇ ನೋಡಿ ಇವರನ್ನ ಜಾನಪದ ಅರ್ಚಕರು, ಗ್ರಾಮ ದೇವತೆಯ ಮಕ್ಕಳೆಂದೇ ಕರೆಯಲಾಗುತ್ತೆ.
  ಪುರಾಣದ ಐತಿಹ್ಯವೇನು?
  ಒಂದಾನೊಂದು ಕಾಲದಲ್ಲಿ ಕೆಳವರ್ಗದ ಯುವಕನೊಬ್ಬ ಬ್ರಾಹ್ಮಣ ಕನ್ಯೆ ಮಾರಿಕಾಂಬೆಗೆ ತಾನೂ ಕೂಡ ಬ್ರಾಹ್ಮಣ ಎಂದು ನಂಬಿಸಿ ಮದುವೆಯಾಗುತ್ತಾನೆ. ಅದಕ್ಕೆ ತಕ್ಕಂತೆ ಯುವಕ ಮಾಂಸಹಾರ, ಮದ್ಯಪಾನದಿಂದ ದೂರವಿದ್ದು ಬ್ರಾಹ್ಮಣನಂತೆ ಶಾಸ್ತ್ರಗಳನ್ನು ಕಲಿತು ಯುವತಿ ಜೊತೆಗಿರುವನು. ಆದ್ರೆ ಅದ್ಯಾವಾಗ ಸಂತಾನ ಆಗುತ್ತೋ, ದಿನ ಕಳೆಯುತ್ತಾ ಹೋದಂತೆ ಈತ ಹೊರಗಡೆ ಹೋಗಿ ಮಾಂಸ, ಮದ್ಯ ತಿನ್ನೋ ವಿಚಾರ ತನ್ನ ಮಕ್ಕಳಿಂದಾಗಿ ತಾಯಿಗೆ ತಿಳಿಯುತ್ತದೆ. ಆಗ ಕುಪಿತಳಾಗುವ ಈಕೆ, ಯುವಕ ಮಾಡಿದ ಮೋಸಕ್ಕೆ ಸಿಟ್ಟಾಗಿ ಕುಡುಗೋಲು ತೆಗೆದುಕೊಂಡು ಊರೆಲ್ಲ ಅವನನ್ನ ಅಟ್ಟಾಡಿಸುತ್ತಾಳೆ.
  ಪತಿಯನ್ನು ಕಡಿದ ಕೊಂದವಳೇ ದುರ್ಗೆಯಂತೆ!
  ಆತ ತನ್ನ ತಂತ್ರದ ಪ್ರಭಾವದಿಂದ ಕೋಳಿ, ಕುರಿ ಮೂಲಕ ಹಾದು ಹೋಗುವವನಾದರೂ, ಕೋಣದ ಒಳಗೆ ನುಸುಳಿ ಹೊರ ಬರುವ ಹೊತ್ತಿಗೆ ಆಕೆಯು ಕೋಣದ ರುಂಡ ಕಡಿದು ಬಿಡುತ್ತಾಳೆ. ಹೀಗೆ ತನ್ನ ಪತಿಯನ್ನ ಕಡಿದು ಕೊಂದ ಈಕೆಯನ್ನ ಜನರು ದುರ್ಗೆ ಎಂದು ಕೈಮುಗಿಯುತ್ತಾರೆ. ಮುಂದೆ ದೇವಿಯ ಸ್ಥಾನವನ್ನೂ ಪಡೆಯುತ್ತಾಳೆ.


  ಇದನ್ನೂ ಓದಿ: Karwar: ಮೊಟ್ಟೆ ಇಡುವ ಸಮಯ ಬದಲಾಯಿಸಿದ ಕಡಲಾಮೆ!


  ಅಷ್ಟೇ ಅಲ್ದೇ, ಆಕೆ ಕೂಡಾ ಸಹಗಮನ ಮಾಡಿ ತನ್ನ ಮಕ್ಕಳನ್ನ ಜನರ ಕೈಗೊಪ್ಪಿಸುತ್ತಾಳೆ. ಹಾಗೆ ಬಂದ ಆ ಮಕ್ಕಳ ಆಸಾದಿಗಳು. ಹಾಗಾಗಿ ಇವರನ್ನ ದೇವತೆಯ ಮಕ್ಕಳೆಂದು ಕರೆಯಲಾಗುತ್ತದೆ. ಹೀಗಾಗಿ ದೇವಿಯ ಪ್ರತಿ ಕಾರ್ಯಕ್ಕೂ ಇವರು ಇರಲೇಬೇಕು.


  ಇದನ್ನೂ ಓದಿ: Mundgod Marikamba Jatre: ತೇರನೇರಿ ಬಂದ ದ್ಯಾಮವ್ವ! ಮುಂಡಗೋಡಿನ ಮಾರಿಕಾಂಬಾ ಜಾತ್ರೆಯ ವೈಭವವಿದು


  ಕೊನೆಯ ದಿನ ಮಾತಂಗಿ ಗುಡಿಸಿಲಿಗೆ ಬೆಂಕಿಕೊಟ್ಟು ಸಾಂಕೇತಿಕ ಬಲಿ ನೆರವೇರಿಸಿ ದೇವಿಯ ಅಶೌಚ ಕಾರ್ಯ ಮುಗಿಯುವರೆಗೂ ಎಲ್ಲಾ ಕಾರ್ಯ ಇವರು ಮಾಡುತ್ತಾರೆ. ಹೀಗಾಗಿ ದಲಿತ ಸಮಾಜದಲ್ಲಿ ಹುಟ್ಟಿದರೂ ಪುರೋಹಿತರ ಸ್ಥಾನ ಇವರಿಗೆ ಲಭಿಸಿದೆ. ಒಟ್ಟಿನಲ್ಲಿ ಜಾನಪದ ಹಿನ್ನೆಲೆಯಿಂದಾಗಿ ಈ ಆಸಾದಿ ಜನಾಂಗವು ಇಂದಿಗೂ ಉನ್ನತ ಸ್ಥಾನ ಪಡೆದಿದ್ದು, ದೇವಿಯ ಸೇವೆಯಲ್ಲಿ ನಿರತವಾಗಿದೆ.


  ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

  Published by:ಗುರುಗಣೇಶ ಡಬ್ಗುಳಿ
  First published: